
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಅಂಗೀಕಾರ
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ವಿಧೇಯಕ ಮಂಡಿಸಿ ಮಾತನಾಡಿದರು.
ಗ್ರೇಟರ್ ಬೆಂಗಳೂರು ಆಡಳಿತ (2ನೇ ತಿದ್ದುಪಡಿ) ವಿಧೇಯಕಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಈ ವೇಳೆ ವಿರೋಧ ಪಕ್ಷಗಳ ಸಲಹೆಯನ್ನು ಪುರಸ್ಕರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ವಿಧೇಯಕದಲ್ಲಿದ್ದ 'ನಾಮನಿರ್ದೇಶಿತ ಸದಸ್ಯತ್ವ'ದ ಪ್ರಸ್ತಾಪವನ್ನು ಕೈಬಿಡುವುದಾಗಿ ಘೋಷಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ವಿಧೇಯಕ ಮಂಡಿಸಿ ಮಾತನಾಡಿದರು.
ತಿದ್ದುಪಡಿ ತಂದಿದ್ದು ಏಕೆ?
ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಅವರ ಕ್ಷೇತ್ರದ ಕೆಲವು ಭಾಗಗಳು ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ಆದರೆ, ಜಿಬಿಎ ಸದಸ್ಯರ ಪಟ್ಟಿಯಲ್ಲಿ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರುವ ಜನಪ್ರತಿನಿಧಿಗಳ ಹೆಸರು ಬಿಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪರಿಷತ್ ಸದಸ್ಯರನ್ನು ಜಿಬಿಎ ಸದಸ್ಯರನ್ನಾಗಿ ಸೇರಿಸಲು ಈ ತಿದ್ದುಪಡಿ ತರಲಾಗಿದೆ.
ಮುಖ್ಯಮಂತ್ರಿಗಳೇ ಜಿಬಿಎ ಮುಖ್ಯಸ್ಥರಾಗಿರುವುದರಿಂದ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಲು ನಿರ್ಧರಿಸಲಾಗಿದೆ ಎಂದು ಡಿಕೆಶಿ ಸದನಕ್ಕೆ ತಿಳಿಸಿದರು.
ನಾಮನಿರ್ದೇಶನ ಬೇಡವೆಂದ ಬಿಜೆಪಿ: ಒಪ್ಪಿದ ಡಿಕೆಶಿ
ಚರ್ಚೆಯ ವೇಳೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, "ಪಾಲಿಕೆಯಲ್ಲಿ ಈಗಾಗಲೇ 369 ಸದಸ್ಯರಿರುತ್ತಾರೆ. ಸರ್ಕಾರ 20 ಸಾವಿರ ಜನರಿಗೆ ಒಬ್ಬರಂತೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿದರೆ, ಮತ್ತೆ 369 ಮಂದಿ ಹೊಸದಾಗಿ ಬರುತ್ತಾರೆ. ಇದು ಗೊಂದಲಕ್ಕೆ ಕಾರಣವಾಗುತ್ತದೆ," ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ, "ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯುವುದಿಲ್ಲ, ಇದೊಂದು ರಾಜ್ಯಮಟ್ಟದ ಸಂಸ್ಥೆ. ಆದರೂ ವಿಪಕ್ಷದ ಸಲಹೆಯಂತೆ ನಾಮನಿರ್ದೇಶಿತ ಸದಸ್ಯರ ಸೇರ್ಪಡೆಯನ್ನು ಕೈಬಿಡಲು ಸರ್ಕಾರ ಸಿದ್ಧವಿದೆ," ಎಂದು ಭರವಸೆ ನೀಡಿದರು.
ಮತದಾನ 'ಟೂರಿಂಗ್ ಟಾಕೀಸ್' ಆಗಬಾರದು
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, "ಕೆಲವು ಜನಪ್ರತಿನಿಧಿಗಳು (ಎಂಎಲ್‍ಸಿ, ರಾಜ್ಯಸಭಾ ಸದಸ್ಯರು) ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ತಮ್ಮ ಮತದಾನದ ಹಕ್ಕನ್ನು ಆಯಾ ನಗರಸಭೆ, ಪುರಸಭೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ನಕಲಿ ಮತದಾನವಿದ್ದಂತೆ. ಆದ್ದರಿಂದ ಜನಪ್ರತಿನಿಧಿಗಳಿಗೆ ಐದು ವರ್ಷಗಳ ಕಾಲ ಒಂದೇ ಕಡೆ ಮತದಾನದ ಹಕ್ಕು ಇರಬೇಕು," ಎಂದು ಸಲಹೆ ನೀಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, "ನಿಮ್ಮ ಸಲಹೆಯನ್ನು ನಾನು ಒಪ್ಪುತ್ತೇನೆ. ಮತದಾನ ಎನ್ನುವುದು ಟೂರಿಂಗ್ ಟಾಕೀಸ್ ಆಗಬಾರದು," ಎಂದರು.
ಆದರೆ, ಈ ಕುರಿತು ಮಾತನಾಡಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, "ವಿಳಾಸ ಬದಲಾವಣೆ ಮಾಡಿದರೆ ಆ ಭಾಗದ ಮತದಾರರಾಗಲು ಜನಪ್ರತಿನಿಧಿಗಳ ಕಾಯ್ದೆಯಲ್ಲಿ ಅವಕಾಶವಿದೆ. ಹೀಗಾಗಿ ಕಾಯ್ದೆಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು," ಎಂದು ಅಭಿಪ್ರಾಯಪಟ್ಟರು. ಚರ್ಚೆಯ ನಂತರ, ವಿಪಕ್ಷಗಳ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ವಿಧೇಯಕಕ್ಕೆ ಸದನ ಅಂಗೀಕಾರ ನೀಡಿತು.

