
ಬಾಂಗ್ಲಾದಲ್ಲಿ ಜಿಹಾದಿಗಳ ಅಟ್ಟಹಾಸ:ಬಾಲಿವುಡ್ ಗಾಯಕನ ಕಾರ್ಯಕ್ರಮದ ಮೇಲೆ ದಾಳಿ
ಬಾಂಗ್ಲಾದೇಶದ ಫರೀದ್‌ಪುರದಲ್ಲಿ ನಡೆಯಬೇಕಿದ್ದ ಗಾಯಕ ಜೇಮ್ಸ್ ಅವರ ರಾಕ್ ಕಾರ್ಯಕ್ರಮದ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿದೆ.
ಬಾಂಗ್ಲಾದೇಶದಲ್ಲಿ ಕಲಾವಿದರು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಪ್ರಗತಿಪರ ಚಿಂತಕರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಮುಂದುವರಿದಿದೆ. ಖ್ಯಾತ ರಾಕ್ ಗಾಯಕ ಜೇಮ್ಸ್ ಅವರ ಸಂಗೀತ ಕಚೇರಿಯನ್ನು ಫರೀದ್‌ಪುರದಲ್ಲಿ ರದ್ದುಗೊಳಿಸಲಾಗಿದೆ. ಢಾಕಾದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಸ್ಥಳೀಯ ಶಾಲೆಯೊಂದರ ವಾರ್ಷಿಕೋತ್ಸವದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಗಲಭೆ ಜೋರಾದ ಹಿನ್ನೆಲೆ ಕಾರ್ಯಕ್ರಮ ರದ್ದುಗೊಂಡಿದೆ.
ಘಟನೆಯ ವಿವರ:
ಶುಕ್ರವಾರ ರಾತ್ರಿ 9 ಗಂಟೆಗೆ ಸಾವಿರಾರು ಅಭಿಮಾನಿಗಳು ಜೇಮ್ಸ್ ಅವರ ಹಾಡುಗಳನ್ನು ಕೇಳಲು ಕಾತರರಾಗಿದ್ದರು. ಆದರೆ, ಕಾರ್ಯಕ್ರಮ ಆರಂಭವಾಗುವ ಮುನ್ನವೇ ಸಂಘಟಿತವಾಗಿ ಬಂದ ಉದ್ರಿಕ್ತರ ಗುಂಪೊಂದು 'ಸಂಗೀತ ಇಸ್ಲಾಂ ವಿರೋಧಿ' ಎಂದು ಕೂಗುತ್ತಾ ವೇದಿಕೆಗೆ ನುಗ್ಗಲು ಯತ್ನಿಸಿತು. ನೆರೆದಿದ್ದ ಸಾರ್ವಜನಿಕರ ಮೇಲೆ ಅಂಧಾಭಿಮಾನದ ಕಲ್ಲು ತೂರಾಟ ನಡೆಸಲಾಯಿತು. ಸ್ಥಳೀಯ ವಿದ್ಯಾರ್ಥಿಗಳು ಈ ದಾಳಿಕೋರರನ್ನು ಎದುರಿಸಲು ಧೈರ್ಯ ತೋರಿದರೂ, ಮಾರಕಾಸ್ತ್ರಗಳನ್ನು ಹೊಂದಿದ್ದ ಗುಂಪಿನ ಅಬ್ಬರಕ್ಕೆ ಪೊಲೀಸರು ಅಸಹಾಯಕರಾದರು. ಅಂತಿಮವಾಗಿ ಜನಪ್ರಿಯ ಗಾಯಕನ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ದಾಳಿಯ ಭೀಕರ ದೃಶ್ಯ
ಮಕ್ಕಳಿಗೆ ಗಂಭೀರ ಗಾಯ
ಜಿಹಾದಿ ಗುಂಪುಗಳು ವೇದಿಕೆಗೆ ನುಗ್ಗಲು ಯತ್ನಿಸಿದಾಗ, ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಒಗ್ಗಟ್ಟಾಗಿ ದಾಳಿಕೋರರನ್ನು ತಡೆಯಲು ಮುಂದಾದರು. ಆಗ ಭೀಕರವಾಗಿ ಕಲ್ಲು ಮತ್ತು ಇಟ್ಟಿಗೆಗಳಿಂದ ತೂರಾಟ ನಡೆಸಿದ್ದಾರೆ. ಈ ಕಲ್ಲು ತೂರಾಟದ ತೀವ್ರತೆಗೆ ಸುಮಾರು 10 ರಿಂದ 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಸ್ಲೀಮಾ ನಸ್ರೀನ್ ಆಕ್ರೋಶ:
ಲೇಖಕಿ ತಸ್ಲೀಮಾ ನಸ್ರೀನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಸಾಂಸ್ಕೃತಿಕ ಕೇಂದ್ರವಾದ ಛಾಯಾನಾಟ್ ಮತ್ತು ಜಾತ್ಯತೀತ ಪ್ರಜ್ಞೆ ಮೂಡಿಸುತ್ತಿದ್ದ ಉದೀಚಿ ಸಂಘಟನೆಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇಂದು ಜಿಹಾದಿಗಳು ಖ್ಯಾತ ಗಾಯಕ ಜೇಮ್ಸ್ ಅವರನ್ನೂ ಹಾಡಲು ಬಿಡಲಿಲ್ಲ" ಎಂದು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತದ ಖ್ಯಾತ ಸಂಗೀತಗಾರರಾದ ಸಿರಾಜ್ ಅಲಿ ಖಾನ್ ಮತ್ತು ಅರ್ಮಾನ್ ಖಾನ್ ಅವರು ಬಾಂಗ್ಲಾದೇಶದಲ್ಲಿ ಕಲಾವಿದರಿಗೆ ಸುರಕ್ಷತೆ ಇಲ್ಲ ಎಂಬ ಕಾರಣಕ್ಕೆ ಅಲ್ಲಿನ ಆಹ್ವಾನವನ್ನು ತಿರಸ್ಕರಿಸಿರುವುದು ದೇಶದ ಸಾಂಸ್ಕೃತಿಕ ಅವನತಿಗೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.
ಯಾರು ಈ ಜೇಮ್ಸ್?
ಬಾಂಗ್ಲಾದೇಶದ ಅತ್ಯಂತ ಜನಪ್ರಿಯ ಗಾಯಕ ಮತ್ತು ಗಿಟಾರಿಸ್ಟ್ ಆಗಿರುವ ಜೇಮ್ಸ್, ಭಾರತದ ಬಾಲಿವುಡ್‌ನಲ್ಲೂ ಪ್ರಸಿದ್ಧರು. 'ಗ್ಯಾಂಗ್‌ಸ್ಟರ್' ಚಿತ್ರದ 'ಭೀಗಿ ಭೀಗಿ' ಮತ್ತು 'ಲೈಫ್ ಇನ್ ಎ ಮೆಟ್ರೋ' ಚಿತ್ರದ 'ಅಲ್ವಿದಾ' ಅಂತಹ ಹಿಟ್ ಹಾಡುಗಳನ್ನು ನೀಡಿದ್ದಾರೆ. ಇಂತಹ ಪ್ರಭಾವಿ ವ್ಯಕ್ತಿಯ ಕಚೇರಿಯ ಮೇಲೆಯೇ ದಾಳಿ ನಡೆದಿರುವುದು ಅಲ್ಲಿನ ಕಟ್ಟರ್ ಪಂಥೀಯರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.
ರಾಜಕೀಯ ಆಯಾಮ:
ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ವಿಮರ್ಶಕರು ಟೀಕಿಸಿದ್ದಾರೆ. ಫೆಬ್ರವರಿಯಲ್ಲಿ ನಡೆಯಬೇಕಿರುವ ಚುನಾವಣೆಗಳನ್ನು ಮುಂದೂಡುವ ಉದ್ದೇಶದಿಂದಲೇ ಇಂತಹ ವ್ಯವಸ್ಥಿತ ದಾಳಿಗಳನ್ನು ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

