Ayatollah Ali Khamenei| 45 ವರ್ಷಗಳ ಹಿಂದೆ ಸ್ಫೋಟದಿಂದ ಬಚಾವಾಗಿದ್ದ ಅದೇ ಶನಿವಾರ ಖಮೇನಿ ಅಂತ್ಯ
x
ಆಯತೊಲ್ಲಾ ಅಲಿ ಖಮೇನಿ(ಸಂಗ್ರಹ ಚಿತ್ರ)

Ayatollah Ali Khamenei| 45 ವರ್ಷಗಳ ಹಿಂದೆ ಸ್ಫೋಟದಿಂದ ಬಚಾವಾಗಿದ್ದ ಅದೇ ಶನಿವಾರ ಖಮೇನಿ ಅಂತ್ಯ

Iran-Israel War| ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ.


Click the Play button to hear this message in audio format

ಇರಾನ್ ದೇಶದ ಅತ್ಯುನ್ನತ ಮತ್ತು ಶಕ್ತಿಶಾಲಿ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಅವರು ಶನಿವಾರ (ಫೆಬ್ರವರಿ 28, 2026) ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿಯಲ್ಲಿ ಮೃತಪಟ್ಟಿದ್ದಾರೆ. ಅಮೆರಿಕ ಈ ಕಾರ್ಯಾಚರಣೆಗೆ 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರಿಟ್ಟರೆ, ಇಸ್ರೇಲ್ ಇದನ್ನು 'ಲಯನ್ಸ್ ರೋರ್' ಎಂದು ಕರೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಸತ್ತಿದ್ದಾನೆ" ಎಂದು ಘೋಷಿಸಿದ ನಂತರ ಇರಾನ್ ಸರ್ಕಾರವೂ ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದೆ.

ಖಮೇನಿ ಅವರ ಸುದೀರ್ಘ ರಾಜಕೀಯ ಪಯಣ

1979ರ ಇಸ್ಲಾಮಿಕ್ ಕ್ರಾಂತಿಯ ಮೂಲಕ ಮುಂಚೂಣಿಗೆ ಬಂದ ಆಯತೊಲ್ಲಾ ಅಲಿ ಖಮೇನಿ ಅವರು, 1981ರಿಂದ 1989ರವರೆಗೆ ಸತತ ಎರಡು ಅವಧಿಗೆ ಇರಾನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 1989ರಲ್ಲಿ ಇರಾನ್ ಕ್ರಾಂತಿಯ ಪಿತಾಮಹ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ನಿಧನದ ನಂತರ, 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಇವರನ್ನು ದೇಶದ ಪರಮೋಚ್ಚ ನಾಯಕನನ್ನಾಗಿ (Supreme Leader) ನೇಮಿಸಿತು. ಅಂದಿನಿಂದ ಸುಮಾರು 37 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ಅಧಿಕಾರಿಯಾಗಿ, ಸರ್ವಾಧಿಕಾರಿಯ ಧೋರಣೆಯೊಂದಿಗೆ ಅವರು ಇಡೀ ದೇಶದ ಆಡಳಿತವನ್ನು ಮುನ್ನಡೆಸಿದರು.

45 ವರ್ಷಗಳ ಹಿಂದೆ ಶನಿವಾರದಂದೇ ನಡೆದಿತ್ತು ದಾಳಿ

ಖಮೇನಿ ಅವರ ಜೀವನದಲ್ಲಿ ಶನಿವಾರ ಎಂಬ ದಿನವು ಅತ್ಯಂತ ಪ್ರಮುಖವಾದದ್ದು. ಸುಮಾರು 45 ವರ್ಷಗಳ ಹಿಂದೆ, ಅಂದರೆ ಜೂನ್ 27, 1981ರ ಶನಿವಾರದಂದು, ಟೆಹ್ರಾನ್‌ನ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರ ಮೇಲೆ ಭೀಕರ ಬಾಂಬ್ ದಾಳಿ ನಡೆದಿತ್ತು. ಅವರ ಮುಂದೆ ಇರಿಸಲಾಗಿದ್ದ ಟೇಪ್ ರೆಕಾರ್ಡರ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಖಮೇನಿ ಅವರ ಬಲಗೈ ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಅಂದು ಶನಿವಾರವೇ ಸಾವಿನ ದವಡೆಯಿಂದ ಪಾರಾಗಿದ್ದ ಖಮೇನಿ, ಈಗ ಫೆಬ್ರವರಿ 28, 2026ರ ಮತ್ತೊಂದು ಶನಿವಾರ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರತಿಭಟನೆಗಳ ಹತ್ತಿಕ್ಕುವಿಕೆ

ಖಮೇನಿ ಅವರ ದೀರ್ಘಾವಧಿಯ ಆಡಳಿತವು ಅನೇಕ ರಕ್ತಸಿಕ್ತ ಹೋರಾಟಗಳಿಗೆ ಸಾಕ್ಷಿಯಾಗಿದೆ. 1999ರ ವಿದ್ಯಾರ್ಥಿ ಪ್ರತಿಭಟನೆ, 2009ರ ಚುನಾವಣಾ ಅಕ್ರಮದ ವಿರುದ್ಧದ ಹೋರಾಟ, 2019ರ ಅಶಾಂತಿ ಹಾಗೂ ಇತ್ತೀಚೆಗೆ ಮಹ್ಸಾ ಅಮಿನಿ ಸಾವಿನ ನಂತರ ಆರಂಭವಾದ "ಮಹಿಳೆ, ಜೀವನ, ಸ್ವಾತಂತ್ರ್ಯ" ಚಳವಳಿಯನ್ನು ಅವರು ಅತ್ಯಂತ ಕ್ರೂರವಾಗಿ ಹತ್ತಿಕ್ಕಿದ್ದರು.

ಖಮೇನಿ ಅವರ ಮರಣವು ಇರಾನ್‌ನ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಮುಂದಿನ ಉತ್ತರಾಧಿಕಾರಿ ಯಾರು ಮತ್ತು ಇರಾನ್‌ನ ಭವಿಷ್ಯವೇನು ಎಂಬ ಪ್ರಶ್ನೆಗಳು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿವೆ.

Read More
Next Story