
ಸಾಂದರ್ಭಿಕ ಚಿತ್ರ
ವಸತಿ ಶಾಲೆ ವಿದ್ಯಾರ್ಥಿಗೆ ರ‍್ಯಾಗಿಂಗ್; ಪ್ರಾಂಶುಪಾಲ ಸೇರಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು
ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ 10ನೇ ತರಗತಿ ವಿದ್ಯಾರ್ಥಿಗೆ ದ್ವಿತೀಯ ಪಿಯುಸಿಯ ನಾಲ್ವರು ಹಾಗೂ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದಾರೆ.
ಖಾಸಗಿ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ 6 ವಿದ್ಯಾರ್ಥಿಗಳು ಸೇರಿ 8 ಮಂದಿ ವಿರುದ್ಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ 10ನೇ ತರಗತಿ ವಿದ್ಯಾರ್ಥಿಗೆ ದ್ವಿತೀಯ ಪಿಯುಸಿಯ ನಾಲ್ವರು ಹಾಗೂ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದಾರೆ. ಈ ವಿಚಾರವನ್ನು ಪ್ರಾಂಶುಪಾಲರು ಹಾಗೂ ವಾರ್ಡನ್‌ಗೆ ಹೇಳಿದ್ದಕ್ಕೆ ಆರು ವಿದ್ಯಾರ್ಥಿಗಳು ಸೇರಿ ಹಾಸ್ಟೆಲ್ ರೂಮಿನಲ್ಲಿ ಸೆ.3 ರಿಂದ ಸೆ.6 ರವರೆಗೆ ಕೂಡಿ ಹಾಕಿ ವಿವಸ್ತ್ರಗೊಳಿಸಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೊಂದ ವಿದ್ಯಾರ್ಥಿಯ ತಂದೆ ಬನ್ನೇರುಘಟ್ಟ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಪ್ರಾಂಶುಪಾಲ ಶರೀನ್ ಥಾಮಸ್, ವಾರ್ಡನ್ ವಿವಿನ್ ಕ್ಯಾಪರ್, ವಿದ್ಯಾರ್ಥಿಗಳಾದ ಶ್ರೀನಿಬಾಬು, ನವೀನ್, ಬೀರುಶ್ ದೇವಾಂಗ್ ಬಾಬು, ಅನಿರುದ್ಧ ರಾಮ್, ಹರೀಶ್, ಜಗನ್ನಾಥ್ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರ‍್ಯಾಗಿಂಗ್‌ನಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
ಇತ್ತೀಚೆಗೆ ರ‍್ಯಾಗಿಂಗ್ ನಿಂದ ಬೇಸತ್ತು ಗುಳೇದಗುಡ್ಡ ಪಟ್ಟಣದ ಭಂಡಾರಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಂಜಲಿ(21) ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್‌ನಲ್ಲಿ ಮೃತ ಅಂಜಲಿ, ಮೂವರು ವಿದ್ಯಾರ್ಥಿಗಳ ಹೆಸರು, ಮೊಬೈಲ್ ಸಂಖ್ಯೆಯನ್ನು ಉಲ್ಲೇಖಿಸಿ, ಅವರು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ತನ್ನ ಸಾವಿಗೆ ಅವರೇ ಕಾರಣ ಎಂದು ಬರೆದಿದ್ದರು.
ಡೆತ್ ನೋಟ್‌ನಲ್ಲೇನಿತ್ತು ?
"ನನ್ನ ಸಾವಿಗೆ ಕಾರಣವಾದ ಮೂವರು ವ್ಯಕ್ತಿಗಳು ಕಾರಣರಾಗಿದ್ದಾರೆ. ವರ್ಷಾ, ಪ್ರದೀಪ್ ಮತ್ತು ಇನ್ನಿತರ ಸ್ನೇಹಿತರು ನನ್ನ ತೇಜೋವಧೆ ಮಾಡಿ ಮಾನಸಿಕವಾಗಿ ಕುಗ್ಗಿಸಿದ್ದಾರೆ. ಅವರು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿದ್ದಾರೆ. ಇವರನ್ನು ಸುಮ್ಮನೆ ಬಿಡಬಾರದು" ಹೇಳಿ ಸಹಿ ಮಾಡಿದ್ದರು. ಈ ಬಗ್ಗೆ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.