BJP eyeing GBA, local body polls: Gearing up for statewide show of strength
x

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ

ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಬಿಜೆಪಿ ಕಣ್ಣು: ರಾಜ್ಯಾದ್ಯಂತ ಶಕ್ತಿ ಪ್ರದರ್ಶನಕ್ಕೆ ಸಜ್ಜು

ಮಾಜಿ ಸಿಎಂ ದೇವರಾಜ ಅರಸು ಆಡಳಿತ ವೈಖರಿಯೇ ಬೇರೆ, ಸಿಎಂ ಸಿದ್ದರಾಮಯ್ಯನವರ ಆಡಳಿತ ವೈಖರಿಯೇ ಬೇರೆ. ಒಬ್ಬರಿಗೊಬ್ಬರನ್ನು ಹೋಲಿಸುವುದು ತರವಲ್ಲ ಎಂಬುದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಅಭಿಪ್ರಾಯ.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿಯು ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಚುನಾವಣೆಗೂ ಮುನ್ನವೇ ಕಾರ್ಯಕರ್ತರ ವಿಶ್ವಾಸ ಪಡೆಯಲು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರೇ ಖುದ್ದು ಅಖಾಡಕ್ಕಿಳಿದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬುಧವಾರ(ಜ.7) ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ʼಜಗನ್ನಾಥ ಭವನʼದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ಬಿಜೆಪಿಯು ವಿಶೇಷವಾದ ಗಮನ ಕೊಡಲಿದೆ ಎಂದು ತಿಳಿಸಿದ್ದಾರೆ.

ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಇಂದಿನಿಂದಲೇ ರಾಜ್ಯಾಧ್ಯಕ್ಷರು ಮತ್ತು ಎಲ್ಲ ಪ್ರಮುಖರು ಸೇರಿ ಪ್ರತಿ ಜಿಲ್ಲಾ ಪ್ರಮುಖರ ಸಮಾವೇಶವನ್ನು ಮಾಡಲಾಗುವುದು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ದುರಾಡಳಿತವನ್ನು ಜನರ ಗಮನಕ್ಕೆ ತರುವ ಮೂಲಕ ಜನಾಭಿಪ್ರಾಯ ರೂಪಿಸಲಾಗುವುದು ಎಂದಿದ್ದಾರೆ.

ಸಿದ್ದರಾಮಯ್ಯನವರು ಅತಿ ಹೆಚ್ಚು ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ದೇವರಾಜ ಅರಸು ಅವರ ಆಡಳಿತ ವೈಖರಿಯೇ ಬೇರೆ, ಇವರ ಆಡಳಿತ ವೈಖರಿಯೇ ಬೇರೆ. ಅವರ ಜೊತೆ ಇವರನ್ನು ಹೋಲಿಸಲಾಗದು ಎಂದರು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಸಂದರ್ಭದಲ್ಲಿ ಸಮಾವೇಶದ ಮೂಲಕ ಸಾಧನೆ ಮಾಡುವುದಾಗಿ ಹೊರಟಿರುವುದನ್ನು ಜನರು ಮೆಚ್ಚುವುದಿಲ್ಲ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮುಂದಿನ ಚುನಾವಣೆಯಲ್ಲೂ ನಾವು ನಿಶ್ಚಿತವಾಗಿ ದೊಡ್ಡ ಬಹುಮತದೊಂದಿಗೆ ಬಿಜೆಪಿ ಸರಕಾರ ರಚಿಸಬೇಕೆಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರೂ ತುಂಬ ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದನ್ನು ತಾವು ಗಮನಿಸಲಿದ್ದೀರಿ ಎಂದು ಹೇಳಿದ್ದಾರೆ.

Read More
Next Story