Urban development depends on the hard work of U.K. workers; Provide housing under special quota: BJP demands
x

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಕಟ್ಟಿದ ಕೈಗಳಿಗೆ ಎಲ್ಲಿದೆ ಹಕ್ಕು?: ಕೋಗಿಲು ಪ್ರಕರಣದ ಬೆನ್ನಲ್ಲೇ 'ಮನೆ ಭಾಗ್ಯ'ಕ್ಕಾಗಿ ಛಲವಾದಿ ಪಟ್ಟು

ಕಟ್ಟಡ ನಿರ್ಮಾಣ, ಸಾರಿಗೆ ಮತ್ತು ಇತರ ಅಸಂಘಟಿತ ವಲಯಗಳಲ್ಲಿ ದಿನವಿಡೀ ದುಡಿಯುವ ಇವರು ನಗರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ ಎಂದು ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.


Click the Play button to hear this message in audio format

ಬೆಂಗಳೂರಿನ ಕೋಗಿಲು ಕ್ರಾಸ್ ಒತ್ತುವರಿ ತೆರವು ಪ್ರಕರಣವು ಈಗ ಕೇವಲ ಒಂದು ಲೇಔಟ್ ವಿವಾದವಾಗಿ ಉಳಿಯದೆ, ರಾಜ್ಯ ರಾಜಕಾರಣದಲ್ಲಿ 'ಪ್ರಾದೇಶಿಕ ಅಸಮಾನತೆ' ಮತ್ತು 'ವಲಸಿಗ ಕಾರ್ಮಿಕರ ಹಕ್ಕು'ಗಳ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಸಿಲಿಕಾನ್ ಸಿಟಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ತಮ್ಮ ಬೆವರನ್ನು ಬಸಿದ ಉತ್ತರ ಕರ್ನಾಟಕದ ಶ್ರಮಿಕ ವರ್ಗವನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಆರ್ಥಿಕತೆಯ ಬೆನ್ನೆಲುಬಾಗಿರುವ ಲಕ್ಷಾಂತರ ಕಾರ್ಮಿಕ ಕುಟುಂಬಗಳಿಗೆ ವಿಶೇಷ ಕೋಟಾದಡಿ ಮನೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರು ಸುದೀರ್ಘ ಪತ್ರ ಬರೆದಿದ್ದು, ಪ್ರಕರಣವೀಗ 'ಪ್ರಾದೇಶಿಕ ನ್ಯಾಯ'ದ ಹೋರಾಟವಾಗಿ ತಿರುವು ಪಡೆದಿದೆ.

ಸಿಲಿಕಾನ್‌ ಸಿಟಿ ಬೆಂಗಳೂರು ಇಷ್ಟೊಂದು ಅಭಿವೃದ್ಧಿ ಹೊಂದಲು ದಶಕಗಳ ಹಿಂದೆಯೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ವಲಸೆ ಬಂದಿರುವ ಲಕ್ಷಾಂತರ ಕುಟುಂಬಗಳೇ ಕಾರಣವಾಗಿದ್ದು, ಇಂದು ಜಾಗತಿಕ ನಗರವಾಗಿ ಬೆಳೆಯಲು ಈ ಕಾರ್ಮಿಕರ ಬೆವರು ಮತ್ತು ಶ್ರಮದ ಕೊಡುಗೆ ಅಪಾರವಾಗಿದೆ ಎಂದು ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ತಿಳಿಸಿದ್ದಾರೆ.

ʼನಮ್ಮವರʼ ಹಿತರಕ್ಷಣೆ ಆದ್ಯ ಕರ್ತವ್ಯ

ಕಟ್ಟಡ ನಿರ್ಮಾಣ, ಸಾರಿಗೆ ಮತ್ತು ಇತರ ಅಸಂಘಟಿತ ವಲಯಗಳಲ್ಲಿ ದಿನವಿಡೀ ದುಡಿಯುವ ಇವರು ನಗರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಆದರೆ ದುರದೃಷ್ಟವಶಾತ್, ದಶಕಗಳಿಂದ ಇಲ್ಲಿಯೇ ನೆಲೆಸಿದ್ದರೂ ಇವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಸ್ವಂತ ಮನೆಯಿಲ್ಲ. ಇಂದಿಗೂ ಇವರು ಪ್ಲಾಸ್ಟಿಕ್ ಶೆಡ್‌ಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಅಥವಾ ಬಾಡಿಗೆಯ ಸಣ್ಣ ಕೊಠಡಿಗಳಲ್ಲಿ ಅತ್ಯಂತ ಅಸಹನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಕಡು ಬಡವರಾಗಿದ್ದು, ದಿನದ ದುಡಿಮೆ ಜೀವನ ನಿರ್ವಹಣೆಗೇ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ವಂತ ಮನೆಯನ್ನು ಹೊಂದುವುದು ಇವರಿಗೆ ಕನಸಿನ ಮಾತಾಗಿದೆ. ಬೆಂಗಳೂರನ್ನೇ ನಂಬಿಕೊಂಡಿರುವ ಈ 'ನಮ್ಮವರ' ಹಿತರಕ್ಷಣೆ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ.

ಬೇಡಿಕೆಗಳೇನು ?

* ವಸತಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕು ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಿಸಲಾಗುವ ಮನೆಗಳಲ್ಲಿ ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಕಾರ್ಮಿಕರಿಗೆ ವಿಶೇಷ ಕೋಟಾದಡಿ ಮನೆಗಳನ್ನು ನೀಡಬೇಕು.

* ಪ್ರತ್ಯೇಕವಾಗಿ 'ಕಾರ್ಮಿಕ ವಸತಿ ಸಮುಚ್ಚಯ'ಗಳನ್ನು ನಿರ್ಮಿಸಿ, ಅತ್ಯಂತ ಕಡಿಮೆ ದರದಲ್ಲಿ ಹಾಗೂ ಸುಲಭ ಕಂತುಗಳಲ್ಲಿ ಪಡೆಯುವಂತೆ ಹಂಚಿಕೆ ಮಾಡಬೇಕು.

* ಪ್ರಸ್ತುತ ವಾಸಿಸುತ್ತಿರುವ ಸ್ಥಳಗಳಲ್ಲಿ ಕನಿಷ್ಠ ಕುಡಿಯುವ ನೀರು, ರಸ್ತೆ, ಶಾಲೆ, ಆಸ್ಪತ್ರೆ, ಶೌಚಾಲಯ ಮತ್ತು ವಿದ್ಯುತ್ ಸೌಲಭ್ಯಗಳನ್ನು ತಕ್ಷಣವೇ ಒದಗಿಸಬೇಕು.

ನಗರದಲ್ಲಿದ್ದಾರೆ ಶೇ.40 ವಲಸಿಗರು

ಬೆಂಗಳೂರಿನ ಒಟ್ಟು ಜನಸಂಖ್ಯೆಯಲ್ಲಿ ವಲಸಿಗರೇ ದೊಡ್ಡ ಭಾಗವಾಗಿದ್ದು, ಕರ್ನಾಟಕದ ಇತರ ಜಿಲ್ಲೆಗಳಿಂದ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2011ರ ಜನಗಣತಿ ಪ್ರಕಾರ, ಸುಮಾರು 9.33 ಲಕ್ಷ ಜನರು ರಾಜ್ಯದ ಇತರ ಜಿಲ್ಲೆಗಳಿಂದ ಬೆಂಗಳೂರಿಗೆ ವಲಸೆ ಬಂದಿದ್ದರು, ನಗರದ ಜನಸಂಖ್ಯೆಯಲ್ಲಿ ಶೇ. 40 ಕ್ಕಿಂತ ಹೆಚ್ಚು ಜನರು ವಲಸಿಗರಿದ್ದಾರೆ ಎಂದರು.

ಬೆಂಗಳೂರನ್ನು ಕಟ್ಟಿದ ಈ ಕೈಗಳಿಗೆ ಒಂದು ಸುಭದ್ರವಾದ ಚಾವಣಿಯನ್ನು ಒದಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ವಿಶೇಷ ಯೋಜನೆಯಡಿ ಇವರಿಗೆ ಮನೆಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಪೂರ್ವಕವಾಗಿ ಮನವಿಯನ್ನು ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Read More
Next Story