
ಹಿಪ್ಪರಗಿ ಬ್ಯಾರೆಜ್‌ನ ಗೇಟ್ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.
ಕೃಷ್ಣಾನದಿ ಬ್ಯಾರೇಜ್ ಕ್ರಸ್ಟ್‌ಗೇಟ್ ಹಾನಿ: ಪೋಲಾಗುತ್ತಿದೆ ಅಪಾರ ಪ್ರಮಾಣದ ನೀರು
ಗೇಟ್‌ನ ಪ್ಲೇಟ್ ಬಿಚ್ಚಿಕೊಂಡ ಪರಿಣಾಮ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದ್ದಆರು ಟಿಎಂಸಿ ನೀರಿನ ಪೈಕಿ ಅಪಾರ ಪ್ರಮಾಣ ನೀರು ಪೋಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು ಭಾರೀ ಪ್ರಮಾಣದ ನೀರು ವ್ಯರ್ಥವಾದ ಘಟನೆ ಮರೆಯುವ ಮುನ್ನವೇ ಉತ್ತರ ಕರ್ನಾಟಕದ ಜನತೆಗೆ ವರದಾನವಾಗಿದ್ದ ಮತ್ತೊಂದು ಜಲಾಶಯದ ಕ್ರಸ್ಟ್ ಗೇಟ್ ಮುರಿದಿದ್ದು, ಅಪಾರ ಪ್ರಮಾಣದ ನೀರು ನದಿಗೆ ಹರಿದು ವ್ಯರ್ಥವಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿರುವ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕೃಷ್ಣಾ ನದಿಯ ನೀರಿನ ಒತ್ತಡಕ್ಕೆ ಸಿಲುಕಿ ಮಂಗಳವಾರ ಮುರಿದು ಬಿದ್ದಿದೆ. ಗೇಟ್‌ನ ಪ್ಲೇಟ್ ಬಿಚ್ಚಿಕೊಂಡ ಪರಿಣಾಮ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದ್ದಆರು ಟಿಎಂಸಿ ನೀರಿನ ಪೈಕಿ ಅಪಾರ ಪ್ರಮಾಣ ನೀರು ಪೋಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸದ್ಯ ಸ್ಥಳಕ್ಕೆ ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ್ ಮತ್ತು ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
22ನೇ ಗೇಟ್ ಓಪನ್
ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸುಮಾರು 6 ಟಿಎಂಸಿ ನೀರು ಸಂಗ್ರಹವಿತ್ತು. ನೀರಿನ ಒತ್ತಡದಿಂದ 22ನೇ ಗೇಟ್‌ನ ಪ್ಲೇಟ್ ಬಿಚ್ಚಿಕೊಂಡ ಪರಿಣಾಮ ನೀರು ಪೋಲಾಗುತ್ತಿದೆ. ಆದಾಗ್ಯೂ, ಪ್ರಸ್ತುತ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಜಿಲ್ಲಾಡಳಿತವು ಪ್ಲೇಟ್‌ನ್ನು ಮತ್ತೆ ಅಳವಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ತಿಳಿಸಿದ್ದಾರೆ.
ಅಗತ್ಯ ಕ್ರಮಕ್ಕೆ ಸೂಚನೆ
ಹಿರಿಯ ಅಧಿಕಾರಿಗಳು ಪ್ಲೇಟ್ ಅಳವಡಿಸುವ ಸಂಬಂಧ ಚರ್ಚೆ ನಡೆಸುತ್ತಿದ್ದು, ನೀರು ಪೋಲಾಗುವುದನ್ನು ತಡೆಯಲು ಮತ್ತು ಬ್ಯಾರೇಜ್‌ನ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಅಣೆಕಟ್ಟುಗಳು ಹಾಗೂ ಬ್ಯಾರೇಜ್‌ಗಳ ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಇದು ಮತ್ತೊಮ್ಮೆ ಗಮನ ಸೆಳೆದಿದೆ.
ಎರಡು ವರ್ಷಗಳ ಹಿಂದೆಯೂ ತಾಂತ್ರಿಕ ಅಡಚಣೆಯಾಗಿತ್ತು
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಬಕವಿ - ಬನಹಟ್ಟಿ ಸಮೀಪದ ಹಿಪ್ಪರಗಿ ಜಲಾಶಯದಲ್ಲಿನ ಗೇಟ್ ನಂಬರ್ 7 ರಲ್ಲಿ 2024ರಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಗೇಟ್ ಮುಚ್ಚಲು ತೀವ್ರ ತೊಂದರೆಯುಂಟಾಗಿತ್ತು. ಆ ಸಂದರ್ಭದಲ್ಲಿ ಸದ್ಯ ಮಹಾರಾಷ್ಟ್ರದಿಂದ ನೀರಿನ ಹರಿವಿನ ಪ್ರಮಾಣ ಪ್ರತಿ ದಿನ 15 ಸಾವಿರ ಕ್ಯುಸೆಕ್‌ನಷ್ಟು ಮಾತ್ರ ನೀರು ಬರುತ್ತಿತ್ತು. ಆದರೆ ಯಾವುದೇ ಅವಘಡ ಸಂಭವಿಸಿರಲಿಲ್ಲ. ಶೀಘ್ರದಲ್ಲೇ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಬಗೆಹರಿಸಿದ್ದರು.
ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಜೆಡಿಎಸ್ ಆಗ್ರಹ
ಹಿಪ್ಪರಗಿ ಬ್ಯಾರೆಜ್‌ನ ಗೇಟ್ ಪ್ಲೇಟ್ ಬಿಚ್ಚಿಕೊಂಡ ಪರಿಣಾಮ ಅಪಾರ ಪ್ರಮಾಣ ನೀರು ವ್ಯರ್ಥವಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್, ಎಲ್ಲಾ ವಿಷಯಗಳಿಗೂ ಮೂಗು ತೂರಿಸಿ ಮಾತನಾಡುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತನ್ನ ಇಲಾಖೆಯನ್ನೇ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹಿಪ್ಪರಗಿ ಬ್ಯಾರೇಜ್ ಗೇಟ್ ಕೊಚ್ಚಿ ಹೋಗಿ 6 ಟಿಎಂಸಿಗೂ ಅಧಿಕ ಪ್ರಮಾಣದ ನೀರು ಹರಿದು ಹೋಗುತ್ತಿದೆ. 2024ರ ಆಗಸ್ಟ್‌ನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದು, ಸುಮಾರು 40 ಟಿಎಂಸಿ ನೀರು ಪೋಲಾಗಿತ್ತು. ಇನ್ನೂ ಸಹ ಅಲ್ಲಿನ ಗೇಟ್‌ಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಲ್ಲ. ಜಲಾಶಯಗಳ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಅಪಾರ ಪ್ರಮಾಣದಲ್ಲಿ ಅತ್ಯಮೂಲ್ಯ ಜೀವ ಜಲ ಪೋಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಅವರೇ, ಜಲಸಂಪನ್ಮೂಲ ಖಾತೆಯನ್ನು ನಿಮ್ಮ ಕೈಯಲ್ಲಿ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೇ ರಾಜೀನಾಮೆ ಕೊಡಿ ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದೆ.

