Good news for maize growers; Order to increase purchase quantity from each farmer to 50 quintals
x

ಮೆಕ್ಕೆಜೋಳದ ರಾಶಿ

ಮೆಕ್ಕೆಜೋಳ ಬೆಳೆಗಾರರಿಗೆ ಸಿಹಿ ಸುದ್ದಿ; ಪ್ರತೀ ರೈತರಿಂದ ಖರೀದಿಸುವ ಪ್ರಮಾಣ 50 ಕ್ವಿಂಟಲ್‌ಗೆ ಏರಿಸಿ ಆದೇಶ

ಡಿಸ್ಟಿಲರಿಗಳ ಸಮೀಪದಲ್ಲಿರುವ ಪಿಎಸಿಎ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಮೂಲಕ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ತಿದ್ದುಪಡಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


Click the Play button to hear this message in audio format

ರಾಜ್ಯ ಸರ್ಕಾರ ಮೆಕ್ಕೆ ಜೋಳ ಬೆಳೆಯುವ ರೈತರಿಗೆ ಗುಡ್ ನ್ಯೂಸ್ ನೀಡಿದೆ ಪ್ರತಿ ರೈತರಿಂದ ಖರೀದಿಸುವ ಮೆಕ್ಕೆಜೋಳದ ಗರಿಷ್ಠ ಮಿತಿಯನ್ನು 20 ಕ್ವಿಂಟಲ್‌ನಿಂದ 50 ಕ್ವಿಂಟಲ್‌ಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.

ಪ್ರತಿ ಎಕರೆಗೆ 12 ಕ್ವಿಂಟಲ್ ಲೆಕ್ಕದಲ್ಲಿ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳವನ್ನು ಪ್ರತೀ ಕ್ವಿಂಟಲ್‌ಗೆ 2,400 ರೂ. ಬೆಂಬಲ ಬೆಲೆಯಂತೆ ಖರೀದಿಸಲು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಇದೀಗ ಈ ಮಿತಿಯನ್ನು 50 ಕ್ವಿಂಟಲ್‌ಗೆ ಏರಿಕೆ ಮಾಡುವ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ.

FRUITS ತಂತ್ರಾಂಶದಲ್ಲಿ ನೋಂದಾಯಿತವಾಗಿರುವ ರೈತರ ಜಮೀನು ವಿಸ್ತೀರ್ಣದ ಆಧಾರದ ಮೇಲೆಯೇ ಈ ಗರಿಷ್ಠ ಮಿತಿ ನಿಗದಿಪಡಿಸಲಾಗುತ್ತದೆ. ಜೊತೆಗೆ ಡಿಸ್ಟಿಲರಿಗಳ ಸಮೀಪದಲ್ಲಿರುವ ಪಿಎಸಿಎ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಮೂಲಕ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ತಿದ್ದುಪಡಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ರೈತರು ಹಾಗೂ ರೈತ ಸಂಘಟನೆಗಳ ಮನವಿ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಾವಿರಾರು ಮೆಕ್ಕೆಜೋಳ ಬೆಳೆಗಾರ ರೈತರಿಗೆ ನೇರ ಲಾಭವಾಗಲಿದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿಯಿಂದ ರಕ್ಷಣೆ ದೊರೆಯಲಿದೆ ಎಂದು ರೈತ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ಈ ತಿದ್ದುಪಡಿ ಆದೇಶವನ್ನು ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಜಾರಿಗೆ ತರಬೇಕೆಂದು ಸರ್ಕಾರ ಸೂಚಿಸಿದೆ.

ರೈತರಿಂದ ನೇರ ಖರೀದಿಗೆ ಸೂಚಿಸಿದ್ದ ಸಿಎಂ

ಎಥೆನಾಲ್ ಉತ್ಪಾದನೆಗೆ ಅಗತ್ಯವಿರುವ ಮೆಕ್ಕೆಜೋಳವನ್ನು ನಿಗದಿಪಡಿಸಿದ ಕೋಟಾ ಅನ್ವಯ ರೈತರಿಂದಲೇ ಖರೀದಿಸಿ ಅವರ ನೆರವಿಗೆ ಬರಬೇಕು ಎಂದು ಮದ್ಯಸಾರ ತಯಾರಿಕಾ ಘಟಕಗಳ ಮಾಲೀಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ, ಯಾವ ಡಿಸ್ಟಿಲರಿಗಳು ಎಷ್ಟು ಪ್ರಮಾಣದ ಮೆಕ್ಕೆಜೋಳ ಖರೀದಿಸಬೇಕು ಎಂದು ಕೃಷಿ ಮಾರುಕಟ್ಟೆ ಇಲಾಖೆ ಈಗಾಗಲೇ ಪಟ್ಟಿ ನೀಡಿದೆ. ಅದರಂತೆ ಡಿಸ್ಟಿಲರಿಗಳು ನಡೆದುಕೊಳ್ಳಬೇಕು. ಡಿಸ್ಟಿಲರಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ನೇರವಾಗಿ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದರೆ, ಅಂತಹ ಘಟಕಗಳಿಗೆ ಜಿಲ್ಲಾಡಳಿತದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

100 ಕ್ವಿಂಟಲ್‌ ಖರೀದಿಗೆ ಆಗ್ರಹ

ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದು, ಅದರಲ್ಲಿ ಕನಿಷ್ಠ 25 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಬೇಕು. ಪ್ರತಿಯೊಂದು ತಾಲೂಕಿನಲ್ಲಿಯೂ ಖರೀದಿ ಕೇಂದ್ರ ತೆಗೆಯಬೇಕು. ಕೇಂದ್ರಗಳೂ ಸರಿಯಾಗಿ ಆರಂಭವಾಗಿಲ್ಲ. ಹಾವೇರಿಯಲ್ಲಿ ಇನ್ನೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ರೈತರು ರೊಚ್ಚಿಗೆದ್ದು ರಸ್ತೆ ತಡೆ ಮಾಡುತ್ತಿದ್ದಾರೆ. ಈಗಲಾದರೂ ಸರ್ಕಾರ ಕಣ್ಣು ತೆರೆದು ಪ್ರತಿಯೊಬ್ಬ ರೈತರಿಂದ ಕನಿಷ್ಠ ನೂರು ಕ್ವಿಂಟಲ್ ಮೆಕ್ಕೆ ಜೋಳ ಖರೀದಿ ಮಾಡಬೇಕು. ಎಂಎಸ್‌ಪಿಗೆ ಹೆಚ್ಚುವರಿ ಬೆಲೆಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಮಾಜಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

Read More
Next Story