
ಪಂಜಾಬ್‌ನಲ್ಲಿ ಆಪ್ ನಾಯಕನ ಬರ್ಬರ ಹತ್ಯೆ-ಗುರುದ್ವಾರದ ಎದುರೇ ಗುಂಡೇಟು
ಲಕ್ಕಿ ಒಬೆರಾಯ್ ಅವರು ಗುರುದ್ವಾರ ಸಾಹಿಬ್‌ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ದಾಳಿಕೋರರು ಅವರ ಮೇಲೆ ಸತತವಾಗಿ ಗುಂಡು ಹಾರಿಸಿದ್ದಾರೆ.
ಪಂಜಾಬ್‌ನ ಜಲಂಧರ್ ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಮಾಡೆಲ್ ಟೌನ್‌ನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಆಮ್ ಆದ್ಮಿ ಪಕ್ಷದ (AAP) ಸ್ಥಳೀಯ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುರುದ್ವಾರದ ಮುಂಭಾಗದಲ್ಲೇ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯು ನಗರದಾದ್ಯಂತ ತೀವ್ರ ಆತಂಕ ಮತ್ತು ಭೀತಿಯ ವಾತಾವರಣವನ್ನು ನಿರ್ಮಿಸಿದೆ.
ಲಕ್ಕಿ ಒಬೆರಾಯ್ ಅವರು ಗುರುದ್ವಾರ ಸಾಹಿಬ್‌ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ದಾಳಿಕೋರರು ಅವರ ಮೇಲೆ ಸತತವಾಗಿ ಗುಂಡು ಹಾರಿಸಿದ್ದು, ಒಬೆರಾಯ್ ಅವರಿಗೆ ಒಟ್ಟು ಐದು ಗುಂಡುಗಳು ತಗುಲಿವೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
#WATCH | Punjab | DCP Jalandhar Manpreet Singh says," Lucky Oberoi was leaving after offering prayers here. At that time, two scooter-borne people came and fired at him. He was taken to the hospital, where he is under treatment. Probe is underway." pic.twitter.com/CGnD4UjzYZ
— ANI (@ANI) February 6, 2026
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಗುರುದ್ವಾರದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರ ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ದಾಳಿಕೋರರು ಯಾರು ಮತ್ತು ಯಾವ ದಿಕ್ಕಿನಿಂದ ಬಂದಿದ್ದರು ಎಂಬುದನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಅಂಗಡಿಗಳು ಮತ್ತು ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾ ತಂಡವು ಕೂಲಂಕಷವಾಗಿ ಪರಿಶೀಲಿಸುತ್ತಿದೆ.
ರಾಜಕೀಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ, ಲಕ್ಕಿ ಒಬೆರಾಯ್ ಅವರು ಆಮ್ ಆದ್ಮಿ ಪಕ್ಷದ ಕ್ಯಾಂಟ್ ಕ್ಷೇತ್ರದ ಉಸ್ತುವಾರಿ ರಾಜವಿಂದರ್ ಕೌರ್ ಥಿಯಾರಾ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಇವರ ಪತ್ನಿ ಕೂಡ ಈ ಹಿಂದೆ ಎಎಪಿ ಪಕ್ಷದ ವತಿಯಿಂದ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಹತ್ಯೆಯ ಹಿಂದಿನ ನಿಖರವಾದ ಕಾರಣ ಅಥವಾ ಉದ್ದೇಶವೇನೆ ಎಂಬುದು ಇನ್ನೂ ನಿಗೂಢವಾಗಿದೆ. ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದು, ಹಂತಕರಿಗಾಗಿ ಬಲೆ ಬೀಸಿದ್ದಾರೆ. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ.

