
ಬಾಂಗ್ಲಾ ನಾಯಕ ತಾರಿಕ್ ರೆಹಮಾನ್
17 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ತಾರಿಕ್ ರೆಹಮಾನ್ ಹೆಸರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರನಾಗಿರುವ ತಾರಿಕ್, ತಮ್ಮ ಪೂರ್ವಜರ ಕ್ಷೇತ್ರವಾದ ಬೋಗುರಾ ಸದರ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ನಾಮಪತ್ರ ಸಿದ್ಧಪಡಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಕಾರ್ಯಾಧ್ಯಕ್ಷ ತಾರಿಕ್ ರೆಹಮಾನ್ ಅವರು 17 ವರ್ಷಗಳ ಸುದೀರ್ಘ ದೇಶಭ್ರಷ್ಟ ಜೀವನದ ನಂತರ ಸ್ವದೇಶಕ್ಕೆ ಮರಳಿದ್ದು, ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಅಧಿಕೃತವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಈಗ ಬಹುತೇಕ ಖಚಿತವಾಗಿದೆ.
ಬಿಗಿ ಭದ್ರತೆಯಲ್ಲಿ ಬಯೋಮೆಟ್ರಿಕ್ ನೋಂದಣಿ
ಲಂಡನ್‌ನಿಂದ ವಾಪಸಾದ ಕೇವಲ ಎರಡು ದಿನಗಳಲ್ಲೇ 60 ವರ್ಷದ ತಾರಿಕ್ ರೆಹಮಾನ್ ಅವರು ಢಾಕಾದಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದರು. ಬಾಂಗ್ಲಾದೇಶ ಸೇನೆ, ರ್ಯಾಪಿಡ್ ಆಕ್ಷನ್ ಬೆಟಾಲಿಯನ್ ಮತ್ತು ಪೊಲೀಸರ ಅಭೇದ್ಯ ಭದ್ರತೆಯ ನಡುವೆ ಅವರು ತಮ್ಮ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನ್ ಸೇರಿದಂತೆ ಅಗತ್ಯ ಬಯೋಮೆಟ್ರಿಕ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ತಾರಿಕ್ ರೆಹಮಾನ್ ಅವರೊಂದಿಗೆ ಅವರ ಪುತ್ರಿ ಜೈಮಾ ಕೂಡ ರಾಷ್ಟ್ರೀಯ ಗುರುತಿನ ಚೀಟಿ ಪಡೆಯಲು ನೋಂದಣಿ ಪ್ರಕ್ರಿಯೆಗಳನ್ನು ಪೂರೈಸಿದ್ದಾರೆ.
24 ಗಂಟೆಯೊಳಗೆ ಗುರುತಿನ ಚೀಟಿ ಲಭ್ಯ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚುನಾವಣಾ ಆಯೋಗದ ರಾಷ್ಟ್ರೀಯ ಗುರುತಿನ ಚೀಟಿ ನೋಂದಣಿ ವಿಭಾಗದ ಮಹಾನಿರ್ದೇಶಕ ಎಎಸ್‌ಎಂ ಹುಮಾಯೂನ್ ಕಬೀರ್ ಅವರು, "ತಾರಿಕ್ ರೆಹಮಾನ್ ಅವರು ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇಂದು ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿದಿದ್ದು, ಮುಂದಿನ 24 ಗಂಟೆಗಳ ಒಳಗಾಗಿ ಅವರಿಗೆ ಎನ್‌ಐಡಿ ಕಾರ್ಡ್ ಲಭ್ಯವಾಗಲಿದೆ," ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರನಾಗಿರುವ ತಾರಿಕ್, ತಮ್ಮ ಪೂರ್ವಜರ ಕ್ಷೇತ್ರವಾದ ಬೋಗುರಾ ಸದರ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ನಾಮಪತ್ರ ಸಿದ್ಧಪಡಿಸಿಕೊಂಡಿದ್ದಾರೆ.
ನೋಂದಣಿ ವಿಳಂಬಕ್ಕೆ ಕಾರಣವೇನು?
ಬಾಂಗ್ಲಾದೇಶದಲ್ಲಿ ಭಾವಚಿತ್ರ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡ ಆಧುನಿಕ ಮತದಾರರ ಪಟ್ಟಿಯನ್ನು 2008ರಲ್ಲಿ ಪರಿಚಯಿಸಲಾಗಿತ್ತು. ಆ ಸಮಯದಲ್ಲಿ ತಾರಿಕ್ ರೆಹಮಾನ್ ಅವರು ರಾಜಕೀಯ ಕೈದಿಯಾಗಿ ಬಿಡುಗಡೆ ಹೊಂದಿ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ನಂತರದ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಆಡಳಿತದ ಅವಧಿಯಲ್ಲಿ ಅವರು ದೇಶಕ್ಕೆ ಮರಳದ ಕಾರಣ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿರಲಿಲ್ಲ. ಹಸೀನಾ ಸರ್ಕಾರ ಪತನಗೊಂಡು ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವಷ್ಟೇ ಅವರಿಗೆ ದೇಶಕ್ಕೆ ಮರಳಲು ಹಾದಿ ಸುಗಮವಾಗಿತ್ತು.
ಅವಾಮಿ ಲೀಗ್ ಆಕ್ಷೇಪ ಮತ್ತು ಕಾನೂನು ವಿವಾದ
ಇದೇ ವೇಳೆ, ಮಧ್ಯಂತರ ಸರ್ಕಾರದಿಂದ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಕ್ಕೊಳಗಾಗಿರುವ ಅವಾಮಿ ಲೀಗ್ ಪಕ್ಷವು ತಾರಿಕ್ ರೆಹಮಾನ್ ಅವರ ನೋಂದಣಿ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ಕರೆದಿದೆ. ಅಂತಿಮ ಮತದಾರರ ಪಟ್ಟಿ ಸಿದ್ಧವಾದ ನಂತರ ಹೊಸದಾಗಿ ಹೆಸರನ್ನು ಸೇರಿಸುವುದು ಮತ್ತು ಸರ್ಕಾರಿ ರಜಾ ದಿನವಾದ ಶನಿವಾರದಂದು ಚುನಾವಣಾ ಆಯೋಗದ ಕಚೇರಿ ತೆರೆದು ಈ ಪ್ರಕ್ರಿಯೆ ನಡೆಸಿರುವುದು ನಿಯಮಗಳ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಅರ್ಹ ನಾಗರಿಕರು ಯಾವುದೇ ಸಮಯದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಚುನಾವಣಾ ಆಯೋಗದ ಮಾಜಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

