CM Siddaramaiahs rant against the Center: Protests across the country from Jan. 5
x

ಕಾಂಗ್ರೆಸ್‌ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ

ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ರಣಕಹಳೆ: ಜ. 5 ರಿಂದ ದೇಶಾದ್ಯಂತ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯನ್ನು 'ವಿಬಿ-ಜಿ ರಾಮ್ ಜಿ' ಎಂದು ಮರುನಾಮಕರಣ ಮಾಡುವ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ಅಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ದೂರಿದ್ದಾರೆ.


Click the Play button to hear this message in audio format

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಯೋಜನೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನವರಿ 5 ರಿಂದ ದೇಶಾದ್ಯಂತ ಬೃಹತ್‌ 'ಬಚಾವ್ ಆಂದೋಲನ'ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಇತ್ತೀಚಿನ ನೀತಿಗಳು ಬಡವರ ಬದುಕಿನ ಹಕ್ಕಿನ ಮೇಲೆ ಸವಾರಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆಯನ್ನು 'ವಿಬಿ-ಜಿ ರಾಮ್ ಜಿ' ಎಂದು ಮರುನಾಮಕರಣ ಮಾಡುವ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ಅಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ದೂರಿದ ಮುಖ್ಯಮಂತ್ರಿಗಳು, ಇದು ಕೇವಲ ಹೆಸರಿನ ಬದಲಾವಣೆಯಲ್ಲ ಬದಲಾಗಿ ಯೋಜನೆಯನ್ನು ಹಂತ ಹಂತವಾಗಿ ಮುಗಿಸುವ ಹುನ್ನಾರ ಎಂದು ಟೀಕಿಸಿದರು.

ಈ ಹಿಂದೆ ಕಾರ್ಮಿಕರ ವೇತನದ ನೂರರಷ್ಟು ಪಾಲನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ ಈಗ ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿಯಮದ ಪ್ರಕಾರ ಶೇ. 40 ರಷ್ಟು ಆರ್ಥಿಕ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದ್ದು, ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 5 ರಿಂದ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಯೋಜನೆಯ ರಕ್ಷಣೆಗಾಗಿ ರಾಷ್ಟ್ರವ್ಯಾಪಿ ಹೋರಾಟ ಸಂಘಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕಾರಿ ಸಮಿತಿ ಸಭೆ

ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯ 'ಇಂದಿರಾ ಭವನ'ದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯು ಕೇಂದ್ರ ಸರ್ಕಾರದ ವಿರುದ್ಧ ಹಂತ ಹಂತವಾಗಿ ರಾಷ್ಟ್ರವ್ಯಾಪಿ ಹೋರಾಟ ರೂಪಿಸಲು ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು ಮತ್ತು ಹಿರಿಯ ನಾಯಕರು ಭಾಗವಹಿಸಿದ್ದರು.

ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನಬದ್ಧ ಸಂಸ್ಥೆಗಳನ್ನು ಮತ್ತು ಬಡವರ ಪರ ಯೋಜನೆಗಳನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

"ಮನರೇಗಾ ಯೋಜನೆಯನ್ನು 'ವಿಬಿ-ಜಿ ರಾಮ್ ಜಿ' ಎಂದು ಮರುನಾಮಕರಣ ಮಾಡಿರುವುದು ಕೇವಲ ಹೆಸರಿಗಾಗಿ ಅಲ್ಲ, ಅದರ ಆರ್ಥಿಕ ಶಕ್ತಿಯನ್ನು ಕುಂದಿಸಲು. ರಾಜ್ಯ ಸರ್ಕಾರಗಳ ಮೇಲೆ ಶೇ. 40 ರಷ್ಟು ಹೊರೆ ಹೇರುವ ಮೂಲಕ ಬಡವರಿಗೆ ಉದ್ಯೋಗ ಸಿಗದಂತೆ ಮಾಡುವುದು ಕೇಂದ್ರದ ಗುರಿಯಾಗಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ," ಎಂದು ಖರ್ಗೆ ಎಚ್ಚರಿಸಿದರು.

ದೇಶದ ವಿವಿಧೆಡೆ ಮತದಾರರ ಪಟ್ಟಿಯಿಂದ ಸಾವಿರಾರು ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗುತ್ತಿದೆ ಎಂಬ ದೂರಿನ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದ್ದು, ಇದರ ವಿರುದ್ಧ ಕಾನೂನು ಮತ್ತು ಬೀದಿ ಹೋರಾಟ ಎರಡನ್ನೂ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕೋಮು ಸೌಹಾರ್ದಕ್ಕೆ ಧಕ್ಕೆ: ಇತ್ತೀಚಿನ ದಿನಗಳಲ್ಲಿ ಕ್ರಿಸ್‌ಮಸ್ ಸೇರಿದಂತೆ ವಿವಿಧ ಧರ್ಮಗಳ ಆಚರಣೆಗಳ ಸಂದರ್ಭದಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ದೇಶದ ವೈವಿಧ್ಯತೆಯನ್ನು ಕಾಪಾಡುವುದು ಕಾಂಗ್ರೆಸ್‌ನ ಆದ್ಯತೆ ಎಂದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ, "ದೇಶದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ತಾಂಡವವಾಡುತ್ತಿದೆ. ಇಂತಹ ಸಮಯದಲ್ಲಿ ಬಡವರ ಉದ್ಯೋಗಕ್ಕೆ ಕುತ್ತು ತರುತ್ತಿರುವುದು ಖಂಡನೀಯ. ನಾವು ಸಂಸತ್ತಿನ ಒಳಗೂ ಮತ್ತು ಹೊರಗೂ ಬಡವರ ಧ್ವನಿಯಾಗಿ ಹೋರಾಡುತ್ತೇವೆ," ಎಂದು ಪುನರುಚ್ಚರಿಸಿದರು.

Read More
Next Story