
ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ( ಸಾಂದರ್ಭಿಕ ಚಿತ್ರ)
ಜನಸಂಖ್ಯೆ ಹೆಚ್ಚಿಸಲು ಚೀನಾ ಹೂಡಿದೆ 'ಕಾಂಡೋಮ್ ತೆರಿಗೆ' ಅಸ್ತ್ರ!
ಚೀನಾದ ಹೊಸ ನೀತಿಯ ಪ್ರಕಾರ, ಕಾಂಡೋಮ್ ಮತ್ತು ಗರ್ಭನಿರೋಧಕಗಳ ಬಳಕೆಯನ್ನು ತುಟ್ಟಿಯಾಗಿಸುವ ಮೂಲಕ ಜನರು ಮಕ್ಕಳನ್ನು ಹೊಂದಲು ಪ್ರೇರೇಪಿಸುವುದು ಸರ್ಕಾರದ ಗುರಿಯಾಗಿದೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ ಈಗ ಜನನ ಪ್ರಮಾಣ ಕುಸಿತದ ಭೀತಿ ಎದುರಿಸುತ್ತಿದೆ. ದೇಶದ ಫರ್ಟಿಲಿಟಿ ದರವು (Fertility Rate) ಪ್ರತಿ ಮಹಿಳೆಗೆ ಕೇವಲ 1.0ಕ್ಕೆ ಕುಸಿದಿರುವುದು ಸರ್ಕಾರಕ್ಕೆ ಆತಂಕ ತಂದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರ ಜನವರಿ 1 ರಿಂದ ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಮಾತ್ರೆಗಳ ಮೇಲೆ ಶೇ. 13ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು (VAT) ಜಾರಿಗೊಳಿಸಿದೆ.
ಚೀನಾದ ಹೊಸ ನೀತಿಯ ಪ್ರಕಾರ, ಕಾಂಡೋಮ್ ಮತ್ತು ಗರ್ಭನಿರೋಧಕಗಳ ಬಳಕೆಯನ್ನು ತುಟ್ಟಿಯಾಗಿಸುವ ಮೂಲಕ ಜನರು ಮಕ್ಕಳನ್ನು ಹೊಂದಲು ಪ್ರೇರೇಪಿಸುವುದು ಸರ್ಕಾರದ ಗುರಿ. ಇದೇ ವೇಳೆ ಶಿಶುಪಾಲನಾ ಕೇಂದ್ರಗಳು ಮತ್ತು ಮದುವೆ ಮಾಡಿಸುವ 'ಮ್ಯಾಚ್ ಮೇಕಿಂಗ್' ಸೇವೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ, ತಜ್ಞರ ಪ್ರಕಾರ ಈ ನಡೆ ಕೇವಲ ಸಾಂಕೇತಿಕವಷ್ಟೇ ಹೊರತು ಆರ್ಥಿಕವಾಗಿ ದೊಡ್ಡ ಬದಲಾವಣೆ ತರುವುದಿಲ್ಲ. ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಸುಮಾರು 50 ಯುವಾನ್ (ಅಂದಾಜು 580 ರೂ.) ಇದ್ದು, ತೆರಿಗೆಯಿಂದ ಕೇವಲ 5 ರಿಂದ 10 ಯುವಾನ್ ಬೆಲೆ ಹೆಚ್ಚಾಗಬಹುದು. "ವರ್ಷಕ್ಕೆ ಕೆಲವು ನೂರು ಯುವಾನ್ ಹೆಚ್ಚುವರಿ ವೆಚ್ಚವಾಗುವುದು ದೊಡ್ಡ ಹೊರೆಯಲ್ಲ" ಎಂಬುದು ಚೀನಾದ ಯುವ ಪೋಷಕರ ಅಭಿಪ್ರಾಯವಾಗಿದೆ.
ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ವಿಫಲ ಯತ್ನಗಳು
ಚೀನಾ ಅನುಸರಿಸುತ್ತಿರುವ ಈ 'ಪ್ರೊನಟಾಲಿಸ್ಟ್' (ಜನನ ಪ್ರಮಾಣ ಹೆಚ್ಚಿಸುವ) ನೀತಿಗಳು ಈ ಹಿಂದೆ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ವಿಫಲವಾಗಿವೆ. ದಕ್ಷಿಣ ಕೊರಿಯಾವು ಜನನ ಪ್ರಮಾಣ ಹೆಚ್ಚಿಸಲು 2006 ರಿಂದ ಇದುವರೆಗೆ ಸುಮಾರು 200 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಆದರೂ ಅಲ್ಲಿನ ಜನನ ದರವು ವಿಶ್ವದಲ್ಲೇ ಅತ್ಯಂತ ಕಡಿಮೆ ಅಂದರೆ 0.7 ಕ್ಕೆ ಕುಸಿದಿದೆ. ಸಿಂಗಾಪುರ ಕೂಡ ತಾಯಿ ಕಾರ್ಮಿಕರಿಗೆ ರಜೆ, ನಗದು ಬಹುಮಾನಗಳಂತಹ ಯೋಜನೆಗಳನ್ನು ಜಾರಿಗೊಳಿಸಿದರೂ ಅಲ್ಲಿನ ದರ 1.2 ರಲ್ಲೇ ಸ್ಥಿರವಾಗಿದೆ. ಚೀನಾದಲ್ಲಿಯೂ ಸರ್ಕಾರ ಕಳೆದ ವರ್ಷ ಶಿಶುಪಾಲನಾ ಯೋಜನೆಗೆ 12.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.
'ಕಡಿಮೆ ಫಲವತ್ತತೆ'ಯ ಸುಳಿಗೆ ಸಿಲುಕಿದ ಚೀನಾ
ಜನಸಂಖ್ಯಾ ಶಾಸ್ತ್ರಜ್ಞರ ಪ್ರಕಾರ, ಒಮ್ಮೆ ದೇಶದ ಜನನ ಪ್ರಮಾಣವು 1.5 ಕ್ಕಿಂತ ಕೆಳಗೆ ಇಳಿದರೆ, ಅದನ್ನು ಮತ್ತೆ ಏರಿಸುವುದು ಅತ್ಯಂತ ಕಠಿಣ. ಇದನ್ನು 'ಲೋ ಫರ್ಟಿಲಿಟಿ ಟ್ರ್ಯಾಪ್' (Low-fertility trap) ಎಂದು ಕರೆಯಲಾಗುತ್ತದೆ. ಚೀನಾದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಲು ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಬದಲಾದ ಸಾಮಾಜಿಕ ಧೋರಣೆಗಳೇ ಕಾರಣ. ಚೀನಾದಲ್ಲಿ ಮಗುವನ್ನು 18 ವರ್ಷದವರೆಗೆ ಬೆಳೆಸಲು ಸರಾಸರಿ 5,38,000 ಯುವಾನ್ (ಸುಮಾರು 62 ಲಕ್ಷ ರೂ.) ವೆಚ್ಚವಾಗುತ್ತದೆ. ನಗರ ಪ್ರದೇಶಗಳಲ್ಲಿ ಈ ವೆಚ್ಚ ಇನ್ನೂ ಅಧಿಕ. ಆಧುನೀಕರಣದ ಫಲವಾಗಿ ಮಹಿಳೆಯರು ಉದ್ಯೋಗ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಹಾಗೂ ದುಬಾರಿ ಶಿಕ್ಷಣ ವೆಚ್ಚದಿಂದಾಗಿ ಚೀನೀ ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ.
ಹಿಂದೆ ಜಾರಿಯಲ್ಲಿದ್ದ 'ಒಂದು ಮಗು' ನೀತಿಯನ್ನು ಚೀನಾ 2015 ರಲ್ಲಿ ಕೈಬಿಟ್ಟು, ನಂತರ 'ಮೂರು ಮಕ್ಕಳ' ನೀತಿಯನ್ನು ತಂದರೂ ಜನನ ಪ್ರಮಾಣ ಏರಿಕೆಯಾಗಿಲ್ಲ. ಈ ಹೊಸ 'ಕಾಂಡೋಮ್ ತೆರಿಗೆ'ಯು ಚೀನಾದ ಜನಸಂಖ್ಯಾ ಬಿಕ್ಕಟ್ಟನ್ನು ನೀಗಿಸುವಲ್ಲಿ ಯಶಸ್ವಿಯಾಗುವುದು ಅನುಮಾನ ಎಂಬುದು ನಾಲ್ಕು ದಶಕಗಳಿಂದ ಚೀನಾದ ಜನಸಂಖ್ಯಾ ಅಧ್ಯಯನ ಮಾಡುತ್ತಿರುವ ತಜ್ಞರ ವಾದವಾಗಿದೆ.

