
ನೇಪಾಳ ಗಲಭೆ |ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಕನ್ನಡಿಗರು ; ತಾಯ್ನಾಡಿಗೆ ಕರೆತರಲು ಸಿಎಂ ಸೂಚನೆ
ನೇಪಾಳದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರ ಬೃಹತ್ ಪ್ರತಿಭಟನೆಗಳಿಂದಾಗಿ ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರನ್ನು ಆದಷ್ಟು ಬೇಗ ಕರೆತರುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ನೇಪಾಳದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ನೇಪಾಳದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರ ಬೃಹತ್ ಪ್ರತಿಭಟನೆಗಳಿಂದಾಗಿ ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರನ್ನು ಆದಷ್ಟು ಬೇಗ ಕರೆತರುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕನ್ನಡಿಗರನ್ನು ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.
ನೇಪಾಳ ಪ್ರಧಾನಿ ರಾಜೀನಾಮೆ
ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಭುಗಿಲೆದ್ದ ಬೃಹತ್ ಜನಾಂದೋಲನವು ಹಿಂಸಾರೂಪಕ್ಕೆ ತಿರುಗಿದ ಪರಿಣಾಮವಾಗಿ, ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಮಂಗಳವಾರ (ಸೆಪ್ಟೆಂಬರ್ 9) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ದೇಶದ ರಾಜಕೀಯ ಇತಿಹಾಸದಲ್ಲಿಯೇ ಇತ್ತೀಚಿನ ದಶಕಗಳಲ್ಲಿ ನಡೆದ ಅತ್ಯಂತ ತೀವ್ರ ಪ್ರತಿಭಟನೆ ಇದಾಗಿದ್ದು, ಯುವಜನರ ಆಕ್ರೋಶಕ್ಕೆ ಇಡೀ ಸರ್ಕಾರವೇ ತಲೆಬಾಗಿದೆ. ದೇಶದಲ್ಲಿ ಉಂಟಾಗಿರುವ ಗಂಭೀರ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಸಾಂವಿಧಾನಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಓಲಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬೃಹತ್ ಪ್ರತಿಭಟನೆಯ ಕಿಡಿಯನ್ನು ಹೊತ್ತಿಸಿದ್ದು ಸರ್ಕಾರದ ಒಂದು ತಪ್ಪು ನಿರ್ಧಾರ. ಓಲಿ ಸರ್ಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಸಚಿವರು ಮತ್ತು ರಾಜಕಾರಣಿಗಳ ಮಕ್ಕಳು ನಡೆಸುತ್ತಿದ್ದ ಐಷಾರಾಮಿ ಜೀವನಶೈಲಿಯನ್ನು 'ಜೆನ್-ಝಡ್' (Gen Z) ಎಂದು ಕರೆಯಲ್ಪಡುವ ಯುವ ಸಮುದಾಯವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಲು ಆರಂಭಿಸಿತ್ತು. "ಸಾರ್ವಜನಿಕ ಸೇವಕರ ಮಕ್ಕಳಿಗೆ ಇಷ್ಟೊಂದು ಸಂಪತ್ತು ಎಲ್ಲಿಂದ ಬಂತು?" ಎಂಬ ಅಭಿಯಾನವು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಆನ್‌ಲೈನ್ ಆಕ್ರೋಶವನ್ನು ಹತ್ತಿಕ್ಕುವ ಉದ್ದೇಶದಿಂದ, ಸರ್ಕಾರವು ಫೇಸ್‌ಬುಕ್ ಮತ್ತು 'ಎಕ್ಸ್' ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿತು. ಇದು ಜನರ ವಾಕ್ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಪರಿಗಣಿಸಲ್ಪಟ್ಟು, ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಯಿತು.