
ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಹಾಗೂ ಅವರ ತರಬೇತುದಾರರು
ಕಬಡ್ಡಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ರಾಜ್ಯದ ಧನಲಕ್ಷ್ಮಿ ಪೂಜಾರಿಗೆ ಸುವರ್ಣಸೌಧದಲ್ಲಿ ಸಿಎಂ ಅಭಿನಂದನೆ
ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ನಮ್ಮ ರಾಜ್ಯದ ಗ್ರಾಮೀಣ ಪ್ರತಿಭೆ ಧನಲಕ್ಷ್ಮಿ ಪೂಜಾರಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಪ್ರತಿಷ್ಠಿತ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ, ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯದ ಹೆಮ್ಮೆಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದ ಅಧಿವೇಶನದಲ್ಲಿ ವಿಶೇಷ ಗೌರವ ಸಲ್ಲಿಸಿದರು.
ಮಂಗಳವಾರದಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ವೀಕ್ಷಿಸಲು ಧನಲಕ್ಷ್ಮಿ ಪೂಜಾರಿ ಮತ್ತು ಅವರ ತರಬೇತುದಾರರು ಆಗಮಿಸಿದ್ದರು. ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದ ಇವರನ್ನು ಗಮನಿಸಿದ ಮುಖ್ಯಮಂತ್ರಿಗಳು, ಸದನದ ಗಮನ ಸೆಳೆದು ಇಬ್ಬರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಸಿಎಂ ಅಭಿನಂದನಾ ನುಡಿ
ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ನಮ್ಮ ರಾಜ್ಯದ ಗ್ರಾಮೀಣ ಪ್ರತಿಭೆ ಧನಲಕ್ಷ್ಮಿ ಪೂಜಾರಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಢಾಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡ ಚಿನ್ನ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದೆ. ಈ ತಂಡದಲ್ಲಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ಧನಲಕ್ಷ್ಮಿ ಅವರು ಆಡಿರುವುದು ಸಂತಸದ ಸಂಗತಿ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರದಿಂದ 5 ಲಕ್ಷ ಬಹುಮಾನ
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಸ್ಮರಿಸಿದ ಸಿಎಂ, "ಧನಲಕ್ಷ್ಮಿ ಅವರ ಪ್ರತಿಭೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈಗಾಗಲೇ ಅವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದೆ. ಮುಂದೆಯೂ ಇಂತಹ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ," ಎಂದು ಭರವಸೆ ನೀಡಿದರು. ಸಿಎಂ ಅವರ ಮಾತಿಗೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಮೇಜು ಕುಟ್ಟಿ ಆಟಗಾರ್ತಿಗೆ ಶುಭ ಕೋರಿದರು.
ಪಂದ್ಯಾವಳಿಯ ಯಾವಾಗ ನಡೆಯಿತು
ಇತ್ತೀಚೆಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ಕಬಡ್ಡಿ ತಂಡವು 'ವಿಶ್ವ ಚಾಂಪಿಯನ್' ಆಗಿ ಹೊರಹೊಮ್ಮಿತ್ತು.

