
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು
ಕಡಿಮೆ ಅನುದಾನದ ಯೋಜನೆಗಳ ವಿಲೀನ; ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಫಾರಸು
ರಾಜ್ಯದ ವಿವಿಧ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಾಮ್ಯತೆ ಹೊಂದಿದ್ದು, ಅಂತಹ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ.
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಹಾಗೂ ಯೋಜನೆಗಳ ಪರಿಣಾಮಕಾರಿ ಜಾರಿ ಸಲುವಾಗಿ ಒಂದು ಕೋಟಿ ರೂ.ಗಳಿಗಿಂತ ಕಡಿಮೆ ಅನುದಾನ ಪಡೆಯುತ್ತಿರುವ ಯೋಜನೆಗಳನ್ನು ವಿಲೀನಗೊಳಿಸುವಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಂಗಳವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಯೋಗದ 10ನೇ ವರದಿ ಸಲ್ಲಿಸಿದ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು, ಸರ್ಕಾರಕ್ಕೆ ಒಟ್ಟು 355 ಶಿಫಾರಸುಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಹಲವು ವರ್ಷಗಳಿಂದ ಅನುದಾನ ಹಂಚಿಕೆಯಾಗದ, ನಿಷ್ಪ್ರಯೋಜಕ ಸ್ಥಿತಿಯಲ್ಲಿರುವ ಯೋಜನೆಗಳನ್ನು ಆಡಳಿತಾತ್ಮಕ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ವಿಲೀನ ಅಥವಾ ಸ್ಥಗಿತಗೊಳಿಸಬೇಕು. ಕಾಯಂ ಸಿಬ್ಬಂದಿ ಇರುವೆಡೆ ಹೊರಗುತ್ತಿಗೆ ನೇಮಕಾತಿಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಹೆಚ್ಚುವರಿ ಸಿಬ್ಬಂದಿಯನ್ನು ಅಗತ್ಯವಿರುವ ಕಡೆ ಮರುಹಂಚಿಕೆ ಮಾಡಬೇಕು, ಅಪ್ರಸ್ತುತ ಹುದ್ದೆಗಳನ್ನು ರದ್ದು ಮಾಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದೆ.
ರಾಜ್ಯದ ವಿವಿಧ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಾಮ್ಯತೆ ಹೊಂದಿದ್ದು, ಅಂತಹ ಯೋಜನೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲವೇ ವಿಲೀನಗೊಳಿಸಬೇಕು. ಹೊಸ ಯೋಜನೆ ಘೋಷಿಸುವ ಮುನ್ನ ʼಒನ್ ಇನ್, ಒನ್ ಔಟ್ʼ ಎಂಬ ನಿಯಮ ರೂಪಿಸಬೇಕು ಎಂದು ಸೂಚಿಸಿದೆ.
ಯೋಜನೆಗಳ ಮರು ಪರಿಶೀಲನೆಗೆ ಸೂಚನೆ
ಅಧಿಕ ಯೋಜನೆಗಳನ್ನು ಪರಿಚಯಿಸಿದರೆ ಅನುದಾನದ ಕೊರತೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಅಲ್ಪ ಅನುದಾನ ಹಂಚಿಕೆಯಾಗಿರುವ 208 ರಿಂದ 280 ಯೋಜನೆಗಳನ್ನು ಮರು ಪರಿಶೀಲಿಸಬೇಕು. ಈ ಸಂಬಂಧ ಹಣಕಾಸು, ಯೋಜನಾ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಆರು ತಿಂಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಆಯೋಗವು ಕೃಷಿ, ತೋಟಗಾರಿಕೆ, ರೇಷ್ಮೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪಶು ಸಂಗೋಪನೆ ಮತ್ತು ವೈದ್ಯಕೀಯ ಸೇವೆಗಳು, ಮೀನುಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವಾರ್ಷಿಕ ಬಜೆಟ್ ಹಂಚಿಕೆ, ನಿಧಿಬಳಕೆಯ ಮಾದರಿ, ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ಕೂಲಂಕಶವಾಗಿ ಪರಿಶೀಲಿಸಿದೆ.
ಆರ್ಥಿಕ ಪ್ರವೃತ್ತಿಗಳ ವಿಶ್ಲೇಷಣೆ, ಬಳಕೆಯ ಮಟ್ಟ, ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಪುನರಾವರ್ತನೆ ತಪ್ಪಿಸಲು ಹಾಗೂ ಯೋಜನಾ ಇಲಾಖೆಯ ತಜ್ಞರ ಸಲಹೆ ಆಧರಿಸಿ ಕಡಿಮೆ ಅನುದಾನ ಹಂಚಿಕೆಯಾದ, ಬಳಕೆ ಪ್ರಮಾಣ ಕ್ಷೀಣಿಸುತ್ತಿರುವ, ಸ್ಪಷ್ಟ ಫಲಿತಾಂಶಗಳಿಲ್ಲದ ಅಥವಾ ಇತರೆ ಕಾರ್ಯಕ್ರಮಗಳೊಂದಿಗೆ ಪುನರಾವರ್ತನೆಯಾಗುತ್ತಿರುವ ರಾಜ್ಯ ವಲಯದ ಯೋಜನೆಗಳನ್ನು ಮುಕ್ತಾಗೊಳಿಸಲು ಅಥವಾ ವಿಲೀನಗೊಳಿಸಲು ಸೂಚಿಸಲಾಗಿದೆ.
2000ನೇ ಸಾಲಿನಲ್ಲಿ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ರಚನೆಯಾದ ಆಡಳಿತ ಸುಧಾರಣಾ ಆಯೋಗವುದು ಇಲ್ಲಿಯವರೆಗೆ ಒಟ್ಟು 2014 ಶಿಫಾರಸುಗಳನ್ನು ಅನುಷ್ಠಾನಗೊಳಿಸಿದೆ. ೧೮೬ ಶಿಫಾರಸುಗಳನ್ನು ಭಾಗಶಃ ಅನುಷ್ಠಾನಗೊಳಿಸಿದೆ. 839 ಶಿಫಾರಸುಗಳು ಅನುಷ್ಠಾನ ಹಂತದಲ್ಲಿವೆ. 2274 ಶಿಫಾರಸುಗಳು ಪರಿಶೀಲನೆಯಲ್ಲಿವೆ.
ವರದಿ ಶಿಫಾರಸುಗಳೇನು?
- ಸಿಬ್ಬಂಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಸುಧಾರಣಾ ನಿರ್ವಹಣಾ ಘಟಕ (RMU) ಸ್ಥಾಪನೆ
- ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನದ ತ್ರೈಮಾಸಿಕ ಪ್ರಗತಿ ಪರಿಶೀಲನೆ
- ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಾರ್ಷಿಕ ಆಡಳಿತ ಸುಧಾರಣಾ ಪ್ರಗತಿ ಪರಿಶೀಲನೆ
- ಸುಮಾರು 1,000 ನಿಷ್ಕ್ರಿಯ ಲೆಕ್ಕ ಶೀರ್ಷಿಕೆಗಳ ರದ್ದತಿ ಅಥವಾ ವಿಲೀನ
- ಅಲ್ಪ ಅನುದಾನ ಹಂಚಿಕೆಯಾಗಿರುವ 208–280 ಯೋಜನೆಗಳ ಮರು ಪರಿಶೀಲನೆ
- ಸರಳೀಕೃೃತ ಹಾಗೂ ಪ್ರಮಾಣೀಕೃತ ಲೆಕ್ಕ ಶೀರ್ಷಿಕೆ ಚೌಕಟ್ಟು ಅಳವಡಿಕೆ
- ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಅತಿಕ್ರ¬ಮಣವಾಗುತ್ತಿರುವ ರಾಜ್ಯ ಯೋಜನೆಗಳ ವಿಲೀನ
- ಕಡಿಮೆ ಪ್ರಭಾವ ಬೀರುವ ಹಳೆಯ ಯೋಜನೆಗಳನ್ನು ಹಂತ-ಹಂತವಾಗಿ ಸ್ಥಗಿತಗೊಳಿಸುವುದು
- ಸಿಬ್ಬಂದಿ ನೇಮಕಾತಿಯಲ್ಲಿ 'ಮರು ನಿಯೋಜನೆಗೆ ಆದ್ಯತೆ ನೀಡುವ ನೀತಿ ಅಳವಡಿಕೆ
- ಜಿಲ್ಲಾ ಮಟ್ಟದ ಸಿಬ್ಬಂದಿ ಮಾನದಂಡಗಳ ವೈಜ್ಞಾನಿಕ ಮರುಹಂಚಿಕೆ
- ಹೆಚ್ಚುವರಿ ಲಿಪಿಕ ಹುದ್ದೆಗಳನ್ನು ಅಗತ್ಯವಿರುವ ಇತರ ಹುದ್ದೆಗಳಾಗಿ ಪರಿವರ್ತಿಸುವುದು
- ಅನಗತ್ಯ/ಕಾಲಹರಣದ ಹುದ್ದೆಗಳ ರದ್ದತಿ
- ಖಾಯಂ ಹುದ್ದೆಗಳಿರುವಲ್ಲಿ ಹೊರಗುತ್ತಿಗೆ ನೇಮಕಾತಿ ಸ್ಥಗಿತಗೊಳಿಸುವುದು
- ದೀರ್ಘಕಾಲದಿಂದ ಬಾಕಿ ಇರುವ ಮುಂಚೂಣಿ (Frontline) ಹುದ್ದೆಗಳ ಭರ್ತಿ
- ವೃಂದ ಮತ್ತು ನೇಮಕಾತಿ (C&R) ನಿಯಮಗಳ ಸಮಗ್ರ ತಿದ್ದುಪಡಿ
- ವಾರ್ಷಿಕ ನೇಮಕಾತಿ ಯೋಜನೆ ಸಿದ್ಧಪಡಿಸುವುದು
- ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಹುದ್ದೆಗಳ ಭರ್ತಿ
- ಕಂದಾಯ ಇಲಾಖೆಯ ಕ್ಷೇತ್ರ ಮಟ್ಟದ ವೃಂದದ ಬಲವರ್ಧನೆ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾ.ಪಂ/ತಾಲ್ಲೂಕು ಮಟ್ಟದ ಸಿಬ್ಬಂದಿ ಭರ್ತಿ
- ಆರೋಗ್ಯ ಇಲಾಖೆಯ ತಜ್ಞ ವೈದ್ಯರ ಮತ್ತು ಮೇಲ್ವಿಚಾರಣಾ ಹುದ್ದೆಗಳ ಭರ್ತಿ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ICDS ಮೇಲ್ವಿಚಾರಣಾ ವ್ಯವಸ್ಥೆಯ ಬಲವರ್ಧನೆ
- ಕಾರ್ಮಿಕ ಇಲಾಖೆಯ ಪರಿಶೀಲನಾ ಸಿಬ್ಬಂದಿ ನೇಮಕಾತಿ
- ಕೈಗೊಂಡ ಕ್ರಮಗಳ ವರದಿ (ATR) ಪೋರ್ಟಲ್ ಬಲವರ್ಧನೆ
- ಆಯೋಗದ ದಾಖಲೆಗಳ ಡಿಜಿಟಲ್ ಆರ್ಕೈವಿಂಗ್ (ಗಣಕೀಕೃತ ದಾಖಲೀಕರಣ)
- ಮೇಲ್ವಿಚಾರಣಾ ಜವಾಬ್ದಾರಿಯನ್ನು ವರ್ಗಾಯಿಸುವ ಕುರಿತು ಸರ್ಕಾರಿ ಆದೇಶ ಹೊರಡಿಸುವುದು

