ದುಬೈ ವಿಮಾನ ನಿಲ್ದಾಣ, ಬುರ್ಜ್ ಅಲ್ ಅರಬ್ ಮೇಲೆ ಇರಾನ್ ದಾಳಿ: ಆತಂಕದಲ್ಲಿ ಯುಎಇ ಜನತೆ
x

ದುಬೈ ವಿಮಾನ ನಿಲ್ದಾಣ, ಬುರ್ಜ್ ಅಲ್ ಅರಬ್ ಮೇಲೆ ಇರಾನ್ ದಾಳಿ: ಆತಂಕದಲ್ಲಿ ಯುಎಇ ಜನತೆ

ಇರಾನ್​​ ಉಡಾಯಿಸಿದ ಡ್ರೋನ್‌ಗಳು ಅಪ್ಪಳಿಸಿದ ಪರಿಣಾಮ ಐಷಾರಾಮಿ ಬುರ್ಜ್ ಅಲ್ ಅರಬ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.


Click the Play button to hear this message in audio format

ಇರಾನ್ ಸೇನಾಪಡೆಗಳು ಶನಿವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಹಲವು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಾರಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿವೆ. ಈ ಅನಿರೀಕ್ಷಿತ ದಾಳಿಯಿಂದಾಗಿ ದುಬೈನ ಜಗತ್ಪ್ರಸಿದ್ಧ ಬುರ್ಜ್ ಅಲ್ ಅರಬ್ ಹೋಟೆಲ್ ಹಾಗೂ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಜೆಬೆಲ್ ಅಲಿ ಬಂದರಿನಲ್ಲಿಯೂ ಅವಘಡಗಳು ಸಂಭವಿಸಿವೆ. ದೇಶಾದ್ಯಂತ ಕ್ಷಿಪಣಿ ದಾಳಿಯ ಮುನ್ನೆಚ್ಚರಿಕೆ ರವಾನಿಸಲಾಗಿದ್ದು, ಯುಎಇ ಜನತೆ ತೀವ್ರ ಭೀತಿಯಲ್ಲಿ ರಾತ್ರಿ ಕಳೆಯುವಂತಾಗಿದೆ.

ಬುರ್ಜ್ ಅಲ್ ಅರಬ್‌ ಹಾಗೂ ಜೆಬೆಲ್ ಅಲಿ ಬಂದರಿನಲ್ಲಿ ಬೆಂಕಿ

ಇರಾನ್​​ ಉಡಾಯಿಸಿದ ಡ್ರೋನ್‌ಗಳು ಅಪ್ಪಳಿಸಿದ ಪರಿಣಾಮ ಐಷಾರಾಮಿ ಬುರ್ಜ್ ಅಲ್ ಅರಬ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದುಬೈ ಸರ್ಕಾರದ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ವಾಯು ರಕ್ಷಣಾ ವ್ಯವಸ್ಥೆಯು ಆಗಸದಲ್ಲೇ ಹೊಡೆದುರುಳಿಸಿದ ಡ್ರೋನ್ ಅವಶೇಷಗಳು ಬಿದ್ದು ಜೆಬೆಲ್ ಅಲಿ ಬಂದರಿನ ಬರ್ತ್‌ವೊಂದರಲ್ಲಿಯೂ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿಯೂ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ ಎಂದು ದುಬೈ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಸಾವು-ನೋವು

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇದೇ ವೇಳೆ, ಅಬುಧಾಬಿಯ ಶೇಖ್ ಜಾಯೆದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ರಾತ್ರಿ ವೇಳೆ ಭಾರಿ ದಾಳಿ ನಡೆದಿದ್ದು, ಘಟನೆಯಲ್ಲಿ ಏಷ್ಯಾ ಮೂಲದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ಈ ಸಾವು-ನೋವಿನ ಕುರಿತು ಸರ್ಕಾರದ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಭದ್ರತಾ ದೃಷ್ಟಿಯಿಂದ ಯುಎಇಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ರಂಜಾನ್ ಆಚರಣೆ ನಡುವೆ ಸೈರನ್ ಭೀತಿ, ಶಾಲೆಗಳಿಗೆ ರಜೆ

ಪವಿತ್ರ ರಂಜಾನ್ ಮಾಸದ ಆಚರಣೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ಬಹುತೇಕ ಜನರು ತಡರಾತ್ರಿಯವರೆಗೆ ಎಚ್ಚರವಾಗಿದ್ದರು. ಈ ಸಂದರ್ಭದಲ್ಲಿ ದಿಢೀರನೆ ಮೊಳಗಿದ ವಾಯುಪ್ರದೇಶದ ಸೈರನ್ ಸದ್ದು ಮತ್ತು ಮೊಬೈಲ್‌ಗಳಿಗೆ ಬಂದ ಎಚ್ಚರಿಕೆ ಸಂದೇಶಗಳು ನಾಗರಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದವು. ಗಲ್ಫ್ ರಾಷ್ಟ್ರಗಳ ಮೇಲಿನ ಈ ಆಕ್ರಮಣಕಾರಿ ದಾಳಿಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಹಾಗೂ ಅಬುಧಾಬಿಯ ಎಲ್ಲಾ ಶಾಲೆಗಳಿಗೆ ಗುರುವಾರದವರೆಗೆ ರಜೆ ಘೋಷಿಸಲಾಗಿದ್ದು, ಕಡ್ಡಾಯವಾಗಿ ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Read More
Next Story