
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಕುದುರೆಗಳಿಗೆ ಮಾರಕ ರೋಗ, ರೇಸ್‌ಗಳು ರದ್ದು, ಕುದುರೆ ಪ್ರಿಯರಲ್ಲಿ ಆತಂಕ
ಕಳೆದ ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಈ ಸೋಂಕು ಕಾಣಿಸಿಕೊಂಡು ಹದಿನೈದಕ್ಕೂ ಹೆಚ್ಚು ಕುದುರೆಗಳು ಮೃತಪಟ್ಟಿದ್ದವು. ಈ ಭೀತಿ ಇದೀಗ ಬೆಂಗಳೂರಿನ ಟರ್ಫ್ ಕ್ಲಬ್‌ಗೂ ಆವರಿಸಿದೆ.
ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (BTC) ಗಂಭೀರವಾದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಕ್ಲಬ್‌ನಲ್ಲಿದ್ದ ಐದು ಕುದುರೆಗಳಲ್ಲಿ ಮಾರಕ 'ಗ್ಲಾಂಡರ್ಸ್' (Glanders) ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಇದರ ನೇರ ಪರಿಣಾಮವಾಗಿ, ಕುದುರೆ ರೇಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಚಳಿಗಾಲದ ರೇಸ್‌ಗಳು ರದ್ದಾಗುವ ಸಾಧ್ಯತೆ ದಟ್ಟವಾಗಿದ್ದು, ಎಲ್ಲೆಡೆ ಆತಂಕ ಮನೆಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಮತ್ತು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ, ಶುಕ್ರವಾರ (ಡಿಸೆಂಬರ್ 5) ನಡೆಯಬೇಕಿದ್ದ ರೇಸ್‌ಗಳನ್ನು ಆಡಳಿತಾತ್ಮಕ ಕಾರಣಗಳನ್ನು ನೀಡಿ ಟರ್ಫ್ ಕ್ಲಬ್ ಆಡಳಿತ ಮಂಡಳಿ ಈಗಾಗಲೇ ರದ್ದುಗೊಳಿಸಿದೆ.
ಇತ್ತೀಚೆಗೆ ಕ್ಲಬ್‌ನಲ್ಲಿದ್ದ ಕೆಲವು ಕುದುರೆಗಳಲ್ಲಿ ವಿಪರೀತ ಜ್ವರ ಮತ್ತು ಕಫದಂತಹ ಅನಾರೋಗ್ಯದ ಲಕ್ಷಣಗಳು ಕಂಡುಬಂದಿದ್ದವು. ಅನುಮಾನದ ಮೇರೆಗೆ ಅವುಗಳ ಮಾದರಿಗಳನ್ನು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ಐದು ಕುದುರೆಗಳಿಗೆ ಸೋಂಕು ತಗುಲಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಆದರೆ, ಈ ವರದಿಯನ್ನು ಅಧಿಕೃತವಾಗಿ ದೃಢಪಡಿಸಲು ಹೆಬ್ಬಾಳದ ತಜ್ಞರು ಸಲಹೆ ನೀಡಿದಂತೆ, ಹೆಚ್ಚಿನ ಮತ್ತು ಅಂತಿಮ ಪರೀಕ್ಷೆಗಾಗಿ ಮಾದರಿಗಳನ್ನು ಹರಿಯಾಣದಲ್ಲಿರುವ 'ರಾಷ್ಟ್ರೀಯ ಅಶ್ವ ಸಂಶೋಧನಾ ಕೇಂದ್ರ'ಕ್ಕೆ (NRCE) ರವಾನಿಸಲಾಗಿದೆ. ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿರುವ ಬಿಟಿಸಿ ಅಧ್ಯಕ್ಷ ಎಲ್. ಶಿವಶಂಕರ್, "ಸೋಂಕನ್ನು ಸದ್ಯಕ್ಕೆ ಖಚಿತಪಡಿಸಲು ಅಥವಾ ತಳ್ಳಿಹಾಕಲು ಸಾಧ್ಯವಿಲ್ಲ. ತಜ್ಞರ ವರದಿಗಾಗಿ ಕಾಯುತ್ತಿದ್ದು, ಫಲಿತಾಂಶ ಬಂದ ನಂತರವಷ್ಟೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು," ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸೋಂಕಿನ ಭೀತಿ ಈಗಷ್ಟೇ ಹುಟ್ಟಿಕೊಂಡಿದ್ದಲ್ಲ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ನೆರೆಯ ಹೈದರಾಬಾದ್‌ನಲ್ಲಿ ಇದೇ ಗ್ಲಾಂಡರ್ಸ್ ಸೋಂಕು ಕಾಣಿಸಿಕೊಂಡು ಬರೋಬ್ಬರಿ ಹದಿನೈದಕ್ಕೂ ಹೆಚ್ಚು ಕುದುರೆಗಳು ಸಾವನ್ನಪ್ಪಿದ್ದವು. ಹೈದರಾಬಾದ್ ಘಟನೆಯ ಬೆನ್ನಲ್ಲೇ ಇದೀಗ ಬೆಂಗಳೂರಿಗೂ ಈ ಸೋಂಕು ವ್ಯಾಪಿಸಿರುವುದು ರೇಸ್ ಆಯೋಜಕರು ಮತ್ತು ಕುದುರೆ ಮಾಲೀಕರಲ್ಲಿ ನಡುಕ ಹುಟ್ಟಿಸಿದೆ. ಸೋಂಕು ವ್ಯಾಪಕವಾಗಿ ಹರಡಿದರೆ ಅಪಾರ ನಷ್ಟವಾಗುವ ಭೀತಿಯೂ ಎದುರಾಗಿದೆ.
ವೇಗವಾಗಿ ಮಾರಣಾಂತಿಕ ರೋಗ
ಗ್ಲಾಂಡರ್ಸ್ ಎನ್ನುವುದು ಪ್ರಾಣಿಗಳಿಂದ ಪ್ರಾಣಿಗಳಿಗೆ ವೇಗವಾಗಿ ಹರಡುವ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮುಖ್ಯವಾಗಿ 'ಬರ್ಖೋಲ್ಡೆರಿಯಾ ಮಲ್ಲಿ' (Burkholderia mallei) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳಿಗೆ ಇದು ಸುಲಭವಾಗಿ ತಗಲುತ್ತದೆ. ಸೋಂಕಿತ ಪ್ರಾಣಿಯ ಶ್ವಾಸನಾಳ, ಶ್ವಾಸಕೋಶ ಮತ್ತು ಚರ್ಮದ ಮೇಲೆ ಗಂಟುಗಳು ಅಥವಾ ಹುಣ್ಣುಗಳು ಉಂಟಾಗುತ್ತವೆ. ಚರ್ಮದ ಮೇಲಿನ ಈ ಹುಣ್ಣುಗಳನ್ನು 'ಫಾರ್ಸಿ' ಎಂದು ಕರೆಯಲಾಗುತ್ತದೆ. ರೋಗಗ್ರಸ್ತ ಕುದುರೆಗಳ ಮೂಗಿನ ಸ್ರಾವ ಅಥವಾ ಗಾಯಗಳಿಂದ ಕಲುಷಿತಗೊಂಡ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ಇತರೆ ಕುದುರೆಗಳಿಗೂ ಇದು ಹರಡುತ್ತದೆ.
ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಗ್ಲಾಂಡರ್ಸ್ ಕೇವಲ ಪ್ರಾಣಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದೊಂದು 'ಜೂನೋಟಿಕ್' (Zoonotic) ಕಾಯಿಲೆಯಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ. ಸೋಂಕಿತ ಕುದುರೆಗಳ ನೇರ ಸಂಪರ್ಕದಲ್ಲಿರುವ ಸವಾರರು (ಜಾಕಿಗಳು), ಕುದುರೆ ಲಾಯದ ಕೆಲಸಗಾರರು ಮತ್ತು ಪಶುವೈದ್ಯರಿಗೂ ಈ ರೋಗ ಹರಡುವ ಅಪಾಯವಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

