ಸನಾತನಿಗಳ ಸಹವಾಸ ಬೇಡ: ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸಂದೇಶ
x

'ಸನಾತನಿಗಳ ಸಹವಾಸ ಬೇಡ': ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸಂದೇಶ

"ನಾನು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟವನು. ಈ ಕಾರಣಕ್ಕಾಗಿಯೇ ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ ಎಂದು ಸಿಎಂ ಹೇಳಿದರು.


Click the Play button to hear this message in audio format

"ಸಮಾಜದ ಬದಲಾವಣೆಯನ್ನು ವಿರೋಧಿಸುವ ಸನಾತನಿಗಳ ಸಹವಾಸ ಬೇಡ, ಸಮಾಜದ ಪರವಾಗಿ ಚಿಂತಿಸುವವರ ಜೊತೆ ನಿಮ್ಮ ಒಡನಾಟ ಇರಲಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ನೇರ ಹಾಗೂ ಖಡಕ್ ಸಂದೇಶ ರವಾನಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಅಂಬೇಡ್ಕರ್ ಅಧ್ಯಯನ ಕೇಂದ್ರದ ರಜತ ಮಹೋತ್ಸವದಲ್ಲಿ 'ವಿಶ್ವಜ್ಞಾನಿ ಅಂಬೇಡ್ಕರ್ ಸಭಾ ಭವನ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಪ್ರತಿಗಾಮಿ ಶಕ್ತಿಗಳ ಬಗ್ಗೆ ಯುವಜನರು ಎಚ್ಚರದಿಂದ ಇರಬೇಕೆಂದು ಕರೆ ನೀಡಿದರು.

ಸನಾತನಿ ಮನಸ್ಥಿತಿಗೆ ಸಾಕ್ಷಿ

ತಮ್ಮ ಮಾತಿಗೆ ಇತ್ತೀಚಿನ ಘಟನೆಯನ್ನು ಉದಾಹರಿಸಿದ ಸಿಎಂ, "ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಸನಾತನಿ ಮನಸ್ಥಿತಿಯ ವ್ಯಕ್ತಿಯೊಬ್ಬ ಶೂ ಎಸೆದಿರುವುದು, ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸನಾತನಿಗಳು ಇನ್ನೂ ಇದ್ದಾರೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿ. ಈ ಘಟನೆಯನ್ನು ಕೇವಲ ದಲಿತರಷ್ಟೇ ಅಲ್ಲ, ಪ್ರತಿಯೊಬ್ಬರೂ ಒಕ್ಕೊರಲಿನಿಂದ ಖಂಡಿಸಬೇಕು. ಆಗ ಮಾತ್ರ ಸಮಾಜವು ಬದಲಾವಣೆಯ ಹಾದಿಯಲ್ಲಿದೆ ಎಂದು ನಾವು ಭಾವಿಸಬಹುದು," ಎಂದು ಹೇಳಿದರು. ಇಂತಹ ಸಮಾಜ ವಿರೋಧಿ ಮನಸ್ಥಿತಿಗಳ ಬಗ್ಗೆಯೇ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

ಆರ್‌ಎಸ್‌ಎಸ್, ಸಂಘ ಪರಿವಾರದ ಗುರಿ

ಸನಾತನಿ ಸಿದ್ಧಾಂತವನ್ನು ಸಂಘ ಪರಿವಾರದೊಂದಿಗೆ ತಳಕು ಹಾಕಿದ ಸಿದ್ದರಾಮಯ್ಯ, "ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ಅಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, 'ನನ್ನನ್ನು ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ' ಎಂದು ಅಂಬೇಡ್ಕರ್ ಅವರೇ ಬರೆದಿಟ್ಟಿದ್ದಾರೆ. ಇಂತಹ ಸುಳ್ಳುಗಳನ್ನು ಸಮಾಜದ ಮುಂದೆ ಇಟ್ಟು ಸನಾತನಿಗಳ ಅಜೆಂಡಾವನ್ನು ಬಯಲುಗೊಳಿಸಬೇಕು," ಎಂದು ಕರೆ ನೀಡಿದರು.

ವೈಚಾರಿಕತೆಯ ದಾರಿ ಹಿಡಿಯಿರಿ

"ನಾನು ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟವನು. ಹೀಗಾಗಿಯೇ ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಯಬೇಕು. ವಿಜ್ಞಾನವನ್ನು ಓದಿಯೂ ಮೂಢನಂಬಿಕೆಗಳನ್ನು ಆಚರಿಸುವ ಜಾಯಮಾನ ನಮ್ಮದಾಗಬಾರದು. ವಿದ್ಯೆ ಯಾರೊಬ್ಬರ ಸ್ವತ್ತಲ್ಲ, ಸಮಾನ ಅವಕಾಶ ಸಿಕ್ಕಾಗ ಎಲ್ಲರೂ ಜ್ಞಾನಿಗಳಾಗುತ್ತಾರೆ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗಾಗಿ ಬಳಸಿದಂತೆ, ನೀವೂ ಸಮಾಜದ ಪರವಾಗಿ ನಿಲ್ಲಬೇಕು," ಎಂದು ಸಿಎಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Read More
Next Story