ಹೃದಯಾಘಾತ | ಕಬಡ್ಡಿ ಅಂಕಣದಲ್ಲೇ ಕುಸಿದು ಪ್ರಾಣಬಿಟ್ಟ ಯುವ ಆಟಗಾರ
ಎದೆ ನೋವಿನಿಂದ ಆಟದ ಅಂಕಣದಲ್ಲೇ ಕುಸಿದುಬಿದ್ದಿದ್ದ ಅವರನ್ನು ಸಹ ಆಟಗಾರರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಪ್ರೀತಂ ಕೊನೆಯುಸಿರೆಳೆದಿದ್ದರು.
ರಾಜ್ಯಮಟ್ಟದ ಕಬಡ್ಡಿ ಆಟಗಾರರೊಬ್ಬರು ಪಂದ್ಯಾವಳಿಯಲ್ಲಿ ಆಟ ಆಡುತ್ತಿರುವಾಗಲೇ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲದಲ್ಲಿ ನಡೆಯುತ್ತಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸದೃಢ ಕಾಯದ ಪ್ರೀತಂ ಶೆಟ್ಟಿ ಹೃದಯಾಘಾತಕ್ಕೆ ಬಲಿಯಾದ ಯುವಕ.
26ರ ಹರೆಯದ ಪ್ರೀತಂ ಶೆಟ್ಟಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುನಿಯಾಲು ಮುಟ್ಟುಪಾಡಿ ನಡುಮನೆ ಗ್ರಾಮದ ನಿವಾಸಿ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ನಾಗಮಂಗಲಕ್ಕೆ ತೆರಳಿದ್ದ ಅವರು, ಪಂದ್ಯಾವಳಿಯಲ್ಲಿ ಆಟವಾಡುತ್ತಿರುವಾಗ ದಿಢೀರ್ ಎದೆ ನೋವು ಕಾಣಿಸಿಕೊಂಡಿತ್ತು. ಎದೆ ನೋವಿನಿಂದ ಆಟದ ಅಂಕಣದಲ್ಲೇ ಕುಸಿದುಬಿದ್ದಿದ್ದ ಅವರನ್ನು ಸಹ ಆಟಗಾರರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಪ್ರೀತಂ ಕೊನೆಯುಸಿರೆಳೆದಿದ್ದರು.
ವಿದೇಶದಲ್ಲಿ ಉದ್ಯೋಗ ಪಡೆದಿದ್ದ ಪ್ರೀತಂ ಅವರು, ಕೆಲವೇ ದಿನಗಳಲ್ಲಿ ವಿದೇಶಕ್ಕೆ ತೆರಳುವವರಿದ್ದರು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪ್ರೀತಂ ಶೆಟ್ಟಿ ಅವರು ತಾಯಿ ಮತ್ತು ಸಹೋದರನ್ನು ಅಗಲಿದ್ದಾರೆ.