
17 ವರ್ಷಗಳ ವನವಾಸ ಅಂತ್ಯ: ಗಡಿಪಾರು ಶಿಕ್ಷೆ ಮುಗಿಸಿ ಬಾಂಗ್ಲಾಕ್ಕೆ ಮರಳಿದ ಖಲೀದಾ ಪುತ್ರ
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ನಾಯಕ ತಾರಿಕ್ ರೆಹಮಾನ್ 17 ವರ್ಷಗಳ ನಂತರ ಲಂಡನ್‌ನಿಂದ ಢಾಕಾಗೆ ಮರಳಿದ್ದಾರೆ. ಫೆಬ್ರವರಿ ಚುನಾವಣೆಯ ಪ್ರಧಾನಿ ರೇಸ್‌ನಲ್ಲಿರುವ ಅವರ ಆಗಮನ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ.
ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಭಾರೀ ಸಂಚಲನವೊಂದು ನಡೆದಿದೆ. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಕಾರ್ಯಾಧ್ಯಕ್ಷ ತಾರಿಕ್ ರೆಹಮಾನ್ ಸುಮಾರು 17 ವರ್ಷಗಳ ಲಂಡನ್ ವಾಸದ ನಂತರ ಗುರುವಾರ (ಡಿಸೆಂಬರ್ 25) ಸ್ವದೇಶಕ್ಕೆ ಮರಳಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್, ತಮ್ಮ ಪತ್ನಿ ಡಾ. ಜುಬೈದಾ ರೆಹಮಾನ್ ಮತ್ತು ಪುತ್ರಿ ಜೈಮಾ ರೆಹಮಾನ್ ಅವರೊಂದಿಗೆ ಹೀತ್ರು ವಿಮಾನ ನಿಲ್ದಾಣದಿಂದ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
ಢಾಕಾಕ್ಕೆ ಬಂದಿಳಿದ ತಾರಿಕ್ ರೆಹಮಾನ್
ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾದ ನಂತರ ರೆಹಮಾನ್ ಅವರ ಆಗಮನವು ಅತ್ಯಂತ ಮಹತ್ವ ಪಡೆದುಕೊಂಡಿದೆ. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಾವಿರಾರು ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಭದ್ರತೆಯ ದೃಷ್ಟಿಯಿಂದ ಢಾಕಾದಾದ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಗೃಹ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಎಂಡಿ ಜಹಾಂಗೀರ್ ಆಲಂ ಚೌಧರಿ ಅವರು ಬಿಗಿ ಬಂದೋಬಸ್ತ್‌ಗೆ ಸೂಚಿಸಿದ್ದಾರೆ.
ಖಲೀದಾ ಜಿಯಾ ಭೇಟಿ
ತಮ್ಮ ತಾಯಿ ಖಲೀದಾ ಜಿಯಾ ಅವರನ್ನು ಭೇಟಿ ಮಾಡಲಿರುವ ತಾರಿಕ್ ರೆಹಮಾನ್, ಬಳಿಕ 2024ರ ಜುಲೈ ದಂಗೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ. ಮುಂಬರುವ ಫೆಬ್ರವರಿ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಶೇಖ್ ಹಸೀನಾ ಸರ್ಕಾರ ಪತನದ ನಂತರ ಬಿಎನ್ಪಿ ದೇಶದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ.
ಯಾರು ಈ ತಾರಿಕ್ ರೆಹಮಾನ್?
ತಾರಿಕ್ ರೆಹಮಾನ್ ಬಾಂಗ್ಲಾದೇಶದ ಅತ್ಯಂತ ಪ್ರಭಾವಶಾಲಿ ಮತ್ತು ವಿವಾದಾತ್ಮಕ ರಾಜಕಾರಣಿಗಳಲ್ಲಿ ಒಬ್ಬರು. ಅವರು ಬಾಂಗ್ಲಾದೇಶದ ಪ್ರಮುಖ ರಾಜಕೀಯ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಯ ಪ್ರಸ್ತುತ ಕಾರ್ಯಾಧ್ಯಕ್ಷರಾಗಿದ್ದಾರೆ. ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ದಿವಂಗತ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಹಿರಿಯ ಪುತ್ರ. ಬಾಂಗ್ಲಾದೇಶದ ಅತ್ಯಂತ ಶಕ್ತಿಶಾಲಿ ರಾಜಕೀಯ ಕುಟುಂಬದಿಂದ ಬಂದವರಾದ ಇವರು, ಪಕ್ಷದ ಭವಿಷ್ಯದ ನಾಯಕನೆಂದೇ ಗುರುತಿಸಲ್ಪಟ್ಟಿದ್ದಾರೆ.
17 ವರ್ಷಗಳ ಕಾಲ ಸ್ವಯಂ ಗಡಿಪಾರು ಶಿಕ್ಷೆ
2007ರಲ್ಲಿ ಬಾಂಗ್ಲಾದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಇವರನ್ನು ಬಂಧಿಸಲಾಗಿತ್ತು. ನಂತರ 2008ರಲ್ಲಿ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಲಂಡನ್‌ಗೆ ತೆರಳಿದ ಇವರು, ಅಲ್ಲಿಂದಲೇ ಸುಮಾರು 17 ವರ್ಷಗಳ ಕಾಲ ಸ್ವಯಂ ಗಡಿಪಾರು ಶಿಕ್ಷೆ ಅನುಭವಿಸುತ್ತಿದ್ದರು. ಬಾಂಗ್ಲಾದೇಶದಲ್ಲಿ ಇವರ ವಿರುದ್ಧ ಭ್ರಷ್ಟಾಚಾರ ಮತ್ತು 2004ರ ಗ್ರೆನೇಡ್ ದಾಳಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಿತ್ತು. ಇದನ್ನು ಅವರು "ರಾಜಕೀಯ ಪ್ರೇರಿತ" ಎಂದು ಕರೆದಿದ್ದರು.
ತಾರಿಕ್ ಆಗಮನ ರಾಜಕೀಯ ಚಿತ್ರಣ ಬದಲಿಸುತ್ತಾ?
ಆಗಸ್ಟ್ 5, 2024 ರಂದು ವಿದ್ಯಾರ್ಥಿ ದಂಗೆಯಿಂದಾಗಿ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ ನಂತರ, ಬಾಂಗ್ಲಾದೇಶದ ರಾಜಕೀಯ ಚಿತ್ರಣ ಬದಲಾಗಿದೆ. ಹಸೀನಾ ಅವರ ಕಡುವೈರಿಯಾಗಿರುವ ತಾರಿಕ್ ರೆಹಮಾನ್ ಈಗ ಸ್ವದೇಶಕ್ಕೆ (ಡಿಸೆಂಬರ್ 2025ರಲ್ಲಿ) ಮರಳಿದ್ದಾರೆ. ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.

