
ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿದ ಆರೋಪಕ್ಕೆ ಟ್ವಿಸ್ಟ್; ಸತ್ಯ ಬಿಚ್ಚಿಟ್ಟ ಪೊಲೀಸ್ ಕಮಿಷನರ್!
ಸುಜಾತ ಹಂಡಿ ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಆದರೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ಪೊಲೀಸರೇ ಬಟ್ಟೆಬಿಚ್ಚಿಸಿ ಥಳಿಸಿರುವ ವಿಚಾರ ರಾಜ್ಯವ್ಯಾಪಿ ಭಾರೀ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರ ವಿರುದ್ಧ ಈ ಆರೋಪ ಮಂಗಳವಾರ(ಜ.6) ಕೇಳಿ ಬಂದಿತ್ತು. ರಾಜಕೀಯ ಚರ್ಚೆಗೂ ಕಾರಣವಾಗಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ. ಮಹಿಳೆಯೇ ತನ್ನ ಬಟ್ಟೆಯನ್ನು ಕಳಚಿದ್ದು, ಪೊಲೀಸರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿಯವರನ್ನು ಬಂಧಿಸಿ ವಾಹನದಲ್ಲಿ ಕೂರಿಸಿದ ಮೇಲೆ ಬಟ್ಟೆಯನ್ನು ಕಳಚಿದ್ದಾರೆ. ನಮ್ಮ ಮಹಿಳಾ ಸಿಬ್ಬಂದಿ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದಾರೆ. ಸಿಬ್ಬಂದಿಗಳನ್ನು ತಳ್ಳಿದ್ದಾರೆ. ಆಕೆಯ ವಿರುದ್ಧ ಈ ಮೊದಲು ಹಲವು ಪ್ರಕರಣ ದಾಖಲಾಗಿವೆ. ಐದು ಜನ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಯಾಗಿದ್ದು, ಸ್ವತಃ ಮಹಿಳೆಯೇ ಬಟ್ಟೆಯನ್ನು ಕಳಚಿ ವಿವಸ್ತ್ರಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಘಟನೆ ?
ಸುಜಾತ ಹಂಡಿ ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಆದರೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು, ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಅಧಿಕಾರಿಗಳ ಜೊತೆ ತೆರಳಿದ್ದ ಸುಜತಾ ಹಂಡಿ, ಈ ವೇಳೆ ತಗಾದೆ ತೆಗೆದು ಗಲಾಟೆ ಮಾಡಿದ್ದರು. ಈ ಹಳೆಯ ಪ್ರಕರಣ ಮುಂದಿಟ್ಟಕೊಂಡು ಕಾಂಗ್ರೆಸ್ ಕಾರ್ಪೊರೇಟರ್ ಹಾಗೂ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಸುಜತಾ ಹಂಡಿ ವಿರುದ್ಧ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಹಳೆ ವಿಚಾರ ಮುಂದಿಟ್ಟುಕೊಂಡು ಮಂಗಳವಾರ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಗಲಾಟೆಯಾಗಿತ್ತು.
ಬಂಧನದ ವೇಳೆ ಪ್ರತಿರೋಧ
ಮಂಗಳವಾರ ನಡೆದ ಗಲಾಟೆ ವೇಳೆ ದೂರು, ಪ್ರತಿದೂರು ದಾಖಲಾಗಿತ್ತು. ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂದಿಸಲು ತೆರಳಿದಾಗ ಪ್ರತಿರೋಧ ತೋರಿ ಚೀರಾಟ ನಡೆಸಿದ್ದು, ಪೊಲೀಸರೇ ಬಟ್ಟೆ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪ ಮಾಡಿದ್ದರು. ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 307 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸುಜಾತ ಹಂಡಿ ವಿರುದ್ಧ 9 ಕೇಸ್
ಪೊಲೀಸರು ಬಂಧಿಸುವ ವೇಳೆ ಹೈಡ್ರಾಮಾ ಸೃಷ್ಟಿ ಮಾಡಲು ಪ್ರಯತ್ನ ಮಾಡಿದ ಆರೋಪಿ ಸುಜಾತ ಹಂಡಿ, ತಾನೆ ಬಟ್ಟೆ ಬಿಚ್ಚಿಕೊಂಡು ತಾನು ಅಮಾಯಕ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಈ ಮೊದಲು ಇವರ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಒಂಬತ್ತು ಕೇಸ್ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್ ಬಂಧಿಸಲು ಆಗ್ರಹ
ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಯಲ್ಲಿ ಕೇವಲ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಿ ಥಳಿಸಲಾಗಿದೆ. ಆದರೆ ಪ್ರತಿ ದೂರು ದಾಖಲಾದರೂ ಕಾಂಗ್ರೆಸ್ ಕಾರ್ಪೊರೇಟರ್ ಸುರ್ವರ್ಣ ಕಲ್ಲಕುಂಟ್ಲಾ ಅವರನ್ನು ಇದುವರೆಗೂ ಬಂಧಿಸಿಲ್ಲ. ಪೊಲೀಸರು ತಕ್ಷಣ ಕಾಂಗ್ರೆಸ್ ಕಾರ್ಪೊರೇಟರ್ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.

