KS Dakshina Murthy

ಅರಸು ಕೊಟ್ಟ ʼಮಾಸ್ಟರ್‌ ಸ್ಟ್ರೋಕ್‌ʼ ಮೀರಲಾಗದ ಸಿದ್ದರಾಮಯ್ಯ: ಆದರೂ ಮೇರು ವರ್ಚಸ್ಸಿಗೆ ಮಿಗಿಲಾರಿಲ್ಲ


ಅರಸು ಕೊಟ್ಟ ʼಮಾಸ್ಟರ್‌ ಸ್ಟ್ರೋಕ್‌ʼ ಮೀರಲಾಗದ ಸಿದ್ದರಾಮಯ್ಯ: ಆದರೂ ಮೇರು ವರ್ಚಸ್ಸಿಗೆ ಮಿಗಿಲಾರಿಲ್ಲ
x
ರಾಜ್ಯದ ಒಟ್ಟು ಅಧಿಕಾರದ ಅವಧಿಯಲ್ಲಿ ದೇವರಾಜ ಅರಸು ಅವರನ್ನು ಮೀರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಪೂರ್ಣಾವಧಿ ಸಾಧಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಪೂರ್ಣಗೊಳಿಸಲಿದ್ದಾರೆಯೇ?
Click the Play button to hear this message in audio format

ಇಂದಿರಾ ಗಾಂಧಿ ಅವರನ್ನು ಕೈಬಿಟ್ಟು ದೇವರಾಜು ಅರಸು ಅವರು ದಾರಿ ತಪ್ಪಿ ನಡೆದರು. ಅವರಿಗಿಂತ ಭಿನ್ನವಾಗಿ ಸೋನಿಯಾ ಗಾಂಧಿಯವರನ್ನು ನಂಬಿ ಸಿದ್ದರಾಮಯ್ಯ ಅಭಿವೃದ್ಧಿ ಪಥದತ್ತ ಸಾಗಿದರು.

ನಮ್ಮ ಕ್ರಿಕೆಟ್‌ ಜಗತ್ತು ರಾಜಕೀಯಮಯ ಆಗಬಹುದಾದರೆ ರಾಜಕೀಯವನ್ನು ಏಕೆ ಆಟವನ್ನಾಗಿ ಬದಲಿಸಬಾರದು?ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪ್ರತಿಮ ನಾಯಕ ದೇವರಾಜು ಅರಸು ಅವರ ದಾಖಲೆಯನ್ನು ಮೀರಿ ರಾಜ್ಯದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.

ಕ್ರಿಕೆಟ್‌ ಪಟು ರವೀಂದ್ರ ಜಡೇಜಾ ಅವರು ಶತಕ ಬಾರಿಸಿದ ಬಳಿಕ ಮೈದಾನದಲ್ಲಿ ಬ್ಯಾಟ್‌ ಹಿಡಿದು ಸಂಭ್ರಮಿಸುವಂತೆ ಸಿದ್ದರಾಮಯ್ಯ ಅವರು ಕೂಡ ಕತ್ತಿ ಹಿಡಿದು ಕುಣಿಯುವುದನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದು. ಅದರಲ್ಲಿ ತಪ್ಪೇನಿದೆ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಇತರರು ತಮ್ಮ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವಾಗ ಅಧಿಕಾರದಲ್ಲಿ ಸುದೀರ್ಘ ಅವಧಿಯ ದಾಖಲೆಯನ್ನು ನಿರ್ಮಿಸುವುದು ಸಾಮಾನ್ಯ ಸಾಧನೆಯೇನೂ ಅಲ್ಲ.

ಒಟ್ಟು ಏಳು ವರ್ಷ 240 ದಿನಗಳ (ಬುಧವಾರ ಜನವರಿ 7ರ ವರೆಗೆ) ಅವಧಿಯನ್ನು ಪೂರೈಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜು ಅರಸು ಅವರಿಗಿಂತ ಒಂದು ದಿನ ಹೆಚ್ಚು ಅಧಿಕಾರದಲ್ಲಿ ಇದ್ದಂತಾಯಿತು. ಕಾಕತಾಳೀಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇತರ ರಾಜ್ಯಗಳ ದಾಖಲೆಗೆ ಹೋಲಿಸಿದರೆ ಇದು ಅಕ್ಷರಶಃ ಏನೇನೂ ಅಲ್ಲ.

ಸಿಕ್ಕಿಂನ ಪವನ್‌ ಕುಮಾರ್‌ ಚಾಮ್ಲಿಂಗ್‌ ಅವರು ಅತಿ ಹೆಚ್ಚು ಕಾಲ (24 ವರ್ಷ 165 ದಿನಗಳು) ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಅವರ ಬಳಿಕ ಒಡಿಶಾದ ನವೀನ್‌ ಪಟ್ನಾಯಕ್‌ (ಚಾಮ್ಲಿಂಗ್‌ ಅವರಿಗಿಂತ 66 ದಿನ ಕಡಿಮೆ) ಮತ್ತು 23 ವರುಷಗಳಿಗೂ ಹೆಚ್ಚಿನ ಅವಧಿ ಆಡಳಿತ ನಡೆಸಿದ ಪಶ್ಚಿಮ ಬಂಗಾಳದ ಜ್ಯೋತಿ ಬಸು ಅವರಂತಹ ದಿಗ್ಗಜರು ಎರಡು ದಶಕಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿದ ದೇಶದಲ್ಲಿ ಸಿದ್ದರಾಮಯ್ಯ ಅವರ ಈ ಸಾಧನೆ ಒಂದು ವಿಶಿಷ್ಟ ಕಥೆ ಎನ್ನುವುದು ದಿಟ. ಇದರ ಬಗ್ಗೆ ಮುಂದೆ ಚರ್ಚೆ ಮಾಡೋಣ.

ಒತ್ತಡವನ್ನು ಮೀರಿ ನಡೆದ ದಾರಿ

ವಾಸ್ತವದಲ್ಲಿ ನೋಡಲು ಹೊರಟರೆ ಯಾವುದೇ ಮುಖ್ಯಮಂತ್ರಿ ಹತ್ತು ವರ್ಷಗಳ ಕಾಲ ಅಧಿಕಾರವನ್ನು ಪೂರೈಸದೇ ಇರುವ ಭಾರತದ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಕಳೆದ ಕೆಲವು ತಿಂಗಳುಗಳಿಂದ ಎಲ್ಲರೂ ಗಮನಿಸಿರುವಂತೆ ಡಿ.ಕೆ.ಶಿವಕುಮಾರ್‌ ಅವರು ಹಾಕುತ್ತಲೇ ಇರುವ ನಿರಂತರ ಸವಾಲಿನ ನಡುವೆಯೇ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಅವರು ಎದುರಿಸಿದ ಅಪಾರ ಪ್ರಮಾಣದ ಒತ್ತಡವು ರಾಜ್ಯದ ಮುಖ್ಯಮಂತ್ರಿ ಗಾದಿಯ ಐತಿಹಾಸಿಕ ಅಸ್ಥಿರತೆಗೆ ಒಂದು ಚಿಕ್ಕ ಉದಾಹರಣೆಯಷ್ಟೇ ಎಂದು ಹೇಳಬಹುದು.

ಕಳೆದ ಎರಡು ತಿಂಗಳ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಅಧಿಕಾರ ಪರ್ವ ಇನ್ನೇನು ಮುಗಿದೇ ಹೋಯಿತು ಎನ್ನುವ ಹೊತ್ತಿನಲ್ಲೇ ಕಾಂಗ್ರೆಸ್ಸಿನ ನಾಯಕರು ಉಪಮುಖ್ಯಮಂತ್ರಿಗಳ ಸಹಕಾರದೊಂದಿಗೆ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಿದ್ದರಾಮಯ್ಯ ಅವರಿಗೆ ʼಅವಕಾಶʼ ನೀಡಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಇದು ಒಂದು ರೀತಿಯಲ್ಲಿ ಸಚಿನ್‌ ತೆಂಡುಲ್ಕರ್‌ ಅವರು ಆಟ ಮುಗಿಯುವ ಮೊದಲು ದಾಖಲೆಯೂ ಮುರಿಯಲು ನೀಡಲಾಗುವ ಗರಿಷ್ಠ ಅವಕಾಶದಂತೆಯೇ ಇತ್ತು.

ಬಜೆಟ್‌ ದಾಖಲೆ ಮೇಲೆ ಕಣ್ಣು

ಈ ಸಾಧನೆಯನ್ನು ಪೂರೈಸಿದ ಬೆನ್ನಲ್ಲೇ ಸಿದ್ದರಾಮಯ್ಯನವರ ಕಣ್ಣು ಈಗ ರಾಜ್ಯದ ಬಜೆಟ್‌ ಮಂಡನೆಗೆ ಸಂಬಂಧಿಸಿದ ಮತ್ತೊಂದು ದಾಖಲೆಯ ಮೇಲಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಯವರು ಅಲ್ಲಿಯೂ ಉತ್ತಮ ಸ್ಕೋರ್‌ ಮಾಡುವ ನಿರೀಕ್ಷೆ ಇದೆ. ಇದು ಕರ್ನಾಟಕದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಸಚಿವ ಎಂಬ ದಾಖಲೆಯಾಗಲಿದೆ.

ಮುಂದಿನ ತಿಂಗಳ ಹೊತ್ತಿಗೆ ಅವರು ರಾಜ್ಯದ ಬಜೆಟ್‌ ಮಂಡನೆ ಮಾಡಿದರೆ ಅದು ಅವರ ಹದಿನೇಳನೆ ಬಜೆಟ್‌ ಆಗಲಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 13 ಬಜೆಟ್‌ ಗಳನ್ನು ಮಂಡಿಸಿದ್ದರು. ಅವರ ನಂತರದ ಸ್ಥಾನದಲ್ಲಿ ಇರುವವರು ಸಿದ್ದರಾಮಯ್ಯನವರು.

ಅರಸು ಕಾಲದ ಕಾಂಗ್ರೆಸ್‌ ಪ್ರಾಬಲ್ಯ

ಕರ್ನಾಟಕದಲ್ಲಿ `ಏಳು ವರ್ಷ 240 ದಿನಗಳʼ ಆಡಳಿತವೇ ಒಂದು ದಾಖಲೆ ಎಂದು ಪರಿಗಣಿಸುವುದೇ ಹೌದಾದರೆ ಅದಕ್ಕೆ ಮುಖ್ಯ ಕಾರಣ ಇಲ್ಲಿನ ಸಾಮಾಜಿಕ ವಿಭಿಜಿತವಾಗಿರುವ ಮತದಾರರ ಸ್ವರೂಪವೇ ಕಾರಣ. 1970ರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದ ಸಂದರ್ಭವೇ ಭಿನ್ನವಾಗಿತ್ತು. ಅವರು 1972ರಿಂದ 1977ರವರೆಗೆ ಮತ್ತು 1979ರಿಂದ 1980ರ ಅವಧಿಯಲ್ಲಿ ಆಡಳಿತ ನಡೆಸಿದ್ದರು (ಎರಡು ಅವಧಿಗಳು. ಇದರಲ್ಲಿ ಎರಡನೇ ಅವಧಿ ಅಪೂರ್ಣವಾಗಿತ್ತು).

ಅದು ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದ್ದ ಕಾಲಘಟ್ಟ. ಜೂನ್‌ 1975ರಿಂದ 1977ರ ಮಾರ್ಚ್‌ ಅವರಿಗಿನ ಅರಸು ಅಧಿಕಾರ ಅವಧಿಯು ಇಂದಿರಾ ಗಾಂಧಿ ಅವರು ಹೇರಿಕೆ ಮಾಡಿದ್ದ ತುರ್ತು ಪರಿಸ್ಥಿತಿಯನ್ನು ತಳಕು ಹಾಕಿಕೊಂಡಿತ್ತು. ದೇವರಾಜು ಅರಸು ಅವರು ಇಂದಿರಾ ಗಾಂಧಿ ಅವರಿಗೆ ಅತ್ಯಂತ ನಿಷ್ಠರಾಗಿದ್ದರು ಮತ್ತು ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್‌ ಮೊದಲ ಬಾರಿಗೆ ಪತನ ಹೊಂದಿದ್ದರೂ ಅರಸು ಇಂದಿರಾ ಜೊತೆಗೇ ಇದ್ದರು.

ಆದರೆ ಅದಾಗಿ ಎರಡನೇ ಅವಧಿಯಲ್ಲಿ ಅಂದರೆ 1979ರಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ಭಿನ್ನಾಭಿಪ್ರಾಯಗಳು ತಲೆದೋರಿತು. ಅರಸು ತಮ್ಮ ಸಹೋದ್ಯೋಗಿಗಳ ಪಡೆಯೊಂದಿಗೆ ಇಂದಿರಾ ಅವರಿಂದ ದೂರಾದರು. ಆದಾಗ್ಯೂ ಇಂದಿರಾ ಮತ್ತೆ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದಾಗ ಅರಸು ಬೆಂಬಲಿಗರು ಮರಳಿ ಇಂದಿರಾ ಗಾಂಧಿ ಪಾಳಯವನ್ನು ಸೇರಿಕೊಂಡರು. ಇದರಿಂದ ಅನಿವಾರ್ಯವಾಗಿ ಅರಸು ರಾಜೀನಾಮೆ ನೀಡಬೇಕಾಯಿತು ಮತ್ತು ರಾಜಕೀಯವಾಗಿ ಅದು ದೇವರಾಜ ಅರಸು ಅವರ ಅಂತ್ಯದ ಆರಂಭವಾಗಿತ್ತು.

ದಳ ಬಿಟ್ಟು ಬಂದ ಸಿದ್ದು

ಸಿದ್ದರಾಮಯ್ಯ ಅವರ ವಿಚಾರದಲ್ಲಿ ಇದು ಭಿನ್ನವಾಗಿ ಕೆಲಸ ಮಾಡಿತು. ಮೂಲತಃ ಸಮಾಜವಾದಿ ಪಾಳಯದವರಾದ ಅವರು ಜನತಾದಳದ ಸದಸ್ಯರಾಗಿದ್ದರು. ತಮ್ಮ ರಾಜಕೀಯ ಗುರುಗಳಾದ ಎಚ್.ಡಿ.ದೇವೇಗೌಡ ಮತ್ತು ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಫಲವಾಗಿ 2006ರಲ್ಲಿ ಅವರು ಕಾಂಗ್ರೆಸ್‌ ಪಕ್ಷ ಸೇರಿಕೊಂಡರು.

ಸಿದ್ದರಾಮಯ್ಯ ಅವರು ಜನತಾ ಪಕ್ಷ ಮತ್ತು ನಂತರ ಜನತಾದಳದಲ್ಲಿದ್ದ ಪ್ರತಿಭಾವಂತ ಹಾಗೂ ಸಿದ್ಧಾಂತಕ್ಕೆ ಬದ್ಧರಾದ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡವರು. ಅಂದು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ ಅವರ ಹೊರತಾಗಿ ಅಬ್ದುಲ್‌ ನಜೀರ್‌ ಸಾಬ್‌, ಲಕ್ಷ್ಮೀಸಾಗರ್‌, ಜೆ.ಎಚ್.ಪಟೇಲ್‌ ಮತ್ತು ಎಸ್.ಆರ್.ಬೊಮ್ಮಾಯಿ ಅವರಂತಹ ಸ್ವಯಂ ಪ್ರಭಾವ ಹೊಂದಿದ್ದ ನಾಯಕರ ಪಡೆಯೇ ಆ ಗುಂಪಿನಲ್ಲಿತ್ತು. ಇದು ಕೇವಲ ಒಬ್ಬಿಬ್ಬರು ನಾಯಕರ ವರ್ಚಸ್ಸನ್ನು ನೆಚ್ಚಿಕೊಂಡಿದ್ದ ಅಂದಿನ ಕಾಂಗ್ರೆಸ್‌ ಪಕ್ಷಕ್ಕಿಂತ ಭಿನ್ನವಾಗಿತ್ತು.

ಅಂತಿಮವಾಗಿ ಸಿದ್ದರಾಮಯ್ಯ ಅವರು ಜನತಾದಳವನ್ನು ತೊರೆದು ಕಾಂಗ್ರೆಸ್‌ ಸೇರಿಕೊಂಡಾಗ ಪಕ್ಷದೊಳಗೆ ಭಾರೀ ವಿರೋಧವನ್ನೇ ಎದುರಿಸಬೇಕಾಯಿತು. ಆದರೆ ಹಣಕಾಸು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ ದಕ್ಷ ಆಡಳಿತಗಾರ ಎಂಬ ಖ್ಯಾತಿಯು ಕಾಂಗ್ರೆಸ್‌ ಒಳಗಿನ ವಿರೋಧದ ಅಲೆಯ ವಿರುದ್ಧ ರಕ್ಷಾ ಕವಚವಾಗಿ ಪರಿಣಮಿಸಿತು. ಹೊಸದಾಗಿ ಪಕ್ಷವನ್ನು ಸೇರಿಕೊಂಡ ಅವರು ಅಂದು 10, ಜನಪಥ್‌ ನಲ್ಲಿ ಪ್ರಭಾವಿಯಾಗಿದ್ದ ತಂಡ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.

ಅಂದು ಪ್ರಭಾವಿಯಾಗಿದ್ದ ಇಂದಿರಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್‌ ಪಕ್ಷವನ್ನು ತೊರೆದು ಹಾದಿ ತಪ್ಪಿದಂತಾದ ದೇವರಾಜು ಅರಸು ಅವರಿಗಿಂತ ತೀರಾ ಭಿನ್ನವಾಗಿ ಸೋನಿಯಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್‌ ಪಕ್ಷವನ್ನು ನೆಚ್ಚಿಕೊಂಡ ಸಿದ್ದರಾಮಯ್ಯ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತ ಹೋದರು.

ಕರ್ನಾಟಕದ ಬದಲಾವಣೆಯ ಹರಿಕಾರ ಅರಸು

ಹಾಗಂತ ಈ ಇಬ್ಬರು ಮುಖ್ಯಮಂತ್ರಿಗಳ ಆಡಳಿತದ ನಡುವೆ ನೇರಾನೇರ ಹೋಲಿಕೆ ಮಾಡಲು ಸಾಧ್ಯವಿಲ್ಲ. 1956ರ ನಂತರದ ಕರ್ನಾಟಕದ ಸಮಕಾಲೀನ ರಾಜಕೀಯ ಇತಿಹಾಸದಲ್ಲಿ ದೇವರಾಜ ಅರಸು ಅವರು ಅದ್ವಿತೀಯ ಮುಖ್ಯಮಂತ್ರಿಯಾಗಿ ಹಾಗೂ ರಾಜ್ಯದ ದಿಕ್ಕನ್ನೇ ಬದಲಿಸಿದ ನಾಯಕರಾಗಿ ಗುರುತಿಸಿಕೊಂಡವರು.
“ನಾವಿಬ್ಬರೂ ಮೈಸೂರು ಜಿಲ್ಲೆಗೆ ಸೇರಿದವರು ಎಂಬ ವಿಷಯವನ್ನು ಹೊರತುಪಡಿಸಿದರೆ ಅರಸು ಅವರಿಗೆ ನನ್ನನ್ನು ಹೋಲಿಸಲು ಸಾಧ್ಯವಿಲ್ಲದ ಮಾತು,” ಎಂದು ಸ್ವತಃ ಸಿದ್ದರಾಮಯ್ಯ ಅವರೇ ವಿನಮ್ರವಾಗಿ ಒಪ್ಪಿಕೊಂಡಿದ್ದಾರೆ.

ಅರಸು ಮಾಸ್ಟರ್‌ ಸ್ಟ್ರೋಕ್‌

ದೇವರಾಜ ಅರಸು ಕಾಲವು ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ರಾಜಕೀಯ ಪ್ರಾಬಲ್ಯವನ್ನು ಹೊಂದಿತ್ತು. ಆದರೆ ಅದನ್ನು ಕುಗ್ಗಿಸುವಲ್ಲಿ ಅರಸು ಕೊಟ್ಟಿದ್ದು ಮಾಸ್ಟರ್‌ ಸ್ಟ್ರೋಕ್.‌ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಹಿಡಿತವು ಸಾಮಾಜಿಕವಾಗಿ ಸಡಿಲಗೊಂಡಿದ್ದು ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ. ಅಷ್ಟು ಮಾತ್ರವಲ್ಲದೆ ಅತ್ಯಂತ ವ್ಯವಸ್ಥಿತವಾಗಿ ಹಿಂದುಳಿದ ವರ್ಗಗಳ ಜನರಿಗೆ ರಾಜಕೀಯ ಮತ್ತು ಆಡಳಿತದಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟರು. ರಾಜ್ಯದ ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅರಸು ಅವರು ಹಿಂದುಳಿದ ವರ್ಗಗಳಿಗೆ ಅಂದು ನೀಡಿದ ಉತ್ತೇಜನವೇ ರಾಜ್ಯದ ಮುಂದಿನ ರಾಜಕೀಯ ಸ್ಥಿತ್ಯಂತರಗಳಿಗೆ ಬುನಾದಿ ಹಾಕಿತು. ೧೯೮೩ರಲ್ಲಿ ಕಾಂಗ್ರೆಸ್‌ ವಿರೋಧಿ ಅಲೆಯ ಮೇಲೆ ಜನತಾ ಪಕ್ಷ (ಬಳಿಕ ಜನತಾದಳ) ಉದಯವಾದಾಗ ಸಿದ್ದರಾಮಯ್ಯ ಅವರಂತಹ ಹಿಂದುಳಿದ ವರ್ಗಗಳ ನಾಯಕರು ಮುಂಚೂಣಿಗೆ ಬರಲು ಸಾಧ್ಯವಾಯಿತು. ಅರಸು ಹಾದಿಯಲ್ಲಿಯೇ ನಡೆದ ಸಿದ್ದರಾಮಯ್ಯನವರು ಕೂಡ ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರ ಒಕ್ಕೂಟ (ಅಹಿಂದ)ವನ್ನು ಪ್ರೋತ್ಸಾಹಿಸುತ್ತ, ಹುರಿದುಂಬಿಸುತ್ತ ಬಂದಿದ್ದಾರೆ ಎಂಬುದು ದಿಟ.

ಈ ಇಬ್ಬರು ಮುಖ್ಯಮಂತ್ರಿಗಳ ನಡುವಿನ ಮತ್ತೊಂದು ಗುರುತಿಸಬಹುದಾದ ಸಮಾನ ದಾಖಲೆ ಎಂದರೆ; ಇವರಿಬ್ಬರು ಮಾತ್ರ ತಲಾ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿದ ನಾಯಕರಾಗಿದ್ದಾರೆ. ಅರಸು ಅವರು 1972ರಿಂದ 1977ರ ವರೆಗೆ ಮತ್ತು ಸಿದ್ದರಾಮಯ್ಯನವರು 2013ರಿಂದ 2018ರವರೆಗೆ. ಕಾಂಗ್ರೆಸ್ಸಿನ ಎಸ್.ಎಂ.ಕೃಷ್ಣ ಅವರು ಕೂಡ 1977ರಿಂದ 2004ರವರೆಗೆ ಪೂರ್ಣಾವಧಿ ಪೂರೈಸುವ ಅವಕಾಶವನ್ನು ಹೊಂದಿದ್ದರು. ಆದರೆ ಅವರು ತಮ್ಮ ಅವಧಿ ತಾಂತ್ರಿಕವಾಗಿ ಮುಕ್ತಾಯಗೊಳ್ಳುವ ಮುನ್ನವೇ ಸ್ವಯಂಪ್ರೇರಿತವಾಗಿ ಚುನಾವಣೆಗೆ ಕರೆ ನೀಡಿದರು.

ರಾಜಕೀಯ ಅಸ್ಥಿರತೆಗೆ ಕಾರಣಗಳು ಹಲವು

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾದ ವಿದ್ಯಮಾನಗಳೆಂದರೆ; ಕಾಂಗ್ರೆಸ್‌ ರಾಜಕೀಯ ಪ್ರಾಬಲ್ಯ ಕಡಿಮೆಯಾಗಿ ನಂತರ ಹಿಂದುಳಿದ ವರ್ಗಗಳ ಬಲದೊಂದಿಗೆ ಜನತಾದಳ ಉದಯವಾಗಿದ್ದು, ಆ ಪಕ್ಷವು ಹೋಳು ಹೋಳಾಗಿ ಬಿಜೆಪಿ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದ್ದು ಇತ್ಯಾದಿ. ಈ ಮೂರೂ ಪಕ್ಷಗಳಲ್ಲಿ ಯಾವುದೂ ಕೂಡ ಉಳಿದೆರಡು ಪಕ್ಷಗಳನ್ನು ಸಂಪೂರ್ಣವಾಗಿ ಮೀರಿಸಿ ನಿರ್ಣಾಯಕವಾಗಿ ಅಧಿಕಾರ ಹಿಡಿಯಲು ಪದೇ ಪದೇ ಸಾಧ್ಯವಾಗುತ್ತಿಲ್ಲ ಎಂಬುದು ರಾಜಕೀಯ ಸ್ಥಿರತೆಗೆ ಮುಖ್ಯ ಕಾರಣವಾಗಿದೆ.

ರಾಜ್ಯ ರಾಜಕೀಯದ ಚುನಾವಣಾ ಲೆಕ್ಕಾಚಾರಗಳ ಪ್ರಕಾರ ಕರ್ನಾಟಕದ ಎಲ್ಲ ಸುಮುದಾಯಗಳ ವ್ಯಾಪಕ ಬೆಂಬಲವನ್ನು ಹೊಂದಿದ ಪಕ್ಷ ಮಾತ್ರ ಸ್ವಂತ ಬಲದಿಂದ ಬಹುಮತ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಸೇರ್ಪಡೆಯು ಕಾಂಗ್ರೆಸ್‌ ಪಕ್ಷಕ್ಕೆ ವರದಾನವಾಗಿ ಪರಿಣಮಿಸಿತು. ಯಾಕೆಂದರೆ ಅವರು ತಮ್ಮೊಂದಿಗೆ ಹಿಂದುಳಿದ ವರ್ಗಗಳ ಬೆಂಬಲವನ್ನು ಹೊಂದಿದ್ದರು.

ಬಿಜೆಪಿ 2008ರಿಂದ ಈಚೆಗೆ ಹಲವು ಬಾರಿ ಅಧಿಕಾರಕ್ಕೆ ಬಂದಿದ್ದರೂ ಕೂಡ 224 ಸದಸ್ಯರ ಬಲದ ವಿಧಾನಸಭೆಯಲ್ಲಿ ಅದು ಇದುವರೆಗೂ ಸ್ವಂತ ಬಲದ ಮೇಲೆ ಸರಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ದಲಿತರು ಮತ್ತು ಅಲ್ಪಸಂಖ್ಯಾತರು ಸಂಪೂರ್ಣವಾಗಿ ಪಕ್ಷದ ಬೆಂಬಲಕ್ಕೆ ನಿಂತಿಲ್ಲದೇ ಇರುವುದೇ ಇದಕ್ಕೆ ಕಾರಣ. 2008ರಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿಯ ಅಗ್ರ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪೂರ್ಣಾವಧಿ ಪೂರೈಸುವ ಭರವಸೆ ಮೂಡಿಸಿದ್ದರು. ಆದರೆ ಪಕ್ಷದೊಳಗಿನ ಪರಸ್ಪರ ಕತ್ತಿ ಮಸೆಯುತ್ತಿದ್ದ ವಿರೋಧದ ಶಕ್ತಿ ಕೇಂದ್ರಗಳನ್ನು ನಿಭಾಯಿಸುವುದು ಅಸಾಧ್ಯವಾಯಿತು. ಇದು ಅವರ ವೈಯಕ್ತಿಕ ವೈಫಲ್ಯಗಳು ಕಾರಣ.

ಪೂರೈಸುವರೇ ಎರಡು ಪೂರ್ಣಾವಧಿ?

ಸಿದ್ದರಾಮಯ್ಯ ಅವರು ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ತಕ್ಕ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದರೂ ತಮ್ಮ ರಾಜಕೀಯ ಚಾಣಾಕ್ಷತನದ ಮೂಲಕ ತಮ್ಮ ಬೆಂಬಲಿಗರನ್ನೆಲ್ಲ ಒಟ್ಟುಗೂಡಿಸಿ ಇಂದಿನ ಸ್ಥಾನವನ್ನು ತಲುಪಿದ್ದಾರೆ. ಇತರ ಅನೇಕ ವಿಷಯಗಳ ಜೊತೆಗೆ ಬಡವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗಾಗಿ ಅವರು ರೂಪಿಸಿದ ʼಐದು ಗ್ಯಾರಂಟಿʼ ಯೋಜನೆಗಳು ಚಿರಸ್ಮರಣೀಯವಾಗಿವೆ. 2023ರಲ್ಲಿ ಕಾಂಗ್ರೆಸ್‌ ಪಕ್ಷದ ಭರ್ಜರಿ ಯಶಸ್ಸಿನಲ್ಲಿ ಈ ಯೋಜನೆಗಳು ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಅನೇಕರು ನಂಬುತ್ತಾರೆ.

ಈಗ ನಾವು ಕೇಳಬೇಕಾದ ಪ್ರಮುಖ ಪ್ರಶ್ನೆ, ಸಿದ್ದರಾಮಯ್ಯ ಅವರಿಗೆ ತಮ್ಮ ಎರಡನೇ ಪೂರ್ಣಾವಧಿಯನ್ನು ಪೂರೈಸಲು ಅವಕಾಶ ಮಾಡಿಕೊಡಲಾಗುತ್ತದೆಯೇ ಮತ್ತು ಆ ಮೂಲಕ ಎರಡು ಪೂರ್ಣಾವಧಿ ಪೂರೈಸಿದ ಮತ್ತೊಂದು ದಾಖಲೆಯನ್ನು ಅವರು ನಿರ್ಮಿಸುತ್ತಾರೆಯೇ ಎಂಬುದು. ಆದರೆ ಅದು ಸದ್ಯಕ್ಕೆ ಮತ್ತೊಂದು ದಿನದ ಚರ್ಚೆ.

Next Story