
ಕಣ್ಣು ಕಳೆದುಕೊಂಡ ಬಾಲಕ
ಬಾಗಲಕೋಟೆಯಲ್ಲಿ ಪೆನ್‌ಗಾಗಿ ನಡೆದ ಜಗಳದಲ್ಲಿ ಕಣ್ಣುಗುಡ್ಡೆ ಕಳೆದುಕೊಂಡ ವಿದ್ಯಾರ್ಥಿ!
ಒಂದನೇ ತರಗತಿ ವಿದ್ಯಾರ್ಥಿ ಭಿಮಪ್ಪ ಲೋಕುರೆಗೆ ಐದನೇ ತರಗತಿ ವಿದ್ಯಾರ್ಥಿ ಸಮರ್ಥ್ ಪೆನ್ ನೀಡಿದ್ದ. ಅದನ್ನು ವಾಪ್ ಕೇಳಿದ್ದಕ್ಕೆ ವಿದ್ಯಾರ್ಥಿ ಭೀಮಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ.
ಕೇವಲ ಒಂದು ಪೆನ್‌ಗಾಗಿ ನಡೆದ ಇಬ್ಬರು ಶಾಲಾ ವಿದ್ಯಾರ್ಥಿಗಳ ನಡುವಿನ ಜಗಳ, ವಿದ್ಯಾರ್ಥಿಯೊಬ್ಬನ ಬದುಕಿನಲ್ಲಿ ಕತ್ತಲೆ ತುಂಬಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ. 1ನೇ ತರಗತಿ ವಿದ್ಯಾರ್ಥಿಯೊಬ್ಬ ಕಟ್ಟಿಗೆಯಿಂದ ಇರಿದ ಪರಿಣಾಮ, 5ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಬಲಗಣ್ಣಿನ ಗುಡ್ಡೆಯನ್ನೇ ಕಳೆದುಕೊಂಡಿದ್ದಾನೆ.
ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ ಓದುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಸಮರ್ಥ, 1ನೇ ತರಗತಿ ವಿದ್ಯಾರ್ಥಿ ಭೀಮಪ್ಪ ಲೋಕುರೆಗೆ ತನ್ನ ಪೆನ್ ಕೊಟ್ಟಿದ್ದ. ಅದನ್ನು ವಾಪಸ್ ಕೇಳಿದಾಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು, ಸಿಟ್ಟಿಗೆದ್ದ ಭೀಮಪ್ಪ, ಅಲ್ಲೇ ಇದ್ದ ಕಟ್ಟಿಗೆಯಿಂದ ಸಮರ್ಥನ ಬಲಗಣ್ಣಿಗೆ ಬಲವಾಗಿ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸಮರ್ಥನನ್ನು ಕೂಡಲೇ ಬೆಳಗಾವಿ ಜಿಲ್ಲೆಯ ಅಥಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ವೈದ್ಯರು ಬಾಲಕನ ಬಲಗಣ್ಣಿನ ಗುಡ್ಡೆಯನ್ನು ತೆಗೆಯುವುದು ಅನಿವಾರ್ಯವಾಯಿತು.
ಶಿಕ್ಷಕರ ನಿರ್ಲಕ್ಷ್ಯದ ಆರೋಪ, ದೂರು ದಾಖಲು
ಈ ಘಟನೆಯು ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ ಮತ್ತು ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ಅವರ ಗಮನಕ್ಕೆ ಬಂದರೂ, ಅವರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಘಟನೆಯ ನಂತರ, ಸ್ಥಳಕ್ಕೆ ಭೇಟಿ ನೀಡಿದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ್ ಅವರಿಗೆ ಗ್ರಾಮಸ್ಥರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಸ್ತುತ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಜಯಶ್ರೀ ಮತ್ತು ಅತಿಥಿ ಶಿಕ್ಷಕಿ ಶಿಲ್ಪಾ ಅವರ ವಿರುದ್ಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕಣ್ಣು ಕಳೆದುಕೊಂಡ ಬಾಲಕ ಸಮರ್ಥನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಮತ್ತು ಪೋಷಕರು ಒತ್ತಾಯಿಸಿದ್ದಾರೆ.