
ಸೆಪ್ಟೆಂಬರ್ 8, ಸೋಮವಾರ, ನೇಪಾಳದ ಕಠ್ಮಂಡುವಿನಲ್ಲಿ ಪ್ರತಿಭಟನಾಕಾರರನ್ನು ನಿಭಾಯಿಸುವಾಗ ಸಂಸತ್ತಿನ ಕಟ್ಟಡದ ಹೊರಗೆ ಗಲಭೆ ನಿಗ್ರಹ ಪೊಲೀಸರು ನಿಂತಿದ್ದಾರೆ.
ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಮಣಿದ ಸರ್ಕಾರ: ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ವಾಪಸ್
ಸೋಮವಾರ ನಡೆದ ತುರ್ತು ಸಚಿವ ಸಂಪುಟ ಸಭೆಯ ನಂತರ, ಸಂವಹನ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಯುವಜನರು ನಡೆಸಿದ ತೀವ್ರ ಹಿಂಸಾತ್ಮಕ ಪ್ರತಿಭಟನೆಗೆ ಮಣಿದ ನೇಪಾಳ ಸರ್ಕಾರ, ಸಾಮಾಜಿಕ ಮಾಧ್ಯಮಗಳ ಮೇಲೆ ವಿಧಿಸಿದ್ದ ನಿಷೇಧವನ್ನು ಸೋಮವಾರ ಹಿಂಪಡೆದಿದೆ. ಈ ಪ್ರತಿಭಟನೆಗಳಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ನಡೆದ ತುರ್ತು ಸಚಿವ ಸಂಪುಟ ಸಭೆಯ ನಂತರ, ಸಂವಹನ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. "ಜನರೇಷನ್ Z" (Gen Z) ಎಂದು ಕರೆಯಲ್ಪಡುವ ಯುವ ಸಮೂಹದ ಬೇಡಿಕೆಗೆ ಸ್ಪಂದಿಸಿ, ನಿಷೇಧಿತ ಸಾಮಾಜಿಕ ಜಾಲತಾಣಗಳನ್ನು ಪುನರಾರಂಭಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರತಿಭಟನೆಗೆ ಕಾರಣವೇನು?
ಕಳೆದ ಮೂರು ದಿನಗಳ ಹಿಂದೆ, ಫೇಸ್‌ಬುಕ್ ಮತ್ತು 'ಎಕ್ಸ್' (ಟ್ವಿಟ್ಟರ್) ಸೇರಿದಂತೆ 26 ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ನೇಪಾಳ ಸರ್ಕಾರ ನಿಷೇಧಿಸಿತ್ತು. ಈ ಜಾಲತಾಣಗಳು ನೇಪಾಳ ಸರ್ಕಾರದ ನಿಯಮಗಳ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ವಿಫಲವಾದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ಧ ಯುವಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರ ಕಠ್ಮಂಡುವಿನ ಸಂಸತ್ ಭವನದ ಮುಂದೆ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಕೆಲವು ಪ್ರತಿಭಟನಾಕಾರರು ಸಂಸತ್ ಭವನದ ಆವರಣಕ್ಕೆ ನುಗ್ಗಲು ಯತ್ನಿಸಿದಾಗ, ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಗುಂಡಿನ ದಾಳಿ ನಡೆಸಬೇಕಾಯಿತು. ಈ ಘರ್ಷಣೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರು.
ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಕೈಬಿಡಬೇಕೆಂದು ಸಚಿವ ಗುರುಂಗ್ ಮನವಿ ಮಾಡಿದ್ದಾರೆ. ಸರ್ಕಾರದ ನಿರ್ಧಾರದ ನಂತರ, ಸೋಮವಾರ ರಾತ್ರಿಯಿಂದಲೇ ಫೇಸ್‌ಬುಕ್, 'ಎಕ್ಸ್' ಮತ್ತು ವಾಟ್ಸಾಪ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳು ನೇಪಾಳದಲ್ಲಿ ಮತ್ತೆ ಕಾರ್ಯಾರಂಭ ಮಾಡಿವೆ.