Bengaluru Turf Club horses are at risk of glanders infection; race fans are worried
x

ಸಾಂದರ್ಭಿಕ ಚಿತ್ರ

ಬೆಂಗಳೂರು ಟರ್ಫ್‌ ಕ್ಲಬ್‌ ಕುದುರೆಗಳಿಗೆ ʼಗ್ಲಾಂಡರ್ಸ್‌ʼ ಸೋಂಕು; ರೇಸ್‌ಗೆ ತಾತ್ಕಾಲಿಕ ಬ್ರೇಕ್‌

ಕುದುರೆಗಳಲ್ಲಿ ಜೀವಕ್ಕೆ ಅಪಾಯಕಾರಿಯಾದ ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಟರ್ಫ್ ಕ್ಲಬ್ ಆಡಳಿತ ಮಂಡಳಿ ಗಂಭೀರ ಕ್ರಮ ಕೈಗೊಂಡಿದೆ.


Click the Play button to hear this message in audio format

ಉದ್ಯಾನನಗರಿಯ ಪ್ರತಿಷ್ಠಿತ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ(ಬಿಟಿಸಿ) ಕುದುರೆಗೆ ಮಾರಕ ʼಗ್ಲಾಂಡರ್ಸ್‌ʼ ಸೋಂಕು ಕಾಣಿಸಿಕೊಂಡಿದ್ದು, ಮುಂಬರುವ ರೇಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಕುದುರೆ ರೇಸ್‌ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕುದುರೆಗಳಿಗೆ ʼಗ್ಲಾಂಡರ್ಸ್‌ʼ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಬೆಂಗಳೂರು ಟರ್ಫ್‌ ಕ್ಲಬ್‌ನ ಕುದುರೆಯಲ್ಲೂ ಸೋಂಕು ಇರುವ ಕಾರಣ ಕಳೆದ ಎರಡು ವಾರಗಳಿಂದ ರೇಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ಕುದುರೆಗಳ ಜೀವಕ್ಕೆ ಅಪಾಯಕಾರಿಯಾದ ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಟರ್ಫ್ ಕ್ಲಬ್ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ. ರೋಗದಿಂದ ಬಳಲುತ್ತಿರುವ ಕುದುರೆಯನ್ನು ಪ್ರತ್ಯೇಕವಾಗಿರಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಿಬಿಎ ಅಧಿಕಾರಿಗಳು ಹಾಗೂ ಪಶುವೈದ್ಯಕೀಯ ಸಿಬ್ಬಂದಿ ಟರ್ಫ್ ಕ್ಲಬ್‌ಗೆ ನಿರಂತರ ಭೇಟಿ ನೀಡಿ ನೈರ್ಮಲ್ಯತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

700 ಕುದುರೆಗಳಿಗೆ ಪರೀಕ್ಷೆ

ಹೈದರಾಬಾದ್‌ನಲ್ಲಿ ಗ್ಲಾಂಡರ್ಸ್‌ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಬೆಂಗಳೂರಿನ ಟರ್ಫ್‌ ಕ್ಲಬ್‌ನ ಸುಮಾರು 700 ಕುದುರೆಗಳಿಗೆ ಪರೀಕ್ಷೆ ನಡೆಸಿ ಕುದುರೆಗಳ ಸಲೈವಾ(ಲಾಲಾರಸ) ಮಾದರಿಯನ್ನು ಹರಿಯಾಣದ ʼರಾಷ್ಟ್ರೀಯ ಅಶ್ವ ಸಂಶೋಧನಾ ಕೇಂದ್ರಕ್ಕೆʼ ಕಳುಹಿಸಲಾಗಿತ್ತು. ಇದರಲ್ಲಿ ಒಂದು ಕುದುರೆಗೆ ಸೋಂಕು ಇರುವುದು ದೃಢಪಟ್ಟಿದೆ.

ಏನಿದು ಗ್ಲಾಂಡರ್ಸ್‌ ರೋಗ ?

ಗ್ಲಾಂಡರ್ಸ್ ಎನ್ನುವುದು ಪ್ರಾಣಿಗಳಿಂದ ಪ್ರಾಣಿಗಳಿಗೆ ವೇಗವಾಗಿ ಹರಡುವ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ. ಇದು ಮುಖ್ಯವಾಗಿ 'ಬರ್ಖೋಲ್ಡೆರಿಯಾ ಮಲ್ಲಿ' (Burkholderia mallei) ಎಂಬ ಬ್ಯಾಕ್ಟೀರಿಯಾದಿಂದ ತಗಲುತ್ತದೆ. ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳಿಗೆ ಇದು ಸುಲಭವಾಗಿ ತಗಲುತ್ತದೆ. ಸೋಂಕಿತ ಪ್ರಾಣಿಯ ಶ್ವಾಸನಾಳ, ಶ್ವಾಸಕೋಶ ಮತ್ತು ಚರ್ಮದ ಮೇಲೆ ಗಂಟುಗಳು ಅಥವಾ ಹುಣ್ಣುಗಳು ಆಗಲಿವೆ. ಚರ್ಮದ ಮೇಲಿನ ಈ ಹುಣ್ಣುಗಳನ್ನು 'ಫಾರ್ಸಿ' ಎಂದು ಕರೆಯಲಾಗುತ್ತದೆ.

ರೋಗಗ್ರಸ್ತ ಕುದುರೆಗಳ ಮೂಗಿನ ಸ್ರಾವ ಅಥವಾ ಗಾಯಗಳಿಂದ ಕಲುಷಿತಗೊಂಡ ನೀರು ಮತ್ತು ಆಹಾರ ಸೇವಿಸುವುದರಿಂದ ಇತರೆ ಕುದುರೆಗಳಿಗೂ ಇದು ಹರಡುತ್ತದೆ.

ಮುನ್ನೆಚ್ಚರಿಕೆ ಅನಿವಾರ್ಯ

ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಗ್ಲಾಂಡರ್ಸ್ ಕೇವಲ ಪ್ರಾಣಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದೊಂದು 'ಜೂನೋಟಿಕ್' (Zoonotic) ಕಾಯಿಲೆಯಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ. ಸೋಂಕಿತ ಕುದುರೆಗಳ ನೇರ ಸಂಪರ್ಕದಲ್ಲಿರುವ ಸವಾರರು (ಜಾಕಿಗಳು), ಕುದುರೆ ಲಾಯದ ಕೆಲಸಗಾರರು ಮತ್ತು ಪಶುವೈದ್ಯರಿಗೂ ಈ ರೋಗ ಹರಡುವ ಅಪಾಯ ಇರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಯಾವ್ಯಾವ ರೇಸ್‌ ರದ್ದು ಸಾಧ್ಯತೆ ?

ಕುದುರೆಗಳಿಗೆ ಗ್ಲಾಂಡರ್ಸ್‌ ಸೋಂಕಿನ ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಬೆಂಗಳೂರು 2000 ಗಿನಿ ಕ್ಲಾಸಿಕ್ ಪಂದ್ಯ, ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ 1 ರಂದು ನಡೆಯಬೇಕಿದ್ದ ಪ್ರತಿಷ್ಠಿತ ನ್ಯೂ ಇಯರ್ ಕಪ್ ಪಂದ್ಯ, ಜನವರಿ ಮೊದಲ ವಾರದಲ್ಲಿ ಹೆಣ್ಣು ಕುದುರೆಗಳಿಗಾಗಿ ಬೆಂಗಳೂರು ಓಕ್ಸ್ ಮೀಸಲು ರೇಸ್, ಬೆಂಗಳೂರು ವಿಂಟರ್ ಡರ್ಬಿ ರದ್ದಾಗುವ ಸಾಧ್ಯತೆ ಇದೆ. ಬೆಂಗಳೂರು ವಿಂಟರ್‌ ಡರ್ಬಿ ಪಂದ್ಯವೂ ಇಡೀ ಚಳಿಗಾಲ ಕೂಟದ ಅತ್ಯಂತ ಶ್ರೇಷ್ಠ ಮತ್ತು ಅದ್ದೂರಿ ಪಂದ್ಯ. ಸಾಮಾನ್ಯವಾಗಿ ಜನವರಿ ಕೊನೆಯ ಭಾನುವಾರ ಅಥವಾ ಗಣರಾಜ್ಯೋತ್ಸವದ ಆಸುಪಾಸಿನಲ್ಲಿ ಇದನ್ನು ಆಯೋಜಿಸಲಾಗುತ್ತದೆ.

ಗವರ್ನರ್ಸ್ ಟ್ರೋಫಿಯು ಜನವರಿಯ ಮತ್ತೊಂದು ಪ್ರಮುಖ ಆಕರ್ಷಣೆಯ ರೇಸ್‌ ಆಗಿದೆ. ಗ್ಲಾಂಡರ್ಸ್‌ ಸೋಕು ಕಡಿಮೆಯಾಗದಿದ್ದರೆ ಈ ಎಲ್ಲಾ ಪಂದ್ಯಗಳು ರದ್ದಾಗುವ ಸಾಧ್ಯತೆ ಇದೆ.

Read More
Next Story