
ಪಂಜಾಬಿ ಇನ್ಫ್ಲುಯೆನ್ಸರ್ ನ್ಯಾನ್ಸಿ ಗ್ರೆವಾಲ್
ಕೆನಡಾದಲ್ಲಿ ಪಂಜಾಬಿ ಇನ್ಫ್ಲುಯೆನ್ಸರ್ ನ್ಯಾನ್ಸಿ ಗ್ರೆವಾಲ್ ಬರ್ಬರ ಹತ್ಯೆ
ಮಾರ್ಚ್ 3ರ ರಾತ್ರಿ 9:30ರ ಸುಮಾರಿಗೆ ಟಾಡ್ ಲೇನ್‌ನಲ್ಲಿ ದುಷ್ಕರ್ಮಿಗಳು ನ್ಯಾನ್ಸಿ ಅವರಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಖಲಿಸ್ತಾನಿ ಬೆಂಬಲಿಗರ ವಿರುದ್ಧ ಸದಾ ದನಿಯೆತ್ತುತ್ತಿದ್ದ ಪಂಜಾಬ್ ಮೂಲದ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ನ್ಯಾನ್ಸಿ ಗ್ರೆವಾಲ್ (45) ಅವರನ್ನು ಕೆನಡಾದಲ್ಲಿ ಬರ್ಬರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕೆನಡಾದ ಒಂಟಾರಿಯೊ ಪ್ರಾಂತ್ಯದ ಲಾಸಲ್ಲೆ (LaSalle) ಎಂಬಲ್ಲಿ ಮಾರ್ಚ್ 3ರಂದು ಈ ಭೀಕರ ಘಟನೆ ನಡೆದಿದೆ. ತಮ್ಮ ನಿರ್ಭೀತ ನಿಲುವುಗಳಿಂದಾಗಿ ನ್ಯಾನ್ಸಿ ನಿರಂತರವಾಗಿ ಜೀವಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಭಾರತದಲ್ಲಿರುವ ಅವರ ತಾಯಿ ಸ್ಪಷ್ಟಪಡಿಸಿದ್ದಾರೆ. ಕೃತ್ಯದ ಹಿಂದೆ ಖಲಿಸ್ತಾನಿ ಬೆಂಬಲಿಗರ ಕೈವಾಡವಿರುವ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ.
ನ್ಯಾನ್ಸಿ ಗ್ರೆವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪಂಜಾಬ್‌ನ ವಿವಿಧ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಕಟು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರಮುಖವಾಗಿ ಖಲಿಸ್ತಾನಿಗಳ ವಿರುದ್ಧ ಕಠಿಣ ವಾಗ್ದಾಳಿ ನಡೆಸುತ್ತಿದ್ದ ಅವರು, ನಿಷೇಧಿತ ಖಲಿಸ್ತಾನಿ ನಾಯಕ ಗುರಪತ್ವಂತ್ ಸಿಂಗ್ ಪನ್ನುನ್ ವಿರುದ್ಧವೂ ಕಿಡಿಕಾರಿದ್ದರು
ಇತ್ತೀಚೆಗಷ್ಟೇ ರಾಧಾಸ್ವಾಮಿ ಸತ್ಸಂಗ ಬಿಯಾಸ್ ಮುಖ್ಯಸ್ಥ ಗುರಿಂದರ್ ಸಿಂಗ್ ಧಿಲ್ಲೋನ್ ಬಗ್ಗೆಯೂ ಅವರು ಮಾತನಾಡಿದ್ದರು. ತಮ್ಮ ಈ ನಿಲುವುಗಳಿಂದಾಗಿ ಅವರು ನಿರಂತರವಾಗಿ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದರು ಎಂದು ಜಲಂಧರ್‌ನಲ್ಲಿರುವ ಅವರ ತಾಯಿ ಶಿಂದರ್‌ಪಾಲ್ ಕೌರ್ ಆರೋಪಿಸಿದ್ದಾರೆ. ಮಾರ್ಚ್ 3ರ ರಾತ್ರಿ 9:30ರ ಸುಮಾರಿಗೆ ಟಾಡ್ ಲೇನ್‌ನಲ್ಲಿ ದುಷ್ಕರ್ಮಿಗಳು ನ್ಯಾನ್ಸಿ ಅವರಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಹಿಂದೆಯೂ ನಡೆದಿತ್ತು ಕೊಲೆ ಯತ್ನ
ತಮ್ಮ ಮಗಳ ಹತ್ಯೆಯ ಹಿಂದೆ ಕೆನಡಾದ ವಿಂಡ್ಸರ್‌ನಲ್ಲಿರುವ ಕೆಲವು ಮೂಲಭೂತವಾದಿಗಳ ಕೈವಾಡವಿದೆ ಎಂದು ತಾಯಿ ಕೌರ್ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೂ ಮುನ್ನ ನ್ಯಾನ್ಸಿ ಅವರ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಲಾಗಿತ್ತು, ಆದರೆ ಆಕೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇತ್ತೀಚೆಗಷ್ಟೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಯುವಕನೊಬ್ಬ ಮನೆಗೆ ಬಂದು ವಿಚಕ್ಷಣೆ (ರೆಕ್ಕಿ) ನಡೆಸಿದ್ದ. ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರಿಂದ ಆತ ಅಲ್ಲಿಂದ ಪರಾರಿಯಾಗಿದ್ದ ಎಂಬ ಆಘಾತಕಾರಿ ವಿಚಾರವನ್ನೂ ತಾಯಿ ಬಿಚ್ಚಿಟ್ಟಿದ್ದಾರೆ. 2018ರಲ್ಲಿ ಕೆನಡಾಗೆ ತೆರಳಿದ್ದ ನ್ಯಾನ್ಸಿ, ನರ್ಸಿಂಗ್ ಕೋರ್ಸ್ ಮುಗಿಸಿ ಎರಡು ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದರು.
ಕೆನಡಾ ಪೊಲೀಸರ ತನಿಖೆ ಚುರುಕು
ಈ ಭೀಕರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲಾಸಲ್ಲೆ ಪೊಲೀಸ್ ಇಲಾಖೆಯು ತನಿಖೆಯನ್ನು ಚುರುಕುಗೊಳಿಸಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಇದೊಂದು ಪ್ರತ್ಯೇಕ ಘಟನೆಯಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ಹಂತದಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಿಸಿಟಿವಿ ದೃಶ್ಯಾವಳಿ ಅಥವಾ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಕೊಲೆಗಾರರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮೃತಳ ಕುಟುಂಬಸ್ಥರು ಕೆನಡಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

