Iran-Israel War| ಇರಾನ್‌ನ ಮಸೀದಿಯ ಗುಮ್ಮಟದ ಮೇಲೆ ಹಾರಾಡಿದ ಕೆಂಪು ಧ್ವಜ? ಏನಿದರ ಅರ್ಥ?
x
ಪ್ರತೀಕಾರದ ಸಂಕೇತವಾಗಿ ಇರಾನ್ ಕೆಂಪು ಧ್ವಜ ಹಾರಿಸಿದೆ.

Iran-Israel War| ಇರಾನ್‌ನ ಮಸೀದಿಯ ಗುಮ್ಮಟದ ಮೇಲೆ ಹಾರಾಡಿದ ಕೆಂಪು ಧ್ವಜ? ಏನಿದರ ಅರ್ಥ?

Ayatollah Ali Khamenei| ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ನ್ಯಾಯ ಒದಗಿಸಲು ಮತ್ತು ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಧ್ವಜವನ್ನು ಹಾರಿಸಲಾಗಿದೆ.


ಇರಾನ್‌ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಎದ್ದಿದೆ. ಪ್ರತೀಕಾರದ ಸಂಕೇತವಾಗಿ ಇರಾನ್ ಈಗ ಕೆಂಪು ಧ್ವಜವನ್ನು ಹಾರಿಸಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಇರಾನ್‌ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಕೋಮ್ (Qom) ನಗರದ ಜಮ್ಕರನ್ ಮಸೀದಿಯ ಗುಮ್ಮಟದ ಮೇಲೆ 'ಪ್ರತೀಕಾರದ ಕೆಂಪು ಧ್ವಜ'ವನ್ನು ಹಾರಿಸಲಾಗಿದೆ. ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ನ್ಯಾಯ ಒದಗಿಸಲು ಮತ್ತು ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಧ್ವಜವನ್ನು ಹಾರಿಸಲಾಗಿದ್ದು, ಇದು ಇರಾನ್ ತನ್ನ ಸಂಪೂರ್ಣ ಶಕ್ತಿಯೊಂದಿಗೆ ಯುದ್ಧಕ್ಕೆ ಸಿದ್ಧವಾಗಿದೆ ಎಂಬ ಸಂಕೇತವಾಗಿದೆ.

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಅಂತ್ಯ

ಶನಿವಾರ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ಖಮೇನಿ ಮೃತಪಟ್ಟಿರುವುದನ್ನು ಇರಾನ್ ಸರ್ಕಾರಿ ಮಾಧ್ಯಮಗಳು ಭಾನುವಾರ ದೃಢಪಡಿಸಿವೆ. ಈ ಘಟನೆಯ ನಂತರ ವಿಶ್ವದಾದ್ಯಂತ, ವಿಶೇಷವಾಗಿ ಭಾರತದ ಕೆಲವು ಭಾಗಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.

ವಿಶ್ವ ನಾಯಕರ ಪ್ರತಿಕ್ರಿಯೆ

ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬೆನ್ನಲ್ಲೇ ಜಾಗತಿಕ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿಯನ್ನು "ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ" ಎಂದು ಬಣ್ಣಿಸಿ, ಇರಾನ್ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಸುವರ್ಣ ಅವಕಾಶ ಎಂದಿದ್ದಾರೆ. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು "ಸರ್ವಾಧಿಕಾರಿಯ ಅಂತ್ಯವಾಗಿದೆ" ಎಂದು ಘೋಷಿಸಿ, ಪ್ರಸ್ತುತ ಆಡಳಿತವನ್ನು ಕಿತ್ತೊಗೆಯಲು ಇರಾನ್ ಜನರಿಗೆ ಕರೆ ನೀಡಿದ್ದರೆ, ಇಸ್ರೇಲ್ ರಕ್ಷಣಾ ಪಡೆ (IDF) ಇಸ್ರೇಲ್ ವಿನಾಶಕ್ಕೆ ಸಂಚು ರೂಪಿಸಿದ್ದ "ಇರಾನ್ ಎಂಬ ಆಕ್ಟೋಪಸ್‌ನ ತಲೆ ಈಗ ಕತ್ತರಿಸಲ್ಪಟ್ಟಿದೆ" ಎಂದು ಈ ಕಾರ್ಯಾಚರಣೆಯ ಯಶಸ್ಸನ್ನು ಸಾರಿದೆ.

ಅಲಿರೇಜಾ ಅರಾಫಿ ನೇಮಕ

ಪರಮೋಚ್ಚ ನಾಯಕನ ನಿಧನದ ನಂತರ ದೇಶದಲ್ಲಿ ಅಧಿಕಾರದ ಶೂನ್ಯತೆ ಉಂಟಾಗದಂತೆ ತಡೆಯಲು ಇರಾನ್ ಸಂವಿಧಾನದ ಪ್ರಕಾರ ತಾತ್ಕಾಲಿಕ ನಾಯಕತ್ವ ಮಂಡಳಿಯನ್ನು ರಚಿಸಲಾಗಿದೆ. 66 ವರ್ಷದ ಹಿರಿಯ ಧರ್ಮಗುರು ಅಲಿರೇಜಾ ಅರಾಫಿ ಅವರನ್ನು ಈ ಮಂಡಳಿಯ ನ್ಯಾಯಶಾಸ್ತ್ರಜ್ಞ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಅರಾಫಿ ಅವರು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್ ಹೊಸೈನ್ ಮೊಹ್ಸೆನಿ ಎಜೆಯಿ ಅವರೊಂದಿಗೆ ಸೇರಿ ಹೊಸ ಪರಮೋಚ್ಚ ನಾಯಕನ ಆಯ್ಕೆಯಾಗುವವರೆಗೆ ದೇಶವನ್ನು ಮುನ್ನಡೆಸಲಿದ್ದಾರೆ.

ಟೆಹ್ರಾನ್ ಬೀದಿಗಳಲ್ಲಿ ಸಂಭ್ರಮ ಮತ್ತು ಆತಂಕ

ಖಮೇನಿ ನಿವಾಸದ ಮೇಲೆ ಕಪ್ಪು ಹೊಗೆ ಆವರಿಸುತ್ತಿದ್ದಂತೆ ಟೆಹ್ರಾನ್‌ನ ಕೆಲವು ಭಾಗಗಳಲ್ಲಿ ಜನರು ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ. ಆದರೆ, ಇರಾನ್ ಮಿಲಿಟರಿ ಪ್ರತೀಕಾರಕ್ಕೆ ಸಜ್ಜಾಗಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆ ಮತ್ತು ಭದ್ರತೆಯ ಮೇಲೆ ಇದು ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ.

Read More
Next Story