ಸಾಮಾಜಿಕ ನ್ಯಾಯದ ಹರಿಕಾರ ಅರಸು; ಸಾಮ್ಯತೆಗೆ ನಿಲುಕದ ಸಿದ್ದರಾಮಯ್ಯ ವರ್ಚಸ್ಸು
x

ಎಐ ಆಧಾರಿತ ಚಿತ್ರ

ಸಾಮಾಜಿಕ ನ್ಯಾಯದ ಹರಿಕಾರ "ಅರಸು"; ಸಾಮ್ಯತೆಗೆ ನಿಲುಕದ ಸಿದ್ದರಾಮಯ್ಯ ವರ್ಚಸ್ಸು

ಮಾಜಿ ಸಿಎಂ ದೇವರಾಜ ಅರಸು ಅವರು ಎರಡನೇ ಸಾಲಿನ ನಾಯಕರನ್ನು ಬೆಳೆಸುವ ಮೂಲಕ 'ರಾಜಕೀಯ ತಲೆಮಾರು' ಸೃಷ್ಟಿಸಿದರೆ, ಸಿಎಂ ಸಿದ್ದರಾಮಯ್ಯ ಅವರು ಕೇವಲ 'ಜನಪರ ಯೋಜನೆʼಗಳ ಅನುಷ್ಠಾನಕ್ಕಷ್ಟೇ ಸೀಮಿತರಾದರು.


Click the Play button to hear this message in audio format

ಸಾಮಾಜಿಕ ನ್ಯಾಯಕ್ಕೆ ನೈಜ ಅರ್ಥ ತಂದುಕೊಟ್ಟ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಕರ್ನಾಟಕ ಕಂಡ ದೀರ್ಘಾವಧಿ ಮುಖ್ಯಮಂತ್ರಿ. ಈಗ ಅರಸು ಅವರ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಗಟ್ಟಿದ್ದಾರೆ. ದೀರ್ಘಾವಧಿ ಸಿಎಂ ಆಗಿ ದಾಖಲೆ ಮುರಿದಿರುವ ಸಿದ್ದರಾಮಯ್ಯ ಅವರನ್ನು ಅರಸು ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ, ಇಬ್ಬರ ಅವಧಿಯಲ್ಲಿನ ಆಡಳಿತದಲ್ಲಿ ಸಾಮ್ಯತೆ ಅಪರೂಪ ಎಂಬ ಮಾತುಗಳು ಕೇಳಿ ಬರುತ್ತಿವೆ.

ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಇಬ್ಬರೂ ಸಮಾಜವಾದದ ಹಿನ್ನೆಲೆಯಿಂದ ಬಂದರೂ, ಸಾಮಾಜಿಕ ನ್ಯಾಯ ಒದಗಿಸುವ ವಿಚಾರದಲ್ಲಿ ವೈರುದ್ಯಗಳು ಎದ್ದು ಕಾಣುತ್ತಿವೆ. ಅರಸು ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮೂಲಕ ಅಸಂಖ್ಯಾತ ಸಣ್ಣಪುಟ್ಟ ಜಾತಿಗಳನ್ನು ಒಗ್ಗೂಡಿಸಿ ಅವರಿಗೆ 'ರಾಜಕೀಯ ಅಸ್ತಿತ್ವ' ನೀಡಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸು ಅವರಂತೆ ಸಾಂಸ್ಥಿಕ ಬದಲಾವಣೆ ತರುವಲ್ಲಿ ಮತ್ತು ನಾಯಕತ್ವ ಬೆಳೆಸಲು ಮುಂದಾಗಲಿಲ್ಲ. ಕನಿಷ್ಠ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿ ಜಾರಿ (ಜಾತಿಗಣತಿ)ಗೂ ಮನಸ್ಸು ಮಾಡಲಿಲ್ಲ. ಇದು ವಿಶೇಷವಾಗಿ ತಳ ಸಮುದಾಯಗಳ ಕುರಿತ ಸಿದ್ಧರಾಮಯ್ಯ ಅವರ ಬದ್ಧತೆಗೆ ಸಾಕ್ಷಿ ಎಂಬ ಟೀಕೆಗಳು ಕೇಳಿ ಬಂದಿದ್ದವು.

ಸ್ವತಃ ಹಿಂದುಳಿದ ಜಾತಿಗೆ ಸೇರಿದ ಅರಸು ಅವರು ಎಂದಿಗೂ ಸ್ವಜಾತಿ, ಸ್ವಬಂಧುಗಳನ್ನು ರಾಜಕಾರಣಕ್ಕೆ ಬಿಟ್ಟುಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ‌ಪ್ರಯತ್ನ ಪಡುತ್ತಿರುವ ವಿಚಾರ ಗುಟ್ಟೇನಲ್ಲ. ಅದೇ ರೀತಿ ಪುತ್ರ ಯತೀಂದ್ರ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನು ನೇಮಿಸಿದರು. ಹೀಗಾಗಿ, ರಾಜಕೀಯವಾಗಿಯೂ ಅರಸು ಅವರ ಆದರ್ಶಗಳನ್ನು ಸಿದ್ದರಾಮಯ್ಯ ಪಾಲಿಸಲಿಲ್ಲ. ಆದ ಕಾರಣ ಹೋಲಿಕೆಯೇ ಅನಗತ್ಯ ಎಂಬುದು ಜನರ ಉವಾಚ.

ದೇವರಾಜ ಅರಸು ಆಡಳಿತದ ಸಂದರ್ಭದಲ್ಲಿ ರಾಜ್ಯದ ರಾಜಕಾರಣ ಕೇವಲ ಎರಡು ಪ್ರಬಲ ಸಮುದಾಯಗಳ ಹಿಡಿತದಲ್ಲಿತ್ತು. ಇದನ್ನು ಮನಗಂಡೇ ಎಲ್.ಜಿ. ಹಾವನೂರ ಮೂಲಕ ಹಿಂದುಳಿದ ವರ್ಗಗಳ ಸಮೀಕ್ಷೆ ಕೈಗೊಂಡು ʼಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಘೋಷಣೆಗೆ ನಾಂದಿ ಹಾಡಿದರು. ಹಲವು ಸಣ್ಣ ಪುಟ್ಟ ಜಾತಿಗಳಿಗೆ ಮೀಸಲಾತಿ ಒದಗಿಸಿದರು. ಅರಸು ಅವರ ಪ್ರಯತ್ನದಿಂದಲೇ ಹಿಂದುಳಿದ ವರ್ಗಗಳ ಒಕ್ಕೂಟ ಆರಂಭವಾಯಿತು.

ಸಿದ್ದರಾಮಯ್ಯ ಅವರು ಅಹಿಂದ ನಾಯಕರೆಂದು ಕರೆಸಿಕೊಂಡರೂ ಅರಸು ಅವರಂತೆ ಹೊಸ ನಾಯಕರನ್ನು ರಾಜಕೀಯಕ್ಕೆ ಅಣಿಗೊಳಿಸುವಲ್ಲಿ ವಿಫಲರಾದರು. ಅರಸು ಅವರು ಉಳುವವನೆ ಭೂಮಿಯ ಒಡೆಯ, ಋಣಮುಕ್ತ ಕಾಯ್ದೆ, ಜೀತ ಹಾಗೂ ಮಲ ಹೊರುವ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಹೆಜ್ಜೆ ಗುರುತು ಮೂಡಿಸುವ ಯೋಜನೆ ತಂದರು. ಆದರೆ, ಸಿದ್ದರಾಮಯ್ಯ ಅವರು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಕ್ರಾಂತಿಗೆ ಕಾರಣರಾದರು.

ರಾಜಕೀಯ ನಾಯಕರ ಪಡೆ ಕಟ್ಟಿದ ಅರಸು

ದೇವರಾಜ ಅರಸು ಅವರು ತಮಗಿಂತ ದೊಡ್ಡ ನಾಯಕರನ್ನು ಬೆಳೆಸಲು ಹೆಚ್ಚು ಇಷ್ಟಪಡುತ್ತಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ವಿಷಯದಲ್ಲಿ ಇದು ಶೂನ್ಯ ಸಾಧನೆ ಎಂತಲೇ ಕರೆಯಬಹುದಾಗಿದೆ. ಅರಸು ಅವರು ತಮ್ಮ ಆಡಳಿತದಲ್ಲಿ ಎಲ್ಲ ವರ್ಗಗಳಲ್ಲೂ ಎರಡನೇ ಶ್ರೇಣಿಯ ನಾಯಕರನ್ನು ರಾಜಕೀಯವಾಗಿ ಬೆಳೆಸಿದರು. ಬಹುತೇಕ ನಾಯಕರು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ, ಹಿರಿಯ ನಾಯಕ ಜನಾರ್ದನ ಪೂಜಾರಿ ಅವರಂತಹ ನಾಯಕರನ್ನು ಪ್ರದೇಶವಾರು ಬೆಳೆಸಿದರು. ಆದರೆ ಸಿದ್ದರಾಮಯ್ಯ ಅವರು ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಅರಸು ಸಿದ್ಧಾಂತವನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿಲ್ಲ. ಒಬ್ಬೇ ಒಬ್ಬರು ಎರಡನೇ ಪಂಕ್ತಿಯ 'ಅಹಿಂದ' ನಾಯಕರನ್ನು ಬೆಳೆಸಿಲ್ಲ. ಅಹಿಂದಕ್ಕೆ ತಾವೊಬ್ಬರೇ ನಾಯಕರು ಎಂಬಂತೆ ಬಿಂಬಿಸಿಕೊಂಡ ಸಿದ್ದರಾಮಯ್ಯ ಅವರು, ಕೇವಲ ಅನುಯಾಯಿಗಳೇ ಪಡೆ ಕಟ್ಟಿಕೊಂಡರೆ ವಿನಃ ನಾಯಕರನ್ನು ಬೆಳೆಸಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇನ್ನು ಇವರಿಬ್ಬರ ರಾಜಕೀಯ, ಆಡಳಿತವನ್ನು ಹೋಲಿಕೆ ಮಾಡುವುದಾದರೆ, ದೇವರಾಜ ಅರಸು ಅವರಿಗೆ ಅವರೇ ಸಾಟಿ. ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿರುವುದು ಕೇವಲ ದಾಖಲೆಗಷ್ಟೇ ಹೊರತುಪಡಿಸಿದರೆ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅವರ ಹೆಚ್ಚುಗಾರಿಕೆ ನಗಣ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅರಸು ಅವರು 'ಅಹಿಂದ' (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ವರ್ಗಕ್ಕೆ ರಾಜಕೀಯ ಧ್ವನಿಯಾದರು. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭಾವಂತ ಯುವಕರನ್ನು ಗುರುತಿಸಿ ಅವರಿಗೆ ರಾಜಕೀಯ ನೆಲೆ ಕಲ್ಪಿಸಿಕೊಟ್ಟಿದ್ದು ಇದೇ ದೇವರಾಜ ಅರಸು ಅವರು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಾಮಾನ್ಯ ಕಾರ್ಮಿಕ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು 1971 ರಲ್ಲಿ ರಾಜಕೀಯಕ್ಕೆ ಕರೆತಂದಿದ್ದರು. ದೆಹಲಿಯಲ್ಲಿ ಈಗ ವಿಜೃಂಬಿಸುತ್ತಿರುವ ಖರ್ಗೆ ಅವರ ರಾಜಕೀಯ ಬದುಕಿನಲ್ಲಿ ಅರಸು ಕೊಡುಗೆ ಅಪಾರ.

ಹಿಂದುಳಿದ ಸಮುದಾಯದ (ರಜಪೂತ) ಧರಂಸಿಂಗ್ ಅವರನ್ನು ಗುರುತಿಸಿ ಬೆಳೆಸಿದರು. ಇವರು ಮುಂದೆ ರಾಜ್ಯದ ಮುಖ್ಯಮಂತ್ರಿಯಾದರು. ಇನ್ನು, ಬೀದರ್ ಜಿಲ್ಲೆಯ ದೇವೇಂದ್ರಪ್ಪ ಘಾಳಪ್ಪ ಅವರನ್ನು ಬೆಳೆಸುವ ಮೂಲಕ ಗಡಿ ಭಾಗದಲ್ಲಿ ಪಕ್ಷ ಬಲಪಡಿಸಿದ್ದರು. ಕರಾವಳಿ ಭಾಗದಲ್ಲಿ ವಕೀಲ ಬಿ. ಜನಾರ್ದನ ಪೂಜಾರಿ ಅವರನ್ನು ಗುರುತಿಸಿ ಸಂಸತ್ತಿಗೆ ಕಳುಹಿಸಿದರು. ವೀರಪ್ಪ ಮೊಯ್ಲಿಯವರಿಗೆ ರಾಜಕೀಯ ಸ್ಥಾನಮಾನ ನೀಡಿ ಬೆಳೆಸಿದ್ದರಿಂದಲೇ ಅವರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುವಂತಾಯಿತು. ಅಲ್ಪಸಂಖ್ಯಾತ ಸಮುದಾಯದ ಆಸ್ಕರ್ ಫರ್ನಾಂಡಿಸ್ ಅವರನ್ನು ಗುರುತಿಸಿ ರಾಷ್ಟ್ರ ರಾಜಕಾರಣದ ಮುಖ್ಯವಾಹಿನಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ.

ಮಲೆನಾಡು ಭಾಗದಲ್ಲಿ ಈಡಿಗ ಸಮುದಾಯದ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರನ್ನು ಬೆಳೆಸುವ ಮೂಲಕ ಅರಸು ಅವರು ಹಿಂದುಳಿದ ವರ್ಗಗಳ ಮತಬ್ಯಾಂಕ್ ಭದ್ರಪಡಿಸಿದ್ದರು. ಕೊನೆಗೆ ಬಂಗಾರಪ್ಪ ಅವರು 'ಸೋಲಿಲ್ಲದ ಸರದಾರ' ಎಂದೇ ಖ್ಯಾತಿ ಪಡೆದರು. ಹೀಗೆ ರಾಜ್ಯದ ಪ್ರತಿ ಮೂಲೆ ಮೂಲೆಯಲ್ಲಿ ಅರ್ಹ ನಾಯಕರನ್ನು ಗುರುತಿಸಿ, ಬೆಳೆಸಿದವರಲ್ಲಿ ಅರಸು ಪಾತ್ರ ಹೆಚ್ಚಿದೆ.

ನಾಯಕರನ್ನು ಅರಸು ಬೆಳೆಸಿದ್ದೇಗೆ?

ದೇವರಾಜ ಅರಸು ಅವರು ಜಾತಿ ಸಮೀಕರಣದ ಬದಲು 'ಸಾಮಾಜಿಕ ನ್ಯಾಯ'ಕ್ಕೆ ಒತ್ತು ನೀಡಿದ್ದರು. "ಅಹಿಂದ" ವರ್ಗದಲ್ಲಿ ಪ್ರತಿಯೊಂದು ಜಾತಿಗೆ ಒಬ್ಬೊಬ್ಬ ನಾಯಕನನ್ನು ಬೆಳೆಸಿದರು. ಅರಸು ಅವರು ತಮ್ಮ ಗರಡಿಯಲ್ಲಿ ಪಳಗಿದ ನಾಯಕರಿಗೆ ಕೇವಲ ಪದವಿ ಅಥವಾ ಅಧಿಕಾರ ಮಾತ್ರ ನೀಡಲಿಲ್ಲ. ಭೂಸುಧಾರಣೆ ಕಾಯ್ದೆ, ಹಾವನೂರು ವರದಿ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ತಲೆಯಲ್ಲಿ ತುಂಬಿದರು. ಈ ಕಾರಣಕ್ಕಾಗಿಯೇ ಅರಸು ಗರಡಿಯಲ್ಲಿ ಬೆಳೆಸಿದ ನಾಯಕರು ಇಂದಿಗೂ ಸಮಾಜಮುಖಿ ಚಿಂತನೆಗಳನ್ನು ಹೊಂದಿದ್ದಾರೆ.

ರಾಜ್ಯ ರಾಜಕಾರಣದಲ್ಲಾದ ಬದಲಾವಣೆಗಳು

ಸಮಾಜದ ಕೆಳಸ್ತರದ ಜನರಿಗೂ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯ ಎಂಬ ವಿಶ್ವಾಸ ಮೂಡಿಸುವಲ್ಲಿ ಅರಸು ಮೇಲ್ಪಂಕ್ತಿ ಹಾಕಿಕೊಟ್ಟರು. ಪ್ರತಿಯೊಂದು ಸಮುದಾಯಕ್ಕೂ ಒಬ್ಬ ನಾಯಕ ಸಿಕ್ಕಿದ್ದರಿಂದ ಕಾಂಗ್ರೆಸ್ ಪಕ್ಷವು ಪ್ರತಿ ಹಳ್ಳಿಯಲ್ಲೂ ತನ್ನ ನೆಲೆಯನ್ನು ಕಂಡುಕೊಂಡಿತು. ವಿವಿಧ ಜಿಲ್ಲೆಗಳ ನಾಯಕರು ಸಚಿವರಾದಾಗ, ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಅಭಿವೃದ್ಧಿ ಜಿಲ್ಲೆಗಳಿಗೂ ಹಂಚಿಕೆಯಾಯಿತು.

ಸಿದ್ದರಾಮಯ್ಯ ನಾಯಕತ್ವದ ನೋಟ

ದೇವರಾಜ ಅರಸು ಅವರು ನಾಯಕರನ್ನು ಸೃಷ್ಟಿಸಿದರು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಅರಸು ಆದರ್ಶಗಳನ್ನೇ ಬದಿಗೆ ಸರಿಸಿದರು ಎಂಬ ಟೀಕೆಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರು "ಯೋಜನೆಗಳ" ಮೂಲಕ ಜನರನ್ನು ತಲುಪಲು ಪ್ರಯತ್ನಿಸಿದರೇ ಹೊರತು, ಅರಸು ಅವರಂತೆ ಹೊಸ ತಲೆಮಾರಿನ ನಾಯಕರನ್ನು ಜಿಲ್ಲಾವಾರು ಮಟ್ಟದಲ್ಲಿ ಬೆಳೆಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಅವರು ಅಧಿಕಾರ ಹಿಡಿದಾಗ ಸಮುದಾಯಗಳಲ್ಲಿ ರಾಜಕೀಯ ಜಾಗೃತಿ ಮೊಳಕೆಯೊಡೆದಿತ್ತು. ಆದರೆ ಆರ್ಥಿಕ ಅಸಮಾನತೆ ದೊಡ್ಡದಾಗಿ ಬೆಳೆದಿತ್ತು. ಸಿದ್ದರಾಮಯ್ಯ ಅವರು ನಾಯಕರನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ, ನೇರ ಆಡಳಿತ ಮತ್ತು ನೇರ ತಲುಪುವಿಕೆಗೆ ಒತ್ತು ನೀಡಿದರು.

ಭಾಗ್ಯಗಳಿಗೆ ಒತ್ತು ಕೊಟ್ಟ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಿಂದ 'ಭಾಗ್ಯ' ಗಳನ್ನು ಆರಂಭಿಸಿದರು. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳು ಕಾನೂನುಬದ್ಧ ಬದಲಾವಣೆಗಿಂತ ಜನರ ಹೊಟ್ಟೆ ತುಂಬಿಸುವ ಮತ್ತು ಬಡವರ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿದವು. ಇದು ಜನಸಾಮಾನ್ಯರಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಒಂದು 'ಅಲೆ' ಸೃಷ್ಟಿಸಿತು.

ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ಅವರು 'ಅನ್ನಭಾಗ್ಯ', 'ಗೃಹಲಕ್ಷ್ಮಿ' ಅಥವಾ 'ಯುವನಿಧಿ'ಯಂತಹ ಯೋಜನೆಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರಿಗೆ ಸಿಗಲಾರಂಭಿಸಿದವು. ಇಲ್ಲೂ ಕೂಡ ಸಿದ್ದರಾಮಯ್ಯ ಅವರು ಯೋಜನೆಗಳ ಮೂಲಕವೇ ಜನರ ಮನೆ ಬಾಗಿಲಿಗೆ ಹೋಗುವಲ್ಲಿ ಯಶಸ್ವಿಯಾದರು. ಕೋಟ್ಯಂತರ 'ಫಲಾನುಭವಿ'ಗಳ ಸೃಷ್ಟಿಯಿಂದ ಸಿದ್ದರಾಮಯ್ಯ ಅವರ ಪ್ರಭಾವಲಯ ವಿಸ್ತರಿಸಿತು.

ಸಿದ್ದರಾಮಯ್ಯ ಅವರ ಯೋಜನೆಗಳು ಜನರಲ್ಲಿ ಎಷ್ಟು ಪ್ರಭಾವ ಬೀರಿವೆ ಎಂದರೆ, ಜನರು ಪಕ್ಷಕ್ಕಿಂತ ಹೆಚ್ಚಾಗಿ "ಸಿದ್ದರಾಮಯ್ಯ ಯೋಜನೆಗಳು" ಎಂದು ಗುರುತಿಸುತ್ತಾರೆ. ಇದು ಅವರನ್ನು ಒಬ್ಬ 'ಮಾಸ್ ಲೀಡರ್' ಆಗಿ ರೂಪಿಸಿತು. ಅರಸು ಅವರು ನಾಯಕರನ್ನು ಸೃಷ್ಟಿಸಿ ಪಕ್ಷವನ್ನು ಬಲಪಡಿಸಿದರೆ, ಸಿದ್ದರಾಮಯ್ಯ ಅವರು ಫಲಾನುಭವಿಗಳನ್ನು ಸೃಷ್ಟಿಸಿ ತಮ್ಮ ಮತಬ್ಯಾಂಕನ್ನು ಭದ್ರಪಡಿಸಿಕೊಂಡರು.

ಇಂದು ಸಿದ್ದರಾಮಯ್ಯ ಅವರ ಪರ ಇರುವ ಅಹಿಂದ ವರ್ಗವು ಯಾವುದೇ ಸ್ಥಳೀಯ ನಾಯಕನಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಎಂಬ ವ್ಯಕ್ತಿ ಮತ್ತು ಅವರ ಯೋಜನೆಗಳಿಗೆ ನಿಷ್ಠವಾಗಿದೆ.

ಸಾಮಾಜಿಕ ಹೋರಾಟದ ಎರಡು ಹಂತಗಳು

ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಇವರಿಬ್ಬರೂ ಒಂದು ಸುದೀರ್ಘ ಸಾಮಾಜಿಕ ಹೋರಾಟದ ಎರಡು ಹಂತಗಳು. ದೇವರಾಜ ಅರಸು ಅವರು ಶೋಷಿತ ವರ್ಗದವರಿಗೆ "ನಾವೂ ಆಳಬಹುದು" ಎಂಬ ರಾಜಕೀಯ ಧ್ವನಿ ಮತ್ತು ಆತ್ಮವಿಶ್ವಾಸ ನೀಡಿದರು.

ಸಿದ್ದರಾಮಯ್ಯ ಅವರು ಅದೇ ವರ್ಗಕ್ಕೆ "ನಮ್ಮ ಬದುಕು ಹಸನಾಗಬಹುದು" ಎಂಬ ಆರ್ಥಿಕ ಭರವಸೆ ನೀಡಿದರು. ದೇವರಾಜ ಅರಸು ಸೃಷ್ಟಿಸಿದ ರಾಜಕೀಯ ಜಾಗೃತಿ ಇಲ್ಲದಿದ್ದರೆ, ಸಿದ್ದರಾಮಯ್ಯ ಅವರ ಯೋಜನೆಗಳನ್ನು ಸ್ವೀಕರಿಸುವ ಸಮಾಜ ಸಿದ್ಧವಾಗುತ್ತಿರಲಿಲ್ಲ. ಹಾಗೆಯೇ, ಅರಸು ಸೃಷ್ಟಿಸಿದ ನಾಯಕತ್ವವು ಕೇವಲ ರಾಜಕೀಯಕ್ಕೆ ಸೀಮಿತವಾಗಿದ್ದರೆ, ಸಿದ್ದರಾಮಯ್ಯ ಅವರ ಯೋಜನೆಗಳಿಲ್ಲದೆ ಆ ವರ್ಗಗಳು ಆರ್ಥಿಕವಾಗಿ ಹಿಂದುಳಿಯುತ್ತಿದ್ದವು. ಅರಸು ಅವರು ಅಹಿಂದವನ್ನು ಒಂದು 'ರಾಜಕೀಯ ಪ್ರಯೋಗಶಾಲೆ'ಯಾಗಿ ಆರಂಭಿಸಿದರು. ಸಿದ್ದರಾಮಯ್ಯ ಅದನ್ನು 'ಆಡಳಿತಾತ್ಮಕ ಮಾದರಿ'ಯಾಗಿ ಪರಿವರ್ತಿಸಿದರು.

ದೇವರಾಜ ಅರಸು ಅವರು 'ರಾಜಕೀಯ ಪ್ರಜಾಪ್ರಭುತ್ವ'ದ ಹರಿಕಾರರಾದರೆ, ಸಿದ್ದರಾಮಯ್ಯ 'ಸಾಮಾಜಿಕ-ಆರ್ಥಿಕ ಪ್ರಜಾಪ್ರಭುತ್ವ'ದ ಹರಿಕಾರರಾದರು. ಅರಸು ಅವರು ಬೆಳೆಸಿದ ನಾಯಕರು ರಾಜ್ಯವನ್ನು ಮುನ್ನಡೆಸಿದರೆ, ಸಿದ್ದರಾಮಯ್ಯ ಅವರು ಯೋಜನೆಗಳ ಮೂಲಕ ಬಡವರ ಹಸಿವು ನೀಗಿಸಿದರು. ಅರಸು ಅವರು ಕೆಳವರ್ಗದವರಿಗೆ 'ಅಧಿಕಾರ' ನೀಡಿದರೆ, ಸಿದ್ದರಾಮಯ್ಯ ಅವರು ಅದೇ ವರ್ಗಕ್ಕೆ 'ಅಧಿಕಾರದಲ್ಲಿ ಪಾಲು' ನೀಡಿದರು.

ಅರಸು ಹಾಗೂ ಸಿದ್ದರಾಮಯ್ಯ ಅವರು ಸಮಾಜವಾದದ ಆಲದ ಮರದ ನೆರಳಲ್ಲೇ ಬೆಳೆದರೂ ಆಡಳಿತ ವೈಖರಿ, ದೂರದೃಷ್ಟಿಯ ಯೋಜನೆಗಳಲ್ಲಿ ಸಾಕಷ್ಟು ಭಿನ್ನತೆಗಳಿವೆ. ಸಿದ್ದರಾಮಯ್ಯ ಅವರು ರಾಜ್ಯದ ಇತಿಹಾಸ ಕಂಡ ದೀರ್ಘಾವಧಿ ಸಿಎಂ ಆಗಿ ಅರಸು ಅವರ ದಾಖಲೆ ಮುರಿದರೂ ಅವರ ಸಾಮಾಜಿಕ ನ್ಯಾಯ ತುಡಿತವಾಗುವಲ್ಲಿ ಎಡವಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Read More
Next Story