
ಪ್ರಿಯಾಂಕಾ ಗಾಂಧಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ? ರಾಬರ್ಟ್ ವಾದ್ರಾ ಹೇಳಿದ್ದೇನು?
ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆಂಬ ಇಮ್ರಾನ್ ಮಸೂದ್ ಹೇಳಿಕೆ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರಾಬರ್ಟ್ ವಾದ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ನೀಡಿರುವ ಹೇಳಿಕೆ ಈಗ ಹೊಸ ಸಂಚಲನ ಮೂಡಿಸಿದೆ. ಇದು ಸ್ವಪಕ್ಷ ಮಾತ್ರವಲ್ಲದೇ ವಿಪಕ್ಷದ ಬಾಯಿಗೂ ಆಹಾರವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ, ಎಲ್ಲೆಡೆಯಿಂದಲೂ ಇಂತಹ ಬೇಡಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಇಮ್ರಾನ್ ಮಸೂದ್ ಹೇಳಿದ್ದೇನು?
ಮಂಗಳವಾರ ಮಾತನಾಡಿದ್ದ ಇಮ್ರಾನ್ ಮಸೂದ್, "ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಮಾಡಿ ನೋಡಿ, ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿಯವರಂತೆ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ. ಪಾಕಿಸ್ತಾನಕ್ಕೆ ಚೇತರಿಸಿಕೊಳ್ಳಲಾಗದಂತಹ ಪೆಟ್ಟು ನೀಡಿದ್ದ ಇಂದಿರಾ ಗಾಂಧಿಯವರ ಮೊಮ್ಮಗಳ ಈಕೆ. ಇವರ ಕೈಗೆ ಅಧಿಕಾರ ನೀಡಿದರೆ ಶತ್ರುಗಳು ತಲೆ ಎತ್ತಲು ಧೈರ್ಯ ಮಾಡುವುದಿಲ್ಲ" ಎಂದು ಹೊಗಳಿದ್ದರು.
ರಾಹುಲ್ ಗಾಂಧಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಸೂದ್, "ರಾಹುಲ್ ಮತ್ತು ಪ್ರಿಯಾಂಕಾ ಬೇರೆಯಲ್ಲ. ಅವರಿಬ್ಬರೂ ಒಂದೇ ಮುಖದ ಎರಡು ಕಣ್ಣುಗಳಿದ್ದಂತೆ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ವಾದ್ರಾ ರಿಯಾಕ್ಷನ್ ಏನು?
ಕಾಂಗ್ರೆಸ್ ವಲಯದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕು ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಅವರ ಪತಿ ರಾಬರ್ಟ್ ವಾದ್ರಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆಂದು ಇತ್ತೀಚೆಗೆ ಒತ್ತಾಯಿಸಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಬರ್ಟ್ ವಾದ್ರಾ, "ಪ್ರಿಯಾಂಕಾ ಗಾಂಧಿ ಅವರು ಮುಂದೆ ಬರಬೇಕು ಎಂಬ ಬೇಡಿಕೆ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಇದು ಕೇವಲ ಅವರ ವಿಚಾರದಲ್ಲಿ ಮಾತ್ರವಲ್ಲ, ನಾನು ಕೂಡ ಸಕ್ರಿಯ ರಾಜಕೀಯ ಪ್ರವೇಶಿಸಬೇಕು ಎಂಬ ಒತ್ತಾಯಗಳು ವ್ಯಾಪಕವಾಗಿವೆ," ಎಂದು ಹೇಳಿದರು.
ವಾದ್ರಾ ವಿಡಿಯೊ ಇಲ್ಲಿದೆ
"ನಮ್ಮ ಬಗ್ಗೆ ಕೇಳಿಬರುತ್ತಿರುವ ಬೇಡಿಕೆಗಳು ಒಂದು ಕಡೆಯಾದರೆ, ಸದ್ಯಕ್ಕೆ ನಾವು ಜನರ ನೈಜ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವುದು ಅವಶ್ಯಕವಾಗಿದೆ. ಜನರ ಕಷ್ಟಗಳಿಗೆ ಧ್ವನಿಯಾಗುವುದು ನಮ್ಮ ಮೊದಲ ಆದ್ಯತೆ," ಎಂದು ತಿಳಿಸುವ ಮೂಲಕ ಸದ್ಯದ ಮಟ್ಟಿಗೆ ಸಾಮಾಜಿಕ ಸಮಸ್ಯೆಗಳೇ ಮುಖ್ಯ ಎಂದು ಪ್ರತಿಪಾದಿಸಿದರು.
ಬಿಜೆಪಿ ವಾಗ್ದಾಳಿ
ಇನ್ನೊಂದೆಡೆ, ಬರ್ಲಿನ್‌ನಲ್ಲಿ ರಾಹುಲ್ ಗಾಂಧಿ ಅವರು ಸಂವಿಧಾನದ ಬಗ್ಗೆ ನೀಡಿರುವ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, "ರಾಹುಲ್ ಗಾಂಧಿ ವಿದೇಶಿ ಮಣ್ಣಿನಲ್ಲಿ ಭಾರತದ ಹೆಸರನ್ನು ಕೆಡಿಸುತ್ತಿದ್ದಾರೆ. ಅವರು ವಿರೋಧ ಪಕ್ಷದ ನಾಯಕನಲ್ಲ. ಬದಲಾಗಿ ಅಪಪ್ರಚಾರದ ನಾಯಕ. ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುವ ಶಕ್ತಿಗಳ ಜೊತೆ ರಾಹುಲ್ ಕೈಜೋಡಿಸಿದ್ದಾರೆ" ಎಂದು ಟೀಕಿಸಿದ್ದಾರೆ.
ಅಲ್ಲದೆ, "ಕಾಂಗ್ರೆಸ್ ಮೈತ್ರಿಕೂಟದ ನಾಯಕರೇ ರಾಹುಲ್ ವಿರುದ್ಧ ಇದ್ದಾರೆ. ಇಮ್ರಾನ್ ಮಸೂದ್, ಶಶಿ ತರೂರ್ ಅವರಂತಹ ನಾಯಕರಿಗೆ ರಾಹುಲ್ ಮೇಲೆ ನಂಬಿಕೆಯಿಲ್ಲ. ಈಗ ಜನಮತ ಮಾತ್ರವಲ್ಲ, ಜನಪಥ್ (ಗಾಂಧಿ ಕುಟುಂಬದ ನಿವಾಸದ ರಸ್ತೆ) ಕೂಡ ರಾಹುಲ್ ವಿರುದ್ಧವಾಗಿದೆ" ಎಂದು ಪೂನಾವಾಲಾ ವ್ಯಂಗ್ಯವಾಡಿದ್ದಾರೆ.

