
ಮುಖ್ಯಮಂತ್ರಿ ಸಿದ್ದರಾಮಯ್ಯ
ಆರ್‌ಎಸ್‌ಎಸ್‌ಗೆ ನಿರ್ಬಂಧ ವಿಚಾರ; ಯಾವುದೇ ಸಂಘ ಸಂಸ್ಥೆ ಟಾರ್ಗೆಟ್ ಮಾಡಿಲ್ಲ- ಸಿಎಂ ಸಿದ್ದರಾಮಯ್ಯ
ಕುಂದಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ಬಗ್ಗೆ ಗೊಂದಲ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹಿಂದೆ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದ ಆದೇಶದನ್ವಯ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಶಾಲಾ ಕಾಲೇಜು ಮೈದಾನ, ದೇವಸ್ಥಾನ ಆವರಣಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಕಡ್ಡಾಯಗೊಳಿಸಿರುವ ವಿಚಾರದಲ್ಲಿ ಯಾವುದೇ ಸಂಘ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಂದಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ಬಗ್ಗೆ ಎದ್ದಿರುವ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶವನ್ನೇ ನಾವು ಜಾರಿಗೆ ತಂದಿದ್ದೇವೆ. ಬಿಜೆಪಿ ಸರ್ಕಾರ ಹೊರಡಿಸಿದ್ದ ಈ ಆದೇಶಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ನಾವು ಆದೇಶದಲ್ಲಿ ಯಾವುದೇ ಸಂಘ ಸಂಸ್ಥೆಯನ್ನು ಗುರಿ ಮಾಡಿಲ್ಲ. ಬಿಜೆಪಿ ಜನರ ಹಿತ ಚಿಂತನೆ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದೆ. ಈ ವಿಷಯದಲ್ಲಿ ಸಮಾಜದ ಶಾಂತಿಭಂಗವಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಗುತ್ತಿಗೆದಾರರ ಬಾಕಿ- ಸಚಿವರಿಂದ ಕ್ರಮ
ಗುತ್ತಿಗೆದಾರರ ಬಾಕಿ ಹಣ ಪಾವತಿಯಾಗದಿದ್ದರೆ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಗುತ್ತಿಗೆದಾರರು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮೈಸೂರಿನ ಉದ್ಯೋಗ ಮೇಳ ಯಶಸ್ವಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆಯ ಉದ್ಯೋಗ ಮೇಳ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.