Speed ​​up maize procurement and expedite railway land acquisition: CM Siddaramaiah instructs
x

ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮೆಕ್ಕೆಜೋಳ ಖರೀದಿ ಚುರುಕುಗೊಳಿಸಿ, ರೈಲ್ವೆ ಭೂಸ್ವಾಧೀನ ತ್ವರಿತಗೊಳಿಸಿ: ಸಿಎಂ ಸೂಚನೆ

2024-25ರಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಗಾಗಿ 1,890 ಕೋಟಿ ರೂಪಾಯಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, 250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್‌ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು, ಇನ್ನೂ 76,430 ಮೆಟ್ರಿಕ್‌ ಟನ್‌ ಖರೀದಿಸಲು ಬಾಕಿಯಿದೆ. ಒಟ್ಟು 93,782 ಮೆ.ಟನ್‌ ಮೆಕ್ಕೆಜೋಳ ಖರೀದಿಗೆ ಇಂಡೆಂಟ್‌ ಪಡೆಯಲಾಗಿದ್ದು, ನಿಗದಿತ ಪ್ರಮಾಣದ ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ(ಡಿ.29) ನಡೆದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೈಲ್ವೇ ಯೋಜನೆಗಳ ಭೂಸ್ವಾಧಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎಥೆನಾಲ್ ಖರೀದಿ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಮನವಿಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಮೆಕ್ಕೆಜೋಳ ಬೆಳೆಗಾರರ ಕುರಿತು ನಕಾರಾತ್ಮಕ ಧೋರಣೆಯನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಇಂಡೆಂಟ್‌ ನಿಗದಿಪಡಿಸಿರುವ ಪ್ರಮಾಣದಷ್ಟು ಮೆಕ್ಕೆಜೋಳ ಖರೀದಿಗೆ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದರು.

2023-24 ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ 25 ಕೋಟಿ ರೂಪಾಯಿಯಂತೆ ಒಟ್ಟು 3,510 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ಈಗಾಗಲೇ 2,040 ಕೋಟಿ ರೂಪಾಯಿ ಮೊತ್ತದಲ್ಲಿ ಶೇ.58ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, 920 ಕೋಟಿ ರೂಪಾಯಿ ವೆಚ್ಚ ಭರಿಸಲಾಗಿದೆ. ಇನ್ನೂ 1,205 ಕೋಟಿ ರೂಪಾಯಿ ಬಿಡುಗಡೆ ಮಾಡಲು ಬೆಳಗಾವಿ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಆದೇಶ ನೀಡಲಾಗಿದೆ. ಅನುಷ್ಠಾನ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಅನುದಾನ ಪಾವತಿ ಡಿಸಿ ಹೊಣೆ

2024-25ರಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಗಾಗಿ 1,890 ಕೋಟಿ ರೂಪಾಯಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, 250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ 8,666.50 ಕೋಟಿ ಅನುಮೋದನೆ ನೀಡಲಾಗಿದ್ದು, ಈಗಾಗಲೇ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಿ, ಅನುದಾನ ಪಾವತಿಸುವುದು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಭೂಸ್ವಾಧೀನ ತ್ವರಿತಗೊಳಿಸಿ

ರೈಲ್ವೇ ಕಾಮಗಾರಿಗಳಿಗೆ ಬಾಕಿಯಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕುಡಚಿ-ಬಾಗಲಕೋಟೆ, ತುಮಕೂರು-ದಾವಣಗೆರೆ, ಬೇಲೂರು-ಹಾಸನ, ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ-ಬೆಳಗಾವಿ ರೈಲ್ವೇ ಮಾರ್ಗಗಳ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗಾಗಿ ಕೈಗೊಳ್ಳಲು ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ತಿಳಿಸಿದರು.

ರೈಲ್ವೆ ಕಾಮಗಾರಿಗಳಿಗೆ ವೇಗ

ರಾಜ್ಯದಲ್ಲಿ ಅನುಮೋದನೆಗೊಂಡಿರುವ ಎಲ್ಲಾ ರೈಲು ಯೋಜನೆಗಳಿಗೆ ಒಟ್ಟು 16,554 ಎಕರೆ ಭೂಮಿ ಅವಶ್ಯಕತೆ ಇರುತ್ತದೆ. ಇದರ ಪೈಕಿ ಶೇ. 84 ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನೂ ಅಂದಾಜು 2,685 ಎಕರೆಗಳಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ರಾಜ್ಯದಲ್ಲಿ ಪ್ರಗತಿಯಲ್ಲಿರುವ ವಿವಿಧ ರೇಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ನಿರ್ಮಾಣ ಕಾಮಗಾರಿಗಳಿಗೆ 2,581 ರೂ. ಕೋಟಿ ರೂಪಾಯಿ , ಭೂಸ್ವಾಧೀನ ಪ್ರಕ್ರಿಯೆಗೆ 2,950.22 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು 6 ವಿಮಾನ ನಿಲ್ದಾಣಗಳ ಕಾಮಗಾರಿಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ. ಹಾಸನ ವಿಮಾನ ನಿಲ್ದಾಣ ಭೂಸ್ವಾಧೀನ ಪರಿಹಾರವನ್ನು ರೈತರಿಗೆ ಆದಷ್ಟು ಬೇಗನೆ ವಿತರಿಸಬೇಕು. ಎಲ್ಲಾ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Read More
Next Story