KS Dakshina Murthy

ಪುಟಿನ್ ಭೇಟಿ: ಪುಟಿದ ರಷ್ಯಾ-ಭಾರತ ಸಂಬಂಧ – ನಗಣ್ಯವಾದ ತೈಲ ಆಮದು ಬಿಕ್ಕಟ್ಟು


ಪುಟಿನ್ ಭೇಟಿ: ಪುಟಿದ ರಷ್ಯಾ-ಭಾರತ ಸಂಬಂಧ – ನಗಣ್ಯವಾದ ತೈಲ ಆಮದು ಬಿಕ್ಕಟ್ಟು
x
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯನ್ನು ರಾಜತಾಂತ್ರಿಕವಾಗಿ ಮತ್ತು ಭೌಗೋಳಿಕ ರಾಜಕೀಯದ ಹಿನ್ನೆಲೆಯಲ್ಲಿ ನಿಕಟ ವಿಶ್ಲೇಷಣೆ ಮಾಡಲಾಗುತ್ತಿದೆ.

ಚೀನಾವು ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ನಿಕಟವಾಗಿದೆ ಎಂಬುದು ಯಾರೂ ಅರಗಿಸಿಕೊಳ್ಳಲಾಗದ ಸತ್ಯ. ಆ ನಿಟ್ಟಿನಲ್ಲಿ ಅದು ರಷ್ಯಾದ ಜೊತೆ ಸಮತೋಲನ ಕಾಯ್ದುಕೊಳ್ಳಬೇಕಾದುದು ಅನಿವಾರ್ಯ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗಸಭೆಯ ನಿಮಿತ್ತ ಮಾತುಕತೆಗೆ ಕುಳಿತುಕೊಂಡ ಈ ಹೊತ್ತಿನಲ್ಲಿ ಏಳುವ ಬಹಳ ಮುಖ್ಯವಾದ ಪ್ರಶ್ನೆಯೆಂದರೆ, ಈ ಇಬ್ಬರಲ್ಲಿ ಒಬ್ಬರಿಗೊಬ್ಬರು ಹೆಚ್ಚು ಅವಲಂಬಿತರಾಗಿರುವವರು ಯಾರು? ಎರಡೂ ರಾಷ್ಟ್ರಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗುರಿ ಎಂಬುದು ನಿಸ್ಸಂದೇಹ. ಆ ಗುರಿಗಳು ನಾನಾ ಹಂತಗಳನ್ನು ಒಳಗೊಂಡಿದೆ ಎಂಬುದು ಬೇರೇ ಮಾತು.

ಉಕ್ರೇನ್ ಜೊತೆ ಯುದ್ಧಕ್ಕೆ ಇಳಿದ ಕಾರಣದಿಂದಾಗಿ ಟ್ರಂಪ್ ಅವರು ರಷ್ಯಾ ಮೇಲೆ ಭಾರೀ ನಿರ್ಬಂಧಗಳನ್ನು ವಿಧಿಸುತ್ತಿದ್ದರೆ, ಭಾರತ ಕೂಡ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿರುವ ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಟ್ರಂಪ್ ಅವರ ದಂಡನಾತ್ಮಕ ಸುಂಕ ನೀತಿಗಳನ್ನು ವಿರೋಧಿಸಲಾಗದ ನರೇಂದ್ರ ಮೋದಿ ಸರ್ಕಾರವು, ಭಾರತದ ತೈಲ ಕಂಪನಿಗಳಿಗೆ ರಷ್ಯಾದ ನಿರ್ಬಂಧಿತ ಕಂಪನಿಗಳಿಂದ ಕಚ್ಚಾ ತೈಲ ಖರೀದಿ ಪ್ರಮಾಣವನ್ನು ಕಡಿಮೆ ಮಾಡುವಂತೆ ನಿರ್ದೇಶಿಸಿದೆ ಮತ್ತು ಅದು ಈಗಾಗಲೇ ಚಾಲ್ತಿಗೂ ಬಂದಿದೆ.

ಭಾರತ-ರಷ್ಯಾ ಅಚಲ ಬಂಧ

ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಮಣಿದ ಮೋದಿ ಅವರ ನಡೆಯ ಬಗ್ಗೆ ರಷ್ಯಾದ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ಭಾವನೆಗೆ ವ್ಯತಿರಿಕ್ತವಾಗಿ, ಪುಟಿನ್ ಅವರು ಶೃಂಗಸಭೆಗಾಗಿ ಭಾರತಕ್ಕೆ ಬರಲು ಒಪ್ಪುವ ಮೂಲಕ, ಭಾರತ-ರಷ್ಯಾ ಸಂಬಂಧಗಳನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಜಗತ್ತಿಗೆ ಸಾರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ರಷ್ಯಾ ಮತ್ತು ಭಾರತ ನಡುವಿನ ಸಂಬಂಧ ಎಲ್ಲರೂ ಸಾಮಾನ್ಯವಾಗಿ ಊಹಿಸುವುದಕ್ಕಿಂತ ಹೆಚ್ಚಿನ ಕಾರ್ಯತಂತ್ರದ ಗಹನತೆಯನ್ನು ಹೊಂದಿದೆ ಎಂಬುದೂ ಇದರಿಂದ ಸಾಬೀತಾಗುತ್ತದೆ.

ಪುಟಿನ್ ಅವರ ಭೇಟಿಯ ಮುನ್ನಾ ದಿನ, ಭಾರತದೊಂದಿಗೆ ಮಿಲಿಟರಿ ಲಾಜಿಸ್ಟಿಕ್ಸ್ ಒಪ್ಪಂದಕ್ಕೆ ರಷ್ಯಾದ ಸಂಸತ್ತು ಅನುಮೋದನೆ ನೀಡಿರುವುದನ್ನು ಗಮನಿಸಿದರೆ ಇದು ಎಷ್ಟು ಗಹನ ಸ್ವರೂಪದ್ದಾಗಿದೆ ಎಂಬು ಸ್ಪಷ್ಟವಾಗುತ್ತದೆ. ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ವಿನಿಮಯ (RELOS) ಒಪ್ಪಂದವು, ಸೇನಾ ಸಿಬ್ಬಂದಿ, ಹಾಗೂ ಮಿಲಿಟರಿ ಹಡಗುಗಳು ಮತ್ತು ವಿಮಾನಗಳ ಬಳಕೆಗೆ ಎರಡೂ ದೇಶಗಳ ಪ್ರದೇಶವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಒಪ್ಪಂದದ ದೂರಗಾಮಿ ಸಾಧ್ಯತೆ

ಸೋವಿಯತ್ ನಂತರದ ಯುಗದಲ್ಲಿ ಎರಡೂ ದೇಶಗಳ ನಡುವಿನ ಅತ್ಯಂತ ದೂರಗಾಮಿ ಒಪ್ಪಂದ ಇದಾಗಿದೆ ಎಂಬುದು ನಿರ್ವಿವಾದ. ಇದು ಮಿಲಿಟರಿ ಮತ್ತು ಇತರ ವಿಷಯಗಳಲ್ಲಿ ವ್ಯಾಪಕ ಸಹಕಾರದ ಸಾಧ್ಯತೆಯನ್ನು ತೆರೆದಿಡುತ್ತದೆ.

ಭಾರತವು, ಮಹತ್ವದ ಆರ್ಕ್ಟಿಕ್ ಪ್ರದೇಶದಿಂದ ದೂರವಿದ್ದರೂ, ಈ ಒಪ್ಪಂದದ ದೆಸೆಯಿಂದಾಗಿ ಅದನ್ನು ಪ್ರವೇಶಿಸುವ ಸಾಧ್ಯತೆಯನ್ನು ಪಡೆಯಬಹುದು. ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವ ಭಾರತೀಯ ನೌಕಾಪಡೆ ಹಡಗುಗಳು, ಆರ್ಕ್ಟಿಕ್ನಲ್ಲಿರುವ ರಷ್ಯಾದ ಬಂದರಿನಲ್ಲಿ ಈಗ ಲಂಗರು ಹಾಕಬಹುದು ಮತ್ತು ಅಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸಬಹುದು.

ಇತರ ಒಪ್ಪಂದಗಳು ನಿರೀಕ್ಷಿತ ರೀತಿಯಲ್ಲಿಯೇ ಇವೆ. ರಹಸ್ಯ ಯುದ್ಧ ವಿಮಾನವಾದ SU-57ರ ಇತ್ತೀಚಿನ ಆವೃತ್ತಿ, S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಸುಧಾರಿತ ಆವೃತ್ತಿ, ಮತ್ತು 200 ಕೋಟಿ ಅಮೆರಿಕ ಡಾಲರ್ ಮೌಲ್ಯದ ಪರಮಾಣು ಜಲಾಂತರ್ಗಾಮಿಯನ್ನು ಭಾರತವು ಖರೀದಿಸುತ್ತಿದೆ.

‘ರಷ್ಯಾಕ್ಕೆ ಭಾರತದೊಂದಿಗೆ ಇರುವ ಸಂಬಂಧವು (ಚೀನಾದ ಜೊತೆಗೆ) ಇಂದು ಇರುವ ಭೌಗೋಳಿಕ ರಾಜಕೀಯ ಸಂದರ್ಭದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ,’ ಹಾಗೆಂದು ಭಾರತಕ್ಕೆ ಹೊರಡುವ ಮುನ್ನ ಪುಟಿನ್ ಸ್ವತಃ ಮಾಧ್ಯಮಗಳಿಗೆ ತಿಳಿಸಿದ್ದರು. ಇದರಲ್ಲೇನು ಅಚ್ಚರಿಯಿಲ್ಲ. ಯಾಕೆಂದರೆ ಐರೋಪ್ಯ ರಾಷ್ಟ್ರಗಳು, ವಿಶೇಷವಾಗಿ ನ್ಯಾಟೋ ಸದಸ್ಯರು, ಹಂಗೇರಿ ಮತ್ತು ಸೆರ್ಬಿಯಾದಂತಹ ಕೆಲವೇ ಕೆಲವು ದೇಶಗಳನ್ನು ಹೊರತುಪಡಿಸಿ, ರಷ್ಯಾದಿಂದ ಬಹುತೇಕ ದೂರ ಸರಿದಿದ್ದಾರೆ.

ಐಡೋಪ್ಯ ಒಕ್ಕೂಟವು ಉಕ್ರೇನ್ ಪರವಾಗಿ ನೀಡಿದೆ ಮತ್ತು ವಾಸ್ತವವಾಗಿ, ಟ್ರಂಪ್ ಮುಂದಾಳತ್ವದ ಶಾಂತಿ ಪ್ರಯತ್ನಗಳನ್ನು ವಿರೋಧಿಸುತ್ತಿದೆ, ಏಕೆಂದರೆ ಅದರ ದೃಷ್ಟಿಯಲ್ಲಿ, ಕರಡು ಒಪ್ಪಂದವು ರಷ್ಯಾದ ಪರವಾಗಿದೆ.

ಇನ್ನೂ ಚಾಲ್ತಿಯಲ್ಲಿರುವ ಯುದ್ಧ

ರಷ್ಯಾದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಅನುಕೂಲಕರವಾದ ಮಾರ್ಗಗಳಲ್ಲಿ ಶಾಂತಿ ಒಪ್ಪಂದವನ್ನು ರೂಪಿಸುವುದು ಪುಟಿನ್ ಅವರಿಗೆ ಅತ್ಯಂತ ನಿರ್ಣಾಯಕ ಮತ್ತು ಅವರ ತಂಡವು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ಈ ಹಂತದಲ್ಲಿ ಮಾತುಕತೆಗಳು ಸಮತೋಲನದಲ್ಲಿವೆ.

ಪರಿಹಾರ ಸಿಗುವವರೆಗೂ ಯುದ್ಧ ಮುಂದುವರಿಯುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ರಷ್ಯಾವು ಉಕ್ರೇನ್ ಮೇಲೆ ಬಾಂಬ್ ದಾಳಿ ಮುಂದುವರೆಸಿದ್ದು, ಅಪಾರ ಹಾನಿಯೂ ಮುಂದುವರಿದಿದೆ. ಪುಟಿನ್ ಕೂಡಾ ತಮ್ಮ ಪಡೆಗಳ ರೂಪದಲ್ಲಿ ನಷ್ಟ ಅನುಭವಿಸಿದ್ದಾರೆ ಮತ್ತು ಅವರ ದೇಶದ ಅರ್ಥ ವ್ಯವಸ್ಥೆಯೂ ಕುಸಿದಿದೆ. ತೈಲ ಆಮದಿನ ವಿಷಯದಲ್ಲಿ ಭಾರತವನ್ನೂ ವಿರೋಧಿಸುವುದು ರಷ್ಯಾದ ಪಾಲಿಗೆ ಮೂರ್ಖತನವಾಗುತ್ತದೆ.

ಈ ದೃಷ್ಟಿಯಿಂದ, ಪುಟಿನ್ ಅವರು ಒಂದು ಪ್ರಾಯೋಗಿಕ ಮಾರ್ಗವನ್ನು ಅನುಸರಿಸಿದ್ದಾರೆ. ಟ್ರಂಪ್ ಇದ್ದರೂ ಇಲ್ಲದಿದ್ದರೂ, ಸುಲಭವಾಗಿ ಭೇದಿಸಲು ಸಾಧ್ಯವಿಲ್ಲದ ಅತ್ಯಂತ ಗಟ್ಟಿಯಾದ ಸಂಬಂಧವನ್ನು ಭಾರತದೊಂದಿಗೆ ಗಂಟು ಹಾಕಲು ಪ್ರಯತ್ನ ಅವರದ್ದು.

ಭಾರತಕ್ಕಿರುವ ಕಾರಣಗಳು ಹಲವು

ಅದರ ಕಾರ್ಯತಂತ್ರದ ಪಾಲುದಾರನಾದ ಅಮೆರಿಕದಿಂದ ಟೀಕೆಗೆ ಗುರಿಯಾಗಿರುವ ಭಾರತಕ್ಕೆ, ರಷ್ಯಾದ ಜೊತೆ ತನ್ನ ನಿಕಟ ಸಂಬಂಧವನ್ನು ಮುಂದುವರೆಸಲು ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ನರೇಂದ್ರ ಮೋದಿ ಸರ್ಕಾರವು, ಅಮೆರಿಕ ನೇತೃತ್ವದ ಕ್ವಾಡ್ನ ಸದಸ್ಯನಾಗಿದ್ದರೂ, ಮಾಸ್ಕೋದೊಂದಿಗೆ ದೂರಗಾಮಿ, ದೀರ್ಘಾವಧಿಯ ಲಾಜಿಸ್ಟಿಕ್ಸ್ ಒಪ್ಪಂದಕ್ಕೆ ಸಹಿ ಹಾಕಿದೆ. ಕ್ವಾಡ್ ಎಂದರೆ ಚೀನಾಕ್ಕೆ ವಿರೋಧವಾಗಿರುವ ಮತ್ತು ವಿಸ್ತರಣೆಯ ಮೂಲಕ ರಷ್ಯಾಕ್ಕೂ ವಿರುದ್ಧವಾಗಿರುವ ಒಂದು ಸರ್ವ-ಉದ್ದೇಶಿತ ರಚನೆ. ಇದರ ಮೂಲಕ, ಅಮೆರಿಕ ಅಥವಾ ರಷ್ಯಾ ಎರಡನ್ನೂ ಕೈಬಿಡುವ ಇರಾದೆ ತನ್ನದಲ್ಲ ಎಂಬುದನ್ನು ಭಾರತವು ಸ್ಪಷ್ಟಪಡಿಸಿದೆ. ಇದಕ್ಕೆ ವಿರುದ್ಧವಾಗಿ, ಎರಡೂ ಕಡೆಯಿಂದ ರಾಜತಾಂತ್ರಿಕ ಒತ್ತಡಗಳಿದ್ದರೂ ಸಹ, ಅದು ಇಬ್ಬರೊಂದಿಗೂ ತನ್ನ ವ್ಯವಹಾರವನ್ನು ಮುಂದುವರೆಸಿದೆ.

ದಕ್ಷಿಣ ಏಷ್ಯಾ ಸೇರಿದಂತೆ ವಿಶಾಲ ಏಷ್ಯಾ ವಲಯದಲ್ಲಿ ರಾಜಕೀಯ ಸಮೀಕರಣಗಳನ್ನು ತನ್ನ ಪರವಾಗಿ ಕಾಪಾಡಿಕೊಳ್ಳುವುದು ಕೂಡ ಭಾರತಕ್ಕೆ ಮುಖ್ಯವಾಗಿದೆ. ಚೀನಾವು ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ನಿಕಟವಾಗಿದೆ ಎಂಬುದು ಯಾರೂ, ಅದರಲ್ಲೂ ಮುಖ್ಯವಾಗಿ ವಿದೇಶಾಂಗ ನೀತಿಯನ್ನು ರೂಪಿಸುವವರು ನಿರ್ಲಕ್ಷಿಸಲು ಆಗದ ಸತ್ಯವಾಗಿದೆ. ಅದೇ ವೇಳೆ, ಚೀನಾದ ಜೊತೆಗೆ ಉದ್ವಿಗ್ನ-ಮುಕ್ತವಾದ ಸಂಬಂಧವನ್ನು ಕಾಯ್ದುಕೊಳ್ಳುವುದು ಭಾರತದ ಪಾಲಿಗೆ ಅತ್ಯಗತ್ಯ. ಇಲ್ಲಿ ರಷ್ಯಾ ಈಗಾಗಲೇ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದು.

ತಗ್ಗದ ಭಾರತ-ಚೀನಾ ನಡುವಿನ ಅಪನಂಬಿಕೆ

ರಷ್ಯಾ ಮತ್ತು ಚೀನಾ ನಡುವಿನ ಸಂಬಂಧವು ಈಗಿರುವಷ್ಟು ನಿಕಟವಾಗಿ ಹಿಂದೆಂದೂ ಇರಲಿಲ್ಲ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಚೀನಾದ ಕ್ಸಿ ಜಿನ್‌ಪಿಂಗ್ ಸರ್ಕಾರದ ಮೇಲೆ ಪುಟಿನ್ ಅವರಿಗೆ ಹತೋಟಿ ಇದೆ. ಇದರಿಂದ ಭಾರತ ಮತ್ತು ಚೀನಾ ನಡುವೆ ಅಸ್ತಿತ್ವದಲ್ಲಿ ಇರುವ ನಿಗೂಢ ವೈರತ್ವ ಮತ್ತು ಪರಸ್ಪರ ಅಸಮಾಧಾನವನ್ನು ತಟಸ್ಥಗೊಳಿಸಲು ಸಾಧ್ಯವಾಗದೇ ಇದ್ದರೂ, ಕನಿಷ್ಠಪಕ್ಷ ಅದನ್ನು ತಗ್ಗಿಸಲು ಸಹಾಯ ಆದೀತು. ಅರುಣಾಚಲ ಪ್ರದೇಶದಲ್ಲಿ ಜನಿಸಿದ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಯೊಬ್ಬರಿಗೆ ಬೀಜಿಂಗ್‌ನಲ್ಲಿ ಚೀನಾ ವಲಸೆ ಅಧಿಕಾರಿಗಳಿಂದ ಕಿರುಕುಳ ನೀಡಿದ ಇತ್ತೀಚಿನ ಘಟನೆಯೇ ಇದಕ್ಕೆ ಒಂದು ಉದಾಹರಣೆ. ಅರುಣಾಚಲ ಪ್ರದೇಶವು ಭಾರತದ ಒಂದು ಭಾಗ ಎಂದು ಒಪ್ಪಿಕೊಳ್ಳಲು ಅವರು ಸುತಾರಾಂ ನಿರಾಕರಿಸಿದರು, ಆದರೆ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬುದು ಸ್ಪಷ್ಟ.

ಆದ್ದರಿಂದ, ಚೀನಾ ಮತ್ತು ಭಾರತದ ನಡುವೆ ಪರಸ್ಪರ ಅಪನಂಬಿಕೆ ಇದ್ದೇ ಇದೆ. ರಷ್ಯಾವು ದಶಕಗಳಿಂದ, ಅಂದರೆ ಸೋವಿಯತ್ ಯುಗಕ್ಕೂ ಹಿಂದಿನಿಂದಲೂ, ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಿರುವುದರಿಂದ, ಚೀನಾ ಮತ್ತು ಭಾರತ ನಡುವಿನ ಸಂಬಂಧಗಳು ಹದಗೆಡಲು ಅದು ಅವಕಾಶ ನೀಡುವುದಿಲ್ಲ ಎಂಬುದು ರಾಜತಾಂತ್ರಿಕ ತರ್ಕವಾಗಿದೆ.

ಅದೇ ರೀತಿ, ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಜೊತೆ ಭಾರತವು ಕಂಡುಕೊಂಡಿರುವ ನಿಕಟ ಸಂಬಂಧವನ್ನು ಕೂಡ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಕ್ಕೆ ನಂಟನ್ನು ಜೋಡಿಸಬಹುದು. ವಾಸ್ತವವಾಗಿ, ತಾಲಿಬಾನ್ ಸರ್ಕಾರವನ್ನು ಔಪಚಾರಿಕವಾಗಿ ಗುರುತಿಸಿದ ಮೊದಲ ದೇಶವೆಂದರೆ ರಷ್ಯಾ. ಇದು ಕಾಬೂಲ್ನಲ್ಲಿರುವ ಆ ಆಡಳಿತದೊಂದಿಗೆ ವ್ಯವಹಾರ ನಡೆಸಲು ಅದಕ್ಕೆ ಒಂದು ಬಹಳ ದೊಡ್ಡ ಹಿಡಿತವನ್ನು ನೀಡುತ್ತದೆ.

ಜೊತೆಗೆ ರಷ್ಯಾದ ಆಪ್ತಮಿತ್ರನಾಗಿರುವ ಭಾರತವು ಈ ಸಂಬಂಧದ ಲಾಭವನ್ನು ಪಡೆದುಕೊಳ್ಳುವುದು ಸಮಂಜಸವೇ ಆಗಿದೆ ಮತ್ತು ಭಾರತ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ.

ಭಾರತದ ಮೇಲೆ ಹತೋಟಿಗೆ ಕಾರ್ಯತಂತ್ರ

ಹಾಗಂತ ರಷ್ಯಾವನ್ನು ಭಾರತವು ಲಘುವಾಗಿ ಪರಿಗಣಿಸಬಾರದು ಎಂದು ಖಚಿತಪಡಿಸಿಕೊಳ್ಲುವ ಸಲುವಾಗಿ ಪುಟಿನ್ ಅವರು ಪಾಕಿಸ್ತಾನದ ಜೊತೆ ನಿಕಟ ಸಂಬಂಧ ಬೆಳೆಸುವ ಮೂಲಕ ಭಾರತದ ಮೇಲೆ ತಮ್ಮದೇ ಆದ ಹತೋಟಿ ಸೃಷ್ಟಿಸಿಕೊಂಡಿದ್ದಾರೆ. ರಷ್ಯಾದ ಹಿತಾಸಕ್ತಿಗಳನ್ನು ಉಲ್ಲಂಘಿಸುವ ಯಾವುದೇ ಅಪಾಯಕಾರಿ ಗೆರೆಗಳನ್ನು ಭಾರತವು ಎಂದಿಗೂ ದಾಟುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ಪುಟಿನ್ ಅವರು ಪಾಕಿಸ್ತಾನದ ಉನ್ನತ ಅಧಿಕಾರಿಗಳ ಭೇಟಿಗೆ ಪ್ರೋತ್ಸಾಹ ನೀಡಿದ್ದಾರೆ ಮತ್ತು ರಕ್ಷಣಾ ಒಪ್ಪಂದಗಳ ಕುರಿತೂ ಚರ್ಚಿಸಿದ್ದಾರೆ.

ಭಾರತವು ರಷ್ಯಾವನ್ನು ವಿರೋಧಿಸುವ ಒಂದು ತಪ್ಪು ಹೆಜ್ಜೆ ಇಟ್ಟರೆ ಸಾಕು, ಅದು ರಷ್ಯಾ, ಚೀನಾ ಮತ್ತು ಪಾಕಿಸ್ತಾನದ ನಡುವೆ ಹೊಸ ಅಕ್ಷಕ್ಕೆ ಪ್ರಚೋದನೆ ನೀಡಬಹುದು. ಹಾಗೇನಾದರೂ ಆದರೆ ಅದು ಪ್ರಾದೇಶಿಕ ಸಮತೋಲನವನ್ನು ಸಂಪೂರ್ಣವಾಗಿ ಭಾರತದ ವಿರುದ್ಧ ತಿರುಗಿಸಬಹುದು.

ಯಾವತ್ತು ಭಾರತವು ಟ್ರಂಪ್ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡಿದರೋ ಆಗ, ಅದು ರಷ್ಯಾ ಮತ್ತು ಭಾರತ ನಡುವಿನ ಸಂಬಂಧದಲ್ಲಿ ತಿರುವು ನೀಡುವ ಬಿಂದು ಆಗಬಹುದೇ ಎಂಬ ಊಹಾಪೋಹ ಉಂಟಾಗಿತ್ತು. ಅದೃಷ್ಟವಶಾತ್, ಅಂದಿನಿಂದ ನಡೆದ ಘಟನೆಗಳು ಮೋದಿ ಸರ್ಕಾರದ ನಕಾರಾತ್ಮಕ ಧೋರಣೆಯನ್ನು ಪುಟಿನ್ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. ಜೊತೆಗೆ ರಷ್ಯಾ-ಭಾರತ ಸಂಬಂಧಕ್ಕೆ ಇನ್ನೂ ಗಟ್ಟಿಯಾದ ಬಂಧವಿದೆ ಎಂಬುದನ್ನು ಸಾಬೀತುಪಡಿಸಿವೆ.

Next Story