Ayatollah Ali Khamenei|ಖಮೇನಿ ಉತ್ತರಾಧಿಕಾರಿ ಯಾರು? ಪರಮೋಚ್ಚ ನಾಯಕನ ಆಯ್ಕೆ ಹೇಗೆ ನಡೆಯುತ್ತದೆ?
x
ಎಡದಿಂದ ಬಲಕ್ಕೆ: ಮೊಜ್ತಾಬಾ ಖಮೇನಿ, ರೇಜಾ ಪಹ್ಲವಿ ಮತ್ತು ಹಸನ್ ಖೊಮೇನಿ.

Ayatollah Ali Khamenei|ಖಮೇನಿ ಉತ್ತರಾಧಿಕಾರಿ ಯಾರು? ಪರಮೋಚ್ಚ ನಾಯಕನ ಆಯ್ಕೆ ಹೇಗೆ ನಡೆಯುತ್ತದೆ?

Iran-Israel War| ಆಯತೊಲ್ಲಾ ಅಲಿ ಖಮೇನಿ ನಿಧನದ ನಂತರ ಇರಾನ್‌ನಲ್ಲಿ ಹೊಸ ಪರಮೋಚ್ಚ ನಾಯಕನ ಆಯ್ಕೆ ಹೇಗೆ ನಡೆಯುತ್ತದೆ? ಮೊಜ್ತಾಬಾ ಖಮೇನಿ ಅಥವಾ ಹಸನ್ ಖೊಮೇನಿ ಉತ್ತರಾಧಿಕಾರಿಯಾಗುತ್ತಾರಾ? ಇಲ್ಲಿದೆ ಸಂಪೂರ್ಣ ವಿವರ.


Click the Play button to hear this message in audio format

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇಡೀ ದೇಶವು ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಮೃತಪಟ್ಟಿರುವುದನ್ನು ಟೆಹ್ರಾನ್ ಅಧಿಕೃತವಾಗಿ ಖಚಿತಪಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಇರಾನ್‌ನಲ್ಲಿ ಅಧಿಕಾರಕ್ಕಾಗಿ ಭಾರಿ ಪೈಪೋಟಿ ಮತ್ತು ಒಳಸಂಚುಗಳು ಆರಂಭವಾಗಿವೆ.

ಇರಾನ್‌ನ ಮಧ್ಯಂತರ ಆಡಳಿತ ಹೇಗಿರಲಿದೆ?

ಇರಾನ್‌ನ ಸಂವಿಧಾನದ ಪ್ರಕಾರ, ಹೊಸ ಪರಮೋಚ್ಚ ನಾಯಕನ ಆಯ್ಕೆಯಾಗುವವರೆಗೆ ದೇಶವನ್ನು ಮುನ್ನಡೆಸಲು 'ನಾಯಕತ್ವ ಮಂಡಳಿ' ರಚಿಸಲಾಗಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ನ್ಯಾಯಾಂಗ ಮುಖ್ಯಸ್ಥ ಗುಲಾಂ ಹೊಸೈನ್ ಎಜೆಯಿ ಮತ್ತು ಗಾರ್ಡಿಯನ್ ಕೌನ್ಸಿಲ್‌ನ ಒಬ್ಬ ಸದಸ್ಯ. ಈ ಮಂಡಳಿಯು ತಾತ್ಕಾಲಿಕವಾಗಿ ಸುಪ್ರೀಂ ಲೀಡರ್‌ನ ಎಲ್ಲಾ ಅಧಿಕಾರಗಳನ್ನು ಚಲಾಯಿಸಲಿದೆ.

ಡೊನಾಲ್ಡ್ ಟ್ರಂಪ್ ಅವರ ರಹಸ್ಯ ಅಭ್ಯರ್ಥಿ ಯಾರು?

ಖಮೇನಿ ಹತ್ಯೆಯ ಸುದ್ದಿಯನ್ನು ಮೊದಲು ಹಂಚಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅನ್ನು ಮುನ್ನಡೆಸಲು ಸಮರ್ಥ ಅಭ್ಯರ್ಥಿಗಳಿದ್ದಾರೆ ಎಂದು ಹೇಳಿದ್ದಾರೆ. "ನನಗೆ ಆ ವ್ಯಕ್ತಿ ಯಾರೆಂದು ನಿಖರವಾಗಿ ತಿಳಿದಿದೆ, ಆದರೆ ಈಗಲೇ ಹೆಸರಿಸಲು ಸಾಧ್ಯವಿಲ್ಲ" ಎಂದು ಟ್ರಂಪ್ ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಮೆರಿಕಕ್ಕೆ ಪೂರಕವಾಗಿರುವ ನಾಯಕನನ್ನು ಇರಾನ್ ಗದ್ದುಗೆಯ ಮೇಲೆ ಕೂರಿಸುವುದು ಟ್ರಂಪ್ ಅವರ ಗುರಿಯಾಗಿದೆ.

ಇಬ್ಬರು ವಿರೋಧ ಪಕ್ಷದ ನಾಯಕರ ನಡುವೆ ಪೈಪೋಟಿ

ಖಮೇನಿ ಆಡಳಿತದ ವಿರುದ್ಧ ದಶಕಗಳಿಂದ ಹೋರಾಡುತ್ತಿರುವ ಇಬ್ಬರು ಪ್ರಮುಖ ನಾಯಕರು ಈಗ ಇರಾನ್‌ನ ಭವಿಷ್ಯದ ಮೇಲೆ ಕಣ್ಣಿಟ್ಟಿದ್ದಾರೆ.

ಮರಿಯಮ್ ರಾಜವಿ: ಪ್ಯಾರಿಸ್ ಮೂಲದ ಎನ್‌ಸಿಆರ್‌ಐ (NCRI) ಮುಖ್ಯಸ್ಥೆ. ಇವರು ಇರಾನ್‌ನಲ್ಲಿ ಪ್ರಜಾಪ್ರಭುತ್ವ ಗಣರಾಜ್ಯ ಸ್ಥಾಪನೆಗೆ ಕರೆ ನೀಡಿದ್ದಾರೆ. "ನಮ್ಮ ತಾಯ್ನಾಡು ಧಾರ್ಮಿಕ ಫ್ಯಾಸಿಸಂನಿಂದ ಮುಕ್ತಿ ಪಡೆಯಬೇಕು" ಎಂದು ಅವರು ಪ್ರತಿಪಾದಿಸಿದ್ದಾರೆ.

ರೇಜಾ ಪಹ್ಲವಿ: ಇರಾನ್‌ನ ಕೊನೆಯ ರಾಜನ ಮಗ ಇವರು ಜನವರಿ 1979ರ ಕ್ರಾಂತಿಯ ನಂತರ ದೇಶದಿಂದ ಹೊರಗಿದ್ದಾರೆ. ಅಮೆರಿಕದ ದಾಳಿಯನ್ನು "ಮಾನವೀಯ ಹಸ್ತಕ್ಷೇಪ" ಎಂದು ಕರೆದಿರುವ ಅವರು, ಇರಾನ್‌ನಲ್ಲಿ ಸಂವಿಧಾನಾತ್ಮಕ ಬದಲಾವಣೆಗೆ ಕರೆ ನೀಡಿದ್ದಾರೆ.

ಅಧಿಕಾರಕ್ಕಾಗಿ ಕುಟುಂಬಸ್ಥರಿಂದ್ ಪೈಪೋಟಿ

ಇರಾನ್‌ನ ಶಕ್ತಿಶಾಲಿ ಸೇನಾಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಸ್ತುತ ಅಧಿಕಾರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಹೊಂಚು ಹಾಕುತ್ತಿದ್ದು, ಪರಮೋಚ್ಚ ನಾಯಕನ ಉತ್ತರಾಧಿಕಾರಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಖಮೇನಿಯವರ ಎರಡನೇ ಮಗ, 56 ವರ್ಷದ ಮೊಜ್ತಾಬಾ ಖಮೇನಿ ಅವರು ತಂದೆಯಂತೆಯೇ ಕಟ್ಟಾ ಸಂಪ್ರದಾಯವಾದಿ ಧೋರಣೆ ಹೊಂದಿದ್ದು, ಇವರಿಗೆ ಸೇನೆಯ ಸಂಪೂರ್ಣ ಬೆಂಬಲವಿದೆ ಎನ್ನಲಾಗಿದೆ. ಮತ್ತೊಂದೆಡೆ, ಇಸ್ಲಾಮಿಕ್ ಕ್ರಾಂತಿಯ ಪಿತಾಮಹ ಆಯತೊಲ್ಲಾ ಖೊಮೇನಿಯವರ ಮೊಮ್ಮಗ, 53 ವರ್ಷದ ಹಸನ್ ಖೊಮೇನಿ ಅವರು ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು, ಇವರು ಮೊಜ್ತಾಬಾಗಿಂತ ಸ್ವಲ್ಪ ಮೃದು ಧೋರಣೆಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವೀಕಾರಾರ್ಹ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.

ಪರಮೋಚ್ಚ ನಾಯಕನ ಆಯ್ಕೆ ಹೇಗೆ ನಡೆಯುತ್ತದೆ?

ಇರಾನ್‌ನ ಹಾಲಿ ಅಧ್ಯಕ್ಷರು, ನ್ಯಾಯಾಂಗದ ಮುಖ್ಯಸ್ಥರು ಮತ್ತು ಎಕ್ಸ್‌ಪೀಡಿಯನ್ಸಿ ಕೌನ್ಸಿಲ್ ಆಯ್ಕೆ ಮಾಡಿದ ಗಾರ್ಡಿಯನ್ ಕೌನ್ಸಿಲ್‌ನ ಒಬ್ಬ ಸದಸ್ಯರನ್ನು ಒಳಗೊಂಡ ಮಂಡಳಿಯು ಈಗ ದೇಶದ ಆಡಳಿತವನ್ನು ವಹಿಸಿಕೊಂಡಿದೆ. ಸುಧಾರಣಾವಾದಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಕಠಿಣ ನಿಲುವಿನ ನ್ಯಾಯಾಂಗ ಮುಖ್ಯಸ್ಥ ಘೋಲಮ್ ಹೊಸೈನ್ ಮೊಹ್ಸೆನಿ ಎಜೆಯಿ ಈ ಮಂಡಳಿಯ ಪ್ರಮುಖ ಸದಸ್ಯರಾಗಿದ್ದು, ಹೊಸ ನಾಯಕನ ಆಯ್ಕೆಯಾಗುವವರೆಗೆ ನಾಯಕತ್ವದ ಎಲ್ಲಾ ಜವಾಬ್ದಾರಿಗಳನ್ನು ತಾತ್ಕಾಲಿಕವಾಗಿ ನಿರ್ವಹಿಸಲಿದ್ದಾರೆ.

ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಪಾತ್ರ

ಈ ತಾತ್ಕಾಲಿಕ ಮಂಡಳಿಯು ಆಡಳಿತ ನಡೆಸುತ್ತಿದ್ದರೂ, ಇರಾನ್ ಕಾನೂನಿನ ಪ್ರಕಾರ 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಎಂಬ 88 ಸದಸ್ಯರ ಸಮಿತಿಯು "ಆದಷ್ಟು ಬೇಗ" ಹೊಸ ಪರಮೋಚ್ಚ ನಾಯಕನನ್ನು (Supreme Leader) ಆಯ್ಕೆ ಮಾಡಬೇಕಾಗುತ್ತದೆ. ಈ ಸಮಿತಿಯು ಸಂಪೂರ್ಣವಾಗಿ ಶಿಯಾ ಧರ್ಮಗುರುಗಳನ್ನು ಒಳಗೊಂಡಿದ್ದು, ಇವರ ಅರ್ಹತೆಯನ್ನು ಇರಾನ್‌ನ ಸಾಂವಿಧಾನಿಕ ಸಂಸ್ಥೆಯಾದ 'ಗಾರ್ಡಿಯನ್ ಕೌನ್ಸಿಲ್' ನಿರ್ಧರಿಸುತ್ತದೆ. ಈ ಹಿಂದೆ 2024ರಲ್ಲಿ ಮಾಜಿ ಅಧ್ಯಕ್ಷ ಹಸನ್ ರೌಹಾನಿಯವರನ್ನು ಈ ಚುನಾವಣೆಗೆ ಸ್ಪರ್ಧಿಸದಂತೆ ಇದೇ ಕೌನ್ಸಿಲ್ ನಿರ್ಬಂಧಿಸಿತ್ತು.

ಇತಿಹಾಸದಲ್ಲಿ ಎರಡನೇ ಬಾರಿ

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಇತಿಹಾಸದಲ್ಲಿ ಇದು ಕೇವಲ ಎರಡನೇ ಅಧಿಕಾರ ಹಸ್ತಾಂತರವಾಗಿದೆ. 1989ರಲ್ಲಿ ಕ್ರಾಂತಿಯ ಪಿತಾಮಹ ಆಯತೊಲ್ಲಾ ರುಹೊಲ್ಲಾ ಖೊಮೇನಿ ನಿಧನರಾದಾಗ ಮೊದಲ ಬಾರಿಗೆ ಅಧಿಕಾರ ಬದಲಾವಣೆಯಾಗಿತ್ತು.

ಸುಪ್ರೀಂ ಲೀಡರ್ ಅಧಿಕಾರವೇನು?

ಇರಾನ್‌ನ ಈ ಶಿಯಾ ಧರ್ಮಪ್ರಭುತ್ವದಲ್ಲಿ ಪರಮೋಚ್ಚ ನಾಯಕನೇ ಅಂತಿಮ ನಿರ್ಧಾರಕ. ಇವರು ಕೇವಲ ರಾಜಕೀಯ ನಾಯಕನಲ್ಲದೆ, ದೇಶದ ಸೇನಾಪಡೆ ಮತ್ತು ಶಕ್ತಿಶಾಲಿ 'ರೆವಲ್ಯೂಷನರಿ ಗಾರ್ಡ್'ನ ಸರ್ವೋಚ್ಚ ಕಮಾಂಡರ್ ಕೂಡ ಆಗಿರುತ್ತಾರೆ. ಈ ರೆವಲ್ಯೂಷನರಿ ಗಾರ್ಡ್ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೋರಾಡುವ "ಆಕ್ಸಿಸ್ ಆಫ್ ರೆಸಿಸ್ಟೆನ್ಸ್" ಎಂಬ ಉಗ್ರಗಾಮಿ ಗುಂಪುಗಳ ಜಾಲವನ್ನು ನಿಯಂತ್ರಿಸುತ್ತದೆ.

Read More
Next Story