
ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಸುಶೀಲ ಕರ್ಕಿ
ಸಂಪರ್ಕಕ್ಕೆ ಸಿಗದ ಬಾಲೆನ್ ಶಾ, ನೇಪಾಳ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಸುಶೀಲ ಕರ್ಕಿ ನೇಮಕ
ನೇಪಾಳದ ಸಂಭಾವ್ಯ ಪ್ರಧಾನಿ ಹುದ್ದೆಗೆ ಕಠ್ಮಂಡು ನಗರದ ಮೇಯರ್ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಬಾಲೆನ್ ಶಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು.
ನೇಪಾಳದಲ್ಲಿ ಯುವಜನರ (ಜೆನ್-ಝಡ್) ಬೃಹತ್ ಪ್ರತಿಭಟನೆಯಿಂದಾಗಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲ ಕರ್ಕಿ ಅವರನ್ನು ನೇಮಿಸಲಾಗಿದೆ. ಪ್ರಧಾನಿ ಕೆ.ಪಿ. ಶರ್ಮ ಓಲಿ ಮತ್ತು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ, ಪ್ರತಿಭಟನಾ ನಿರತ ಯುವಕರೇ ಸುಶೀಲ ಕರ್ಕಿ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
ದೇಶಾದ್ಯಂತ ನಡೆದ ವರ್ಚುವಲ್ ಸಭೆಯಲ್ಲಿ 5,000ಕ್ಕೂ ಹೆಚ್ಚು ಯುವಜನರು ಬೆಂಬಲಿಸಿದ ನಂತರ, ನಿವೃತ್ತ ನ್ಯಾಯಮೂರ್ತಿ ಸುಶೀಲ ಕರ್ಕಿ ಅವರು ಹಂಗಾಮಿ ಪ್ರಧಾನಿ ಹುದ್ದೆಗೆ ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದರು. 71 ವರ್ಷದ ಸುಶೀಲ ಕರ್ಕಿ ಅವರು, 2016ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡು ಇತಿಹಾಸ ಸೃಷ್ಟಿಸಿದ್ದರು. ತಮ್ಮ ಕಠಿಣ ನಿಲುವು ಮತ್ತು ಭ್ರಷ್ಟಾಚಾರ-ವಿರೋಧಿ ಹೋರಾಟದಿಂದಾಗಿ ಅವರು ದೇಶದಲ್ಲಿ ಅಪಾರ ಗೌರವವನ್ನು ಗಳಿಸಿದ್ದಾರೆ. ಈ ಹಿಂದೆ, ತಮ್ಮ ಅಧಿಕಾರಾವಧಿಯಲ್ಲಿ, ಅವರು ಆಡಳಿತಾರೂಢ ಒಕ್ಕೂಟದ ಆಯ್ಕೆಯ ಪೊಲೀಸ್ ಮುಖ್ಯಸ್ಥರ ನೇಮಕಾತಿಯನ್ನು ರದ್ದುಗೊಳಿಸುವಂತಹ ದಿಟ್ಟ ತೀರ್ಪುಗಳನ್ನು ನೀಡಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ದೋಷಾರೋಪಣೆ ನಿರ್ಣಯವನ್ನು ಮಂಡಿಸಲಾಗಿತ್ತು, ಆದರೆ ಸಾರ್ವಜನಿಕರ ತೀವ್ರ ಒತ್ತಡದಿಂದಾಗಿ ಅದನ್ನು ಹಿಂಪಡೆಯಲಾಗಿತ್ತು. ಇದೀಗ, ದೇಶವು ರಾಜಕೀಯ ಅಸ್ಥಿರತೆಯಲ್ಲಿರುವಾಗ, ಅವರ ಅನುಭವ ಮತ್ತು ನಿಷ್ಪಕ್ಷಪಾತ ಹಿನ್ನೆಲೆಯನ್ನು ಪರಿಗಣಿಸಿ, ಜೆನ್-ಝಡ್ ಚಳುವಳಿಯು ಅವರನ್ನು ತಮ್ಮ ನಾಯಕಿಯಾಗಿ ಆಯ್ಕೆ ಮಾಡಿದೆ.
ಸಂಪರ್ಕಕ್ಕೆ ಸಿಗದ ಬೆಂಗಳೂರಿನಲ್ಲಿ ಓದಿದ್ದ ಯುವ ನಾಯಕ
ನೇಪಾಳದ ಸಂಭಾವ್ಯ ಪ್ರಧಾನಿ ಹುದ್ದೆಗೆ ಕಠ್ಮಂಡು ನಗರದ ಮೇಯರ್ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಬಾಲೆನ್ ಶಾ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಅವರನ್ನು ಸಂಪರ್ಕಿಸಲು ಜೆನ್ ಝಡ್‌ಗಳು ಸತತ ಪ್ರಯತ್ನ ಪಟ್ಟರೂ ಅವರು ಸಿಗದಿರುವ ಕಾರಣ ನಿವೃತ್ತ ನ್ಯಾಯಮೂರ್ತಿ ಸುಶೀಲ ಕರ್ಕಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಭಟನೆಗೆ ಕಾರಣವೇನು?
ಕಳೆದ ಶುಕ್ರವಾರ(ಸೆ.5), ನೇಪಾಳ ಸರ್ಕಾರವು ದೇಶದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಿಕೊಳ್ಳಲು ವಿಫಲವಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು 'X' (ಹಿಂದಿನ ಟ್ವಿಟರ್) ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹಠಾತ್ತನೆ ನಿರ್ಬಂಧಿಸಿತ್ತು. ಈ ಕಂಪನಿಗಳು ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಲು ಮತ್ತು ತಮ್ಮ ಬಳಕೆದಾರರನ್ನು ಸರ್ಕಾರದ ಕಣ್ಗಾವಲಿಗೆ ತರಲು ನಿರಾಕರಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
ನಿಯಂತ್ರಕ ಅನುಸರಣೆಯ ಕಾರಣ ನೀಡಿ ಸರ್ಕಾರವು ಈ ನಿಷೇಧವನ್ನು ಸಮರ್ಥಿಸಿಕೊಂಡಿದ್ದರೂ, ಇದು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮತ್ತು ವಿಮರ್ಶಾತ್ಮಕ ಚರ್ಚೆಗಳನ್ನು ನಿಗ್ರಹಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಸಾಮಾಜಿಕ ಮಾಧ್ಯಮ ನಿಷೇಧವು ಯುವಜನರ ಆಕ್ರೋಶಕ್ಕೆ ತುಪ್ಪ ಸುರಿದಿದ್ದು, ಅವರು ಆನ್‌ಲೈನ್‌ನಿಂದ ಬೀದಿಗಿಳಿದು ಹೋರಾಟ ಮಾಡಲು ಪ್ರೇರೇಪಿಸಿತ್ತು.
ಭ್ರಷ್ಟಾಚಾರದ ವಿರುದ್ಧದ ಆಕ್ರೋಶ
ಈ 'ಜೆನ್ ಜಿ' ಚಳುವಳಿಯು ಕೇವಲ ಸಾಮಾಜಿಕ ಮಾಧ್ಯಮ ನಿಷೇಧಕ್ಕೆ ಸೀಮಿತವಾಗಿಲ್ಲ. ಇದು ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ಆರ್ಥಿಕ ಅಸಮಾನತೆಯ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ. "ತೆರಿಗೆದಾರರ ಹಣ ಎಲ್ಲಿಗೆ ಹೋಯಿತು?" ಮತ್ತು "ಸ್ವತಂತ್ರ ಧ್ವನಿ ನಮ್ಮ ಹಕ್ಕು" ಎಂಬಂತಹ ಫಲಕಗಳನ್ನು ಹಿಡಿದು, ಯುವಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ನಿಷೇಧದ ಹೊರತಾಗಿಯೂ, ಟಿಕ್‌ಟಾಕ್‌ನಂತಹ ಪರ್ಯಾಯ ವೇದಿಕೆಗಳನ್ನು ಬಳಸಿಕೊಂಡು ಪ್ರತಿಭಟನಾಕಾರರು ಸಂಘಟಿತರಾಗಿದ್ದರು. ಸಾಮಾನ್ಯ ನೇಪಾಳಿಗಳ ದೈನಂದಿನ ಸಂಕಷ್ಟಗಳು ಮತ್ತು ರಾಜಕಾರಣಿಗಳ ಮಕ್ಕಳ ಐಷಾರಾಮಿ ಜೀವನವನ್ನು ಹೋಲಿಸುವ ವಿಡಿಯೋಗಳು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದವು.

