
ಅಯತೊಲ್ಲಾ ಅಲಿ ಖಮೇನಿ, ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ
ಅಮೆರಿಕ-ಇಸ್ರೇಲ್ ಜಂಟಿ ವಾಯುದಾಳಿ: ಗಾಯಗೊಂಡಿದ್ದ ಇರಾನ್‌ನ ನಾಯಕ ಖಮೇನಿ ಪತ್ನಿ ನಿಧನ
ಟೆಹರಾನ್‌ನಲ್ಲಿ ನಡೆದ ಭೀಕರ ವಾಯುದಾಳಿಯ ವೇಳೆ ಮನ್ಸೌರೆ ಖೋಜಾಸ್ತೆ ಅವರು ತೀವ್ರವಾಗಿ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇಸ್ರೇಲ್ ದಾಳಿ ವೇಳೆ ಮೃತಪಟ್ಟಿದ್ದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ (79) ಅವರು ಸೋಮವಾರ ನಿಧನರಾಗಿದ್ದಾರೆ. ಇತ್ತೀಚೆಗೆ ರಾಜಧಾನಿ ಟೆಹರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ನಡೆಸಿದ್ದ ಜಂಟಿ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಟೆಹರಾನ್‌ನಲ್ಲಿ ನಡೆದ ಭೀಕರ ವಾಯುದಾಳಿಯ ವೇಳೆ ಮನ್ಸೌರೆ ಖೋಜಾಸ್ತೆ ಅವರು ತೀವ್ರವಾಗಿ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಾಯದ ತೀವ್ರತೆಯಿಂದಾಗಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ಕೋಮಾ ಹಂತಕ್ಕೆ ತಲುಪಿದ್ದರು. ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಅಧಿಕೃತ ಮೂಲಗಳು ಖಚಿತಪಡಿಸಿವೆ.
ದಾಳಿಯ ವೇಳೆ ಪತಿಯೊಂದಿಗಿದ್ದ ಪತ್ನಿ
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಭೀಕರ ದಾಳಿಯ ಸಂದರ್ಭದಲ್ಲಿ ಮನ್ಸೌರೆ ಅವರು ತಮ್ಮ ಪತಿ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೇ ಇದ್ದರು ಎಂದು ವರದಿಯಾಗಿದೆ. ಇದೇ ವಾಯುದಾಳಿಯಲ್ಲಿ ಇರಾನ್‌ನ ಪ್ರಭಾವಿ ನಾಯಕ ಖಮೇನಿ ಅವರು ಹತ್ಯೆಯಾಗಿದ್ದರು. ಇದೀಗ ಅದೇ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರ ಪತ್ನಿಯೂ ಬಲಿಯಾಗುವ ಮೂಲಕ, ಇರಾನ್ ಮತ್ತೊಂದು ದೊಡ್ಡ ಆಘಾತವನ್ನು ಎದುರಿಸುವಂತಾಗಿದೆ. ಖಮೇನಿ ಹತ್ಯೆಯ ಬೆನ್ನಲ್ಲೇ ಅವರ ಪತ್ನಿಯೂ ಮೃತಪಟ್ಟಿರುವುದು ಇರಾನ್ ಬೆಂಬಲಿಗರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

