
ಬಳ್ಳಾರಿ ಬ್ಯಾನರ್ ಸಂಘರ್ಷ : ತಿಂಗಳ ಹಿಂದೆಯೇ ಸಿದ್ದವಾಗಿತ್ತಾ ಷಡ್ಯಂತ್ರ?
ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ, ಶಾಸಕ ಜನಾರ್ದನ ರೆಡ್ಡಿ ಆಪ್ತ ಆಲಿಖಾನ್ ನಡುವಿನ ಶೀತಲ ಸಮರ. ಒಂದು ತಿಂಗಳ ಹಿಂದೆಯೇ ಆಲಿಖಾನ್‌ಗೆ ಸತೀಶ್ ರೆಡ್ಡಿ ಕರೆ ಮಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಬಳ್ಳಾರಿ ಎಂದರೆ ಅದು ಕೇವಲ ಗಣಿ ನಾಡಲ್ಲ, ರಾಜಕೀಯದ ಪಗಡೆ ಆಟದ ಕೇಂದ್ರವೂ ಹೌದು. ಇತ್ತೀಚೆಗೆ ವಾಲ್ಮೀಕಿ ಪುತ್ಥಳಿ ಅನಾವರಣದ ವೇಳೆ ನಡೆದ ಬ್ಯಾನರ್ ಸಂಘರ್ಷ ಈಗ ದೊಡ್ಡ ಯುದ್ಧವಾಗಿ ಮಾರ್ಪಟ್ಟಿದೆ. ಇದು ಹಳೇ ದ್ವೇಷ, ಸರಣಿ ಬೆದರಿಕೆಗಳು ಮತ್ತು ರಾಜಕೀಯ ಅಧಿಪತ್ಯದ ಹೋರಾಟವಾಗಿ ಮಾರ್ಪಟ್ಟಿದೆ. ಬಳ್ಳಾರಿಯಲ್ಲಿ ನಡೆದ ಗಲಾಟೆಯ ಹಿಂದಿನ ಅತಿ ಮುಖ್ಯ ಅಂಶವೆಂದರೆ, ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಮತ್ತು ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಆಲಿಖಾನ್ ನಡುವಿನ ಶೀತಲ ಸಮರ. ಸುಮಾರು ಒಂದು ತಿಂಗಳ ಹಿಂದೆಯೇ ಸತೀಶ್ ರೆಡ್ಡಿ ಅವರು ಆಲಿಖಾನ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂಬುದು ಇದೀಗ ಬಹಿರಂಗಗೊಂಡಿದೆ.
ಜ. 2ರಂದು ನಡೆದ ಬ್ಯಾನರ್ ಗಲಾಟೆ ಕೇವಲ ಆಕಸ್ಮಿಕವಲ್ಲ, ಬದಲಾಗಿ ಒಂದು ತಿಂಗಳ ಹಿಂದಿನ ಬೆದರಿಕೆಯ ಮುಂದುವರಿದ ಭಾಗ ಎಂಬ ಸಂಶಯಕ್ಕೆ ಪುಷ್ಟಿ ಸಿಕ್ಕಿದೆ. ಆಲಿಖಾನ್ ಮತ್ತು ಜನಾರ್ದನ ರೆಡ್ಡಿ ಅವರನ್ನು ಗುರಿ ಮಾಡಿಕೊಂಡೇ ಈ ಯೋಜಿತ ಸಂಚು ರೂಪಿಸಲಾಗಿತ್ತೇ ಎಂಬ ಪ್ರಶ್ನೆ ಎದುರಾಗಿದೆ.
ಬಳ್ಳಾರಿ ಮೇಲೆ ಪಾರುಪತ್ಯ ಸಾಧಿಸಲು ಪೈಪೋಟಿ
ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿ ನಡೆದ ಬ್ಯಾನರ್ ಸಂಘರ್ಷ ಮತ್ತು ಗುಂಡಿನ ದಾಳಿಯ ಘಟನೆಯನ್ನು ಮೇಲ್ನೋಟಕ್ಕೆ ಒಂದು ಸಣ್ಣ ಜಗಳ ಎಂದು ಕಂಡರೂ, ಇದರ ಆಳದಲ್ಲಿರುವುದು ಜಿಲ್ಲೆಯ ಮೇಲೆ ಹಿಡಿತ ಸಾಧಿಸುವ 'ರಾಜಕೀಯ ಪಾರುಪತ್ಯ'ದ ಹಠ. ದಶಕಗಳ ಕಾಲ ಬಳ್ಳಾರಿಯನ್ನು ಆಳಿದ 'ರೆಡ್ಡಿ ಸಾಮ್ರಾಜ್ಯ' ಮತ್ತು ಈಗ ಉದಯಿಸಿರುವ ಕಾಂಗ್ರೆಸ್‌ನ 'ಭರತ್ ರೆಡ್ಡಿ ಬಣ'ದ ನಡುವಿನ ವರ್ಚಸ್ಸಿನ ಯುದ್ಧವೇ ಈ ಅಶಾಂತಿಗೆ ಮೂಲ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಬಳ್ಳಾರಿಯಲ್ಲಿ ಒಂದು ಕಾಲಕ್ಕೆ ಜಿ. ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರೇ ಸರ್ವಾಧಿಕಾರಿಗಳಂತಿದ್ದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಭರತ್ ರೆಡ್ಡಿ ಶಾಸಕರಾಗಿ ಆಯ್ಕೆಯಾದ ನಂತರ ಜಿಲ್ಲೆಯ ರಾಜಕೀಯ ಸಮೀಕರಣ ಸಂಪೂರ್ಣ ಬದಲಾಗಿದೆ. ಭರತ್ ರೆಡ್ಡಿ ಅವರು ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ಪ್ರಭಾವವನ್ನು ಸಂಪೂರ್ಣವಾಗಿ ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಿ ತಮ್ಮ ಹಳೆಯ ವೈಭವವನ್ನು ಮರುಸ್ಥಾಪಿಸಲು ಹವಣಿಸುತ್ತಿದ್ದಾರೆ. ಈ ಇಬ್ಬರ ನಡುವಿನ ಸಂಘರ್ಷವೇ ಈಗ ಬೀದಿಗೆ ಬಂದಿದೆ ಎಂದು ಹೇಳಲಾಗಿದೆ.
ಆಲಿಖಾನ್, ಸತೀಶ್ ರೆಡ್ಡಿ ಯಾರು?
ಆಲಿಖಾನ್ ಅವರು ಶಾಸಕ ಜಿ. ಜನಾರ್ದನ ರೆಡ್ಡಿ ಅವರ ಅತ್ಯಂತ ನಿಕಟವರ್ತಿ ಮತ್ತು ದಶಕಗಳ ಕಾಲದ ಆಪ್ತ. ಜನಾರ್ದನ ರೆಡ್ಡಿ ಅವರು ಬಳ್ಳಾರಿಯಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಲು ಆರಂಭಿಸಿದ ಕಾಲದಿಂದಲೂ ಆಲಿಖಾನ್ ಅವರ ಜೊತೆಗಿದ್ದಾರೆ. ರೆಡ್ಡಿ ಅವರ ಎಲ್ಲಾ ವ್ಯವಹಾರಗಳು ಮತ್ತು ರಾಜಕೀಯ ತಂತ್ರಗಾರಿಕೆಗಳ ಹಿಂದೆ ಆಲಿಖಾನ್ ಅವರ ಪಾತ್ರ ದೊಡ್ಡದಿದೆ. 2011ರಲ್ಲಿ ಕರ್ನಾಟಕವನ್ನು ನಡುಗಿಸಿದ್ದ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಆಲಿಖಾನ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಅಸೋಸಿಯೇಟೆಡ್ ಮೈನಿಂಗ್ ಕಂಪನಿ (ಎಎಂಸಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇವರನ್ನು ಬಂಧಿಸಿತ್ತು. ಜನಾರ್ದನ ರೆಡ್ಡಿ ಅವರ ಜೊತೆಗೇ ಇವರು ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುದೀರ್ಘ ಕಾಲ ಕಳೆದಿದ್ದರು. ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್ ಬಳ್ಳಾರಿಗೆ ಪ್ರವೇಶಿಸಲು ನಿಷೇಧ ಹೇರಿದ್ದ ಸಮಯದಲ್ಲಿ, ಅವರ ಪರವಾಗಿ ಜಿಲ್ಲೆಯಲ್ಲಿ ಎಲ್ಲವನ್ನೂ ನಿಭಾಯಿಸುತ್ತಿದ್ದವರು ಇದೇ ಆಲಿಖಾನ್. ಜನಾರ್ದನ ರೆಡ್ಡಿ ಅವರು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಕಟ್ಟಿದಾಗಲೂ ಆಲಿಖಾನ್ ಅದರ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳ್ಳಾರಿಯ ಮುಸ್ಲಿಂ ಸಮುದಾಯದ ಮತಗಳ ಮೇಲೆ ಪ್ರಭಾವ ಬೀರಬಲ್ಲ ಮತ್ತು ರೆಡ್ಡಿ ಅವರ ಆಪ್ತ ವಲಯದ 'ಮ್ಯಾನೇಜರ್' ಎಂದೇ ಖ್ಯಾತಿಯಾಗಿದ್ದಾರೆ.
ಇನ್ನು, ಸತೀಶ್ ರೆಡ್ಡಿ ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಅತ್ಯಂತ ಆಪ್ತ ಬೆಂಬಲಿಗ ಮತ್ತು ಜಿಲ್ಲಾ ರಾಜಕಾರಣದಲ್ಲಿ ತಂತ್ರಗಾರ. ಭರತ್ ರೆಡ್ಡಿ ಶಾಸಕರಾದ ನಂತರ ಸತೀಶ್ ರೆಡ್ಡಿ ಅವರ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚಾಯಿತು. ಇವರು ಭರತ್ ರೆಡ್ಡಿ ಅವರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು, ಬ್ಯಾನರ್ ಅಭಿಯಾನಗಳು ಮತ್ತು ಕಾರ್ಯಕರ್ತರ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಗರದ ಯುವಕರನ್ನು ಸಂಘಟಿಸುವಲ್ಲಿ ಸತೀಶ್ ರೆಡ್ಡಿ ಪ್ರಮುಖ ಪಾತ್ರ ವಹಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜನಾರ್ದನ ರೆಡ್ಡಿ ಅವರ ಹಿಡಿತವನ್ನು ಸಡಿಲಗೊಳಿಸಿ, ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಸತೀಶ್ ರೆಡ್ಡಿ ಅವರು ಆಕ್ರಮಣಕಾರಿ ರಾಜಕೀಯಕ್ಕೆ ಹೆಸರಾದವರು. ಜನಾರ್ದನ ರೆಡ್ಡಿ ಕುಟುಂಬ ಮತ್ತು ಬೆಂಬಲಿಗರ ವಿರುದ್ಧ ನೇರ ಸಂಘರ್ಷಕ್ಕೆ ಇಳಿಯುವ ಮೂಲಕ ಹಲವು ಬಾರಿ ಸುದ್ದಿಯಾಗಿದ್ದಾರೆ.
ವಾಲ್ಮೀಕಿ ಸಮುದಾಯದ ನಾಯಕತ್ವಕ್ಕಾಗಿ ಪೈಪೋಟಿ?
ಬಳ್ಳಾರಿ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯದ ಮತಗಳು ನಿರ್ಣಾಯಕ. ಬಿ. ಶ್ರೀರಾಮುಲು ಆ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಬಿಂಬಿತವಾಗಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರು ವಾಲ್ಮೀಕಿ ಪುತ್ಥಳಿ ಅನಾವರಣದ ಮೂಲಕ ಆ ಸಮುದಾಯದ ಮೇಲೆ ತಮ್ಮ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದ ಕ್ರೆಡಿಟ್ ವಾರ್ ಕೂಡ ನಡೆದಿದೆ. ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯವನ್ನು ಮಧ್ಯೆ ಎಳೆದು ತರುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ಅಂತಿಮವಾಗಿ ಇದು ಮತಬ್ಯಾಂಕ್ ರಾಜಕಾರಣದ ಪ್ರತಿಷ್ಠೆಯ ಕಣವಾಗಿದೆ.
ಬಳ್ಳಾರಿಯಲ್ಲಿ ನಡೆಯುತ್ತಿರುವುದು ಕೇವಲ ಬ್ಯಾನರ್ ಕಿತ್ತಾಡುವ ಸಣ್ಣ ವಿಚಾರವಲ್ಲ. ಒಂದು ಕಾಲದ ಸಾಮ್ರಾಟರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಹೊಸದಾಗಿ ಬಂದವರು ತಮ್ಮ ಸಾಮ್ರಾಜ್ಯ ವಿಸ್ತರಿಸಲು ಹವಣಿಸುತ್ತಿದ್ದಾರೆ. ಈ ಇಬ್ಬರ ಪಾರುಪತ್ಯದ ಹಪಾಹಪಿಗೆ ಬಳ್ಳಾರಿಯ ಶಾಂತಿ ಮತ್ತು ಸಾಮಾನ್ಯ ಜನಜೀವನ ಬಲಿಯಾಗುತ್ತಿದೆ ಎಂದು ಆರೋಪದ ಮಾತುಗಳು ಕೇಳಿಬಂದಿವೆ.

