ಪನ್ನೂನ್ ಹತ್ಯೆ ಸಂಚು: ಅಮೆರಿಕ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡ ಭಾರತೀಯ ಪ್ರಜೆ
x
ಆರೋಪಿ ನಿಖಿಲ್ ಗುಪ್ತಾ

ಪನ್ನೂನ್ ಹತ್ಯೆ ಸಂಚು: ಅಮೆರಿಕ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡ ಭಾರತೀಯ ಪ್ರಜೆ

Gurpatwant Singh Pannun|ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ನಿಖಿಲ್ ಗುಪ್ತಾ 1,00,000 ಅಮೆರಿಕನ್ ಡಾಲರ್ ಸುಪಾರಿ ನೀಡಲು ಗುಪ್ತಾ ಮುಂದಾಗಿದ್ದ ಎನ್ನಲಾಗಿದೆ.


ಅಮೆರಿಕದ ಪ್ರಜೆ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿದ್ದ ನಿಖಿಲ್ ಗುಪ್ತಾ (54), ಅಮೆರಿಕದ ನ್ಯಾಯಾಲಯದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಶುಕ್ರವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದ ಮುಂದೆ ಹಾಜರಾದ ನಿಖಿಲ್ ಗುಪ್ತಾ, ಹತ್ಯೆಗಾಗಿ ಸುಪಾರಿ, ಹತ್ಯೆಗೆ ಸಂಚು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಮೂರು ಪ್ರಮುಖ ಆರೋಪಗಳಲ್ಲಿ ತಾನು ಅಪರಾಧಿ ಎಂದು ಒಪ್ಪಿಕೊಂಡಿದ್ದಾರೆ. ಈ ಆರೋಪಗಳಿಗೆ ಗರಿಷ್ಠ 40 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಮೇ 29 ರಂದು ನ್ಯಾಯಾಧೀಶ ವಿಕ್ಟರ್ ಮ್ಯಾರೇರೋ ಅವರು ಅಂತಿಮ ಶಿಕ್ಷೆ ಪ್ರಕಟಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ

ಅಮೆರಿಕದ ತನಿಖಾ ಸಂಸ್ಥೆಗಳ ಪ್ರಕಾರ, ಭಾರತ ಸರ್ಕಾರದ ಉದ್ಯೋಗಿಯಾಗಿದ್ದ ವಿಕಾಶ್ ಯಾದವ್ ಎಂಬಾತನ ಸೂಚನೆಯಂತೆ ನಿಖಿಲ್ ಗುಪ್ತಾ ಈ ಹತ್ಯೆ ಸಂಚು ರೂಪಿಸಿದ್ದ. ಪನ್ನೂನ್ ಹತ್ಯೆಗಾಗಿ 1,00,000 ಅಮೆರಿಕನ್ ಡಾಲರ್ ಸುಪಾರಿ ನೀಡಲು ಗುಪ್ತಾ ಮುಂದಾಗಿದ್ದ. ಆದರೆ, ಅವರು ಸಂಪರ್ಕಿಸಿದ ವ್ಯಕ್ತಿ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಪರ ಕೆಲಸ ಮಾಡುತ್ತಿದ್ದ ಗುಪ್ತಚರನಾಗಿದ್ದರಿಂದ ಈ ಸಂಚು ಬಯಲಿಗೆ ಬಂದಿತ್ತು. ಜೂನ್ 2024 ರಲ್ಲಿ ಜೆಕ್ ಗಣರಾಜ್ಯದಿಂದ ಗುಪ್ತಾರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು.

ಭಾರತ ಸರ್ಕಾರದ ನಿಲುವು

ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ಮೊದಲೇ ಸ್ಪಷ್ಟಪಡಿಸಿದೆ. ಇಂತಹ ಕೃತ್ಯಗಳು ಸರ್ಕಾರದ ನೀತಿಗೆ ವಿರುದ್ಧವಾಗಿವೆ ಎಂದು ತಿಳಿಸಿರುವ ಭಾರತ, ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಜನವರಿ 2025 ರಲ್ಲಿ ವರದಿ ಸಲ್ಲಿಸಿದ ಸಮಿತಿಯು, ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತಾದರೂ, ಯಾವುದೇ ಅಧಿಕೃತ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಯಾರು ಈ ಗುರುಪತ್ವಂತ್ ಸಿಂಗ್ ಪನ್ನೂನ್?

ಪನ್ನೂನ್ ಮೂಲತಃ ಅಮೃತಸರದ ಹತ್ತಿರದ ಖಾನ್‌ಕೋಟ್ ಗ್ರಾಮದವನು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವ ಈತ, ಸದ್ಯ ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಸಿದ್ದಾನೆ. ಈತ ಭಾರತದಿಂದ ಪಂಜಾಬ್ ಅನ್ನು ಬೇರ್ಪಡಿಸಿ 'ಖಲಿಸ್ತಾನ್' ಎಂಬ ಪ್ರತ್ಯೇಕ ದೇಶವನ್ನು ರಚಿಸಬೇಕು ಎಂದು ಹೋರಾಡುತ್ತಿರುವ 'ಸಿಖ್ಸ್ ಫಾರ್ ಜಸ್ಟಿಸ್' (SFJ) ಎಂಬ ನಿಷೇಧಿತ ಸಂಘಟನೆಯ ಮುಖ್ಯಸ್ಥ.

ಭಾರತಕ್ಕೆ ಈತ ಹೇಗೆ ಅಪಾಯಕಾರಿ?

ಭಾರತದ ವಿರುದ್ಧ ಪ್ರತ್ಯೇಕತಾವಾದವನ್ನು ಪ್ರಚೋದಿಸುತ್ತಿರುವ ಮತ್ತು ಹಿಂಸಾಚಾರಕ್ಕೆ ಆರ್ಥಿಕ ನೆರವು ನೀಡುತ್ತಿರುವ ಕಾರಣಕ್ಕಾಗಿ, 2020 ರಲ್ಲಿ ಭಾರತ ಸರ್ಕಾರ ಈತನನ್ನು ಭಯೋತ್ಪಾದಕ ವಿರೋಧಿ ಕಾಯ್ದೆ (UAPA) ಅಡಿಯಲ್ಲಿ 'ಭಯೋತ್ಪಾದಕ' ಎಂದು ಅಧಿಕೃತವಾಗಿ ಘೋಷಿಸಿದೆ.

ಪನ್ನೂನ್ ಸದಾ ವಿಡಿಯೋಗಳ ಮೂಲಕ ಭಾರತಕ್ಕೆ ಬೆದರಿಕೆ ಹಾಕುತ್ತಿರುತ್ತಾನೆ. ಏರ್ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವ ಬೆದರಿಕೆ, ಸಂಸತ್ ಭವನದ ಮೇಲೆ ದಾಳಿಯ ಎಚ್ಚರಿಕೆ ಹಾಗೂ ಭಾರತೀಯ ರಾಜತಾಂತ್ರಿಕರ ಮೇಲೆ ದಾಳಿಗೆ ಪ್ರಚೋದನೆ ನೀಡುವುದು ಈತನ ಮುಖ್ಯ ಕೆಲಸ.

ಪಂಜಾಬ್‌ನ ಯುವಕರು ಶಸ್ತ್ರಾಸ್ತ್ರ ಹಿಡಿಯುವಂತೆ ಪ್ರಚೋದಿಸುವುದು, ಭಾರತ ವಿರೋಧಿ ಗ್ರಾಫಿಟಿ (ಗೋಡೆ ಬರಹ) ಬರೆಯಲು ಹಣದ ಆಮಿಷ ಒಡ್ಡುವುದು ಮತ್ತು 'ಸ್ಲೀಪರ್ ಸೆಲ್‌'ಗಳನ್ನು ಆಕ್ಟಿವೇಟ್ ಮಾಡಲು ಪ್ರಯತ್ನಿಸುವುದು ಈತನ ಸಂಘಟನೆಯ ಗುರಿಯಾಗಿದೆ. ಈತನ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ, ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಪಂಜಾಬ್‌ನಲ್ಲಿರುವ ಈತನ ಎಲ್ಲಾ ಆಸ್ತಿಪಾಸ್ತಿಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದೆ.

Read More
Next Story