
ಸಾಧನಾ ಸಮಾವೇಶಕ್ಕೆ ಸಿದ್ದಗೊಂಡಿರು ವೇದಿಕೆ
ಮೈಸೂರು ಸಾಧನಾ ಸಮಾವೇಶ | ತವರು ಜಿಲ್ಲೆಯಲ್ಲಿ ಸಿಎಂ ಶಕ್ತಿ ಪ್ರದರ್ಶನ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದ ನಂತರ ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಸಮಾವೇಶ ಇದಾಗಿದೆ.
'ಐದು ವರ್ಷವೂ ನಾನೇ ಪೂರ್ಣಾವಧಿ ಸಿಎಂ' ಎಂದು ಹೇಳಿಕೆ ನೀಡಿದ ಬಳಿಕ ತವರು ಜಿಲ್ಲೆ ಮೈಸೂರಿನಲ್ಲಿ ಸರ್ಕಾರದ ಸಾಧನಾ ಸಮಾವೇಶದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನ ನಡೆಸಿದ್ದಾರೆ.
ನವೆಂಬರ್‌ನಲ್ಲಿ ಸಿಎಂ ಕುರ್ಚಿ ಬದಲಾವಣೆ ಊಹಾಪೋಹಗಳ ನಂತರ ಸಿಎಂ ಸಿದ್ದರಾಮಯ್ಯ ದಿನೇ ದಿನೇ ತಮ್ಮ ರಾಜಕೀಯ ಪಟ್ಟುಗಳನ್ನು ಬದಲಿಸುತ್ತಿದ್ದಾರೆ. ನಾನೇ ಪೂರ್ಣಾವಧಿ ಮುಖ್ಯಮಂತ್ರಿ, ಸದ್ಯಕ್ಕೆ ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಹೇಳಿದ ಬಳಿಕ ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಸಮಾವೇಶ ಇದಾಗಿದೆ.
ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜಕೀಯ ವಿರೋಧಿಗಳಿಗೆ ಸಮಾವೇಶದ ಮೂಲಕ ಸಂದೇಶ ರವಾನೆ ಮಾಡುವ ಸಾಧ್ಯತೆ ಇದೆ.
ಸಾಧನಾ ಸಮಾವೇಶ ಮೂಲಕ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರ ಈ ಶಕ್ತಿ ಪ್ರದರ್ಶನದ ಸಮಾವೇಶ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಸಮಾವೇಶದ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಆಪ್ತ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರಿಗೆ ವಹಿಸಲಾಗಿದೆ.
ಹಳೆ ಮೈಸೂರು ಭಾಗದ ಮಂಡ್ಯ, ಚಾಮರಾಜನಗರ ಭಾಗದ ಶಾಸಕರು, ಮಾಜಿ ಶಾಸಕರು, ನಿಗಮಮಂಡಳಿ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಸೇರಿದಂತೆ ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ವೇದಿಕೆ ಮುಂಭಾಗ 200 ಮೀಟರ್ ಉದ್ದದ ರ್ಯಾಂಪ್ ನಿರ್ಮಿಸಲಾಗಿದೆ. ಈ ರ್ಯಾಂಪ್ ಮೂಲಕ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರ ಬಳಿ ತೆರಳುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2,600 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಇದು ಶಕ್ತಿ ಪ್ರದರ್ಶನ ಅಲ್ಲ
ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಬಳಿ ಹಣವಿಲ್ಲ ಎಂದು ಬಿಜಿಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ಗಳನ್ನು ಒಂದೇ ನಗರಕ್ಕೆ ಬಿಡುಗಡೆ ಮಾಡುತ್ತಿರುವುದನ್ನು ಜನರಿಗೆ ತಿಳಿಸಲು ಸಾಧನಾ ಸಮಾವೇಶ ಮಾಡುತ್ತಿದ್ದೇವೆ ಹೊರತು ಶಕ್ತಿ ಪ್ರದರ್ಶನವಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.