ಆರ್.ಎಸ್.ಎಸ್. ಶಾಂತಿದೂತನ ಪಾತ್ರ: ಮಣಿಪುರ ಬಿಕ್ಕಟ್ಟಿಗೆ ನಿಜವಾದ ಪರಿಹಾರ ಸೂತ್ರವೇ?
x
ಜುಲೈ ನಾಲ್ಕರಂದು ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಣಿಪುರ ಪೊಲೀಸ್ ಮತ್ತು ಅಸ್ಸಾಂ ಪೊಲೀಸ್ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು

ಆರ್.ಎಸ್.ಎಸ್. ಶಾಂತಿದೂತನ ಪಾತ್ರ: ಮಣಿಪುರ ಬಿಕ್ಕಟ್ಟಿಗೆ ನಿಜವಾದ ಪರಿಹಾರ ಸೂತ್ರವೇ?

ಸತತ ಹಿಂಸೆಯಿಂದ ಕಂಗೆಟ್ಟು ಹೋಗಿರುವ ಮಣಿಪುರದಲ್ಲಿ ಇತ್ತೀಚೆಗೆ ಹೊಸದೊಂದು ಸಶಸ್ತ್ರ ಕುಕಿ ಗುಂಪು ಹುಟ್ಟಿಕೊಂಡಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ.


ಹಿಂಸಾಗ್ರಸ್ತ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಹೊಣೆಯನ್ನು ರಾಷ್ಟ್ರೀಯ ಸ್ವಯಂಸೇವಾ ಸಂಘ (RSS)ದ ಹೆಗಲಿಗೇರಿಸಲಾಗಿದೆ. ಇದು ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಬದಲಾಗಿ ಇನ್ನಷ್ಟು ಬಿಗಡಾಯಿಸುವ ಅಪಾಯವಿದೆ ಎಂದು ವಿಶ್ಲೇಷಿಸಲಾಗಿದೆ.

ಇತ್ತೀಚೆಗೆ ಇನ್ನೊಂದು ಹೊಸ ಸಶಸ್ತ್ರ ಕುಕಿ ಗುಂಪು ಹುಟ್ಟಿಕೊಂಡಿರುವುದರಿಂದ ಸಂಘರ್ಷ ಮತ್ತಷ್ಟು ಸಂಕೀರ್ಣವಾಗಿದೆ. ಹಾಗಾಗಿ ಗುಡ್ಡಗಾಡು ಪ್ರದೇಶದಲ್ಲಿ ಅಧಿಕಾರ ಸಮತೋಲನದ ಸೂಕ್ಷ್ಮ ಸ್ಥಿತಿ ಬಗೆಹರಿಯುವುದಕ್ಕೆ ಬದಲಾಗಿ ಇನ್ನೂ ಕಗ್ಗಂಟಾಗಿದೆ.

ಇವೆಲ್ಲ ಸ್ಥಿತ್ಯಂತರಗಳ ನಡುವೆಯೂ ಸ್ವಯಂಸೇವಾ ಸಂಘದ ಕಾರ್ಯಕರ್ತರು ಸಂಘರ್ಷದಲ್ಲಿ ತೊಡಗಿರುವ ಎರಡು ಗುಂಪುಗಳಾದ ಮೈತೈ ಮತ್ತು ಕುಕಿ-ಝೋ ಸಮುದಾಯಗಳ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಆರ್.ಎಸ್.ಎಸ್.ನ ಪ್ರಚಾರ ಉಸ್ತುವಾರಿಯನ್ನು ಹೊತ್ತಿರುವ ಸುನಿಲ್ ಅಂಬೇಕರ್ ಅವರು ತಿಳಿಸಿದ್ದಾರೆ.

ಸಂಘದ ಶಾಂತಿ ಯೋಜನೆ ಬಗ್ಗೆ ಮಣಿಪುರದಲ್ಲಿನ ಆರ್.ಎಸ್.ಎಸ್. ಮತ್ತು ಬಿಜೆಪಿ ಕಾರ್ಯಕರ್ತರು ಬಾಯಿ ಬಿಡುತ್ತಿಲ್ಲವಾದರೂ, ಸಮುದಾಯಗಳ ನಡುವೆ ಮಾತುಕತೆ ನಡೆಸಲು ಸ್ವಯಂಸೇವಕರು ಉತ್ತೇಜನ ನೀಡುತ್ತಿದ್ದಾರೆ ಎಂದು ಅಂಬೇಕರ್ ಹೇಳಿದ್ದಾರೆ. ಕಳೆದ ವರ್ಷದಿಂದೀಚೆಗೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಪರಿಹಾರ ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿದೆ.

ಎರಡು ಸಮುದಾಯಗಳ ನಡುವೆ ನಂಬಿಕೆ ಹಾಗೂ ಸೌಹಾರ್ದ ವಾತಾವರಣವನ್ನು ಮೂಡಿಸಲು ಸುದೀರ್ಘ ಕಾಲ ಬೇಕಾಗುತ್ತದೆ ಎಂದು ಕಳೆದ ಮಾರ್ಚ್ ತಿಂಗಳಿನಲ್ಲಿ ಆರ್.ಎಸ್.ಎಸ್. ತನ್ನ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ತಿಳಿಸಿತ್ತು.

ಒಳನೋಟವಿಲ್ಲದ ವಾದ

ಆದರೆ ಪರಿಸ್ಥಿತಿಯ ಬಗ್ಗೆ ಆರ್.ಎಸ್.ಎಸ್. ಮಾಡಿರುವ ಮೌಲ್ಯಮಾಪನದಲ್ಲಿ ಯಾವುದೇ ಒಳನೋಟವಿಲ್ಲ ಎಂದು ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿರುವ ವೇದಿಕೆಯ ಸಂಚಾಲಕ ಅಶಂಗ್ ಕಾಸರ್ ತಿಳಿಸಿದ್ದಾರೆ.

“ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ ಎಂದ ಮಾತ್ರಕ್ಕೆ ಪರಿಸ್ಥಿತಿ ಸುಧಾರಿಸಿದೆ ಎಂದೇನೂ ಅಲ್ಲ. ಗೃಹ ಸಚಿವಾಲಯದ ಉಪಕ್ರಮದ ಭಾಗವಾಗಿ ಯಾವುದೇ ಮೈತೈ ನಾಗರಿಕ ಸಮಾಜದ ಸಂಘಟನೆಯ ಜೊತೆಗಿನ ಮಾತುಕತೆಯಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಕುಕಿ ಬುಡಕಟ್ಟು ಸಮುದಾಯದ ಪ್ರಮುಖ ಸಂಘಟನೆ ಕುಕಿ ಇಂಪಿ ನಿನ್ನೆಯಷ್ಟೇ (ಜು.8) ಸ್ಪಷ್ಟವಾಗಿ ತಿಳಿಸಿದೆ. ಆರ್.ಎಸ್.ಎಸ್. ನಿಜಕ್ಕೂ ಯಾರ ಜೊತೆ ಮಾತನಾಡುತ್ತಿದೆ ಎಂಬ ಪ್ರಶ್ನೆ ಇದರಿಂದ ಉದ್ಭವವಾಗುತ್ತದೆ” ಎಂದು ಕಾಸರ್ ದ ಫೆಡರಲ್ ಗೆ ತಿಳಿಸಿದ್ದಾರೆ.

ಎರಡು ವಿಘಟಿತ ಸಮುದಾಯಗಳ ನಡುವಿನ ವಿಶ್ವಾಸ-ನಂಬಿಕೆಯ ಕೊರತೆ ಸಂಘರ್ಷ ಹುಟ್ಟಿಕೊಂಡಾಗ ಎಷ್ಟು ಗಂಭೀರವಾಗಿತ್ತೋ ಈಗಲೂ ಹಾಗೇ ಇದೆ ಎಂದು ಅವರು ಪ್ರತಿಪಾದಿಸುತ್ತಾರೆ.

ಮಣಿಪುರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಸಿಂಗ್ ಅವರು ಕೂಡ ಇದೇ ವಾದವನ್ನು ಮುಂದಿಡುತ್ತಾರೆ. ತಮ್ಮ ಪಕ್ಷದ ಸಂಸದ ಅಕೋಯಜಾಮ್ ಬಿಮೊಲ್ ಅಂಗೋಮ್ಚಾ ಅವರನ್ನು ಭದ್ರತೆಯ ಕಾರಣವೊಡ್ಡಿ ಇಂಫಾಲ ಕಣಿವೆಯ ಹೊರಭಾಗದಲ್ಲಿರುವ ಗ್ರಾಮವೊಂದಕ್ಕೆ ಭೇಟಿ ನೀಡದಂತೆ ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಪಡೆಗಳು ನಿರ್ಬಂಧ ವಿಧಿಸಿರುವುದನ್ನು ಅವರು ಬೊಟ್ಟು ಮಾಡುತ್ತಾರೆ.

ಮೂಡದ ಭರವಸೆ: “ಈಗಲೂ ಜನರು ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಒಬ್ಬ ಸಂಸದ ಕೂಡ ತನ್ನ ಕ್ಷೇತ್ರದಲ್ಲಿ ಅಡ್ಡಾಡಲು ಆಗುತ್ತಿಲ್ಲ. ಭದ್ರತೆಯಿಲ್ಲದೆ ರೈತರು ಕೂಡ ತಮ್ಮ ಗದ್ದೆಗಳನ್ನು ಊಳಲು ಸಾಧ್ಯವಾಗುತ್ತಿಲ್ಲ. ಆಂತರಿಕವಾಗಿ ನೆಲೆ ಕಳೆದುಕೊಂಡಿರುವ ಜನ ಈಗಲೂ ತಮ್ಮ ಮೂಲ ಮನೆಗಳಿಗೆ ಹಿಂದಿರುಗುವ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಇದೇ ಏನು ಪರಿಸ್ಥಿತಿಯ ಸುಧಾರಣೆ” ಎಂದು ಸಿಂಗ್ ಪ್ರಶ್ನಿಸುತ್ತಾರೆ.

ದ ಫೆಡರಲ್ ಜೊತೆಗೆ ಮಾತನಾಡಿದ ಅನೇಕ ಮಂದಿ ಭದ್ರತಾ ಅಧಿಕಾರಿಗಳು ಮತ್ತು ಗುಪ್ತಚರರು, ವಾಸ್ತವವಾಗಿ ಪರಿಸ್ಥಿತಿ ಸಹಜತೆಗೆ ಮರಳಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಭದ್ರತಾ ಮೂಲಗಳ ಪ್ರಕಾರ ಕುಕಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹೊಸ ಸಂಘರ್ಷ ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಕೆಲವು ಗ್ರಾಮಗಳ ಕಾರ್ಯಕರ್ತರು ಇತ್ತೀಚೆಗೆ ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ (UKNA) ಎಂಬ ಹೊಸ ಸಶಸ್ತ್ರ ಗುಂಪಿನ ಅಡಿಯಲ್ಲಿ ಸಂಘಟಿತರಾಗಿದ್ದಾರೆ.

ಇನ್ನೊಂದು ಮಹತ್ವದ ಸಂಗತಿ ಎಂದರೆ ಈ ಸಂಘಟನೆಯು ಸರ್ಕಾರದೊಂದಿಗೆ ಕದನ ವಿರಾಮ (ಕಾರ್ಯಾಚರಣೆಯ ರದ್ಧತಿ) ಒಪ್ಪಂದ ಮಾಡಿಕೊಂಡಿರುವ ಯಾವುದೇ ಕುಕಿ-ಝೋ ಬಂಡುಕೋರ ಗುಂಪುಗಳೊಂದಿಗೆ ಕೈಜೋಡಿಸಿಲ್ಲ.

ಹೆಚ್ಚಿದ ಸಹೋದರ ಹತ್ಯೆ ಪ್ರಕರಣಗಳು

ಹೆದ್ದಾರಿಗಳನ್ನು ಮುಕ್ತ ಸಂಚಾರಕ್ಕೆ ಒಳಪಡಿಸಬೇಕು, ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು, ಮೈತೈಗಳು ಹೆಚ್ಚಾಗಿರುವ ಪ್ರದೇಶಗಳ ಸನಿಹದಲ್ಲಿರುವ ತಮ್ಮ ಶಿಬಿರಗಳನ್ನು ಬೇರೆ ಕಡೆ ವರ್ಗಾಯಿಸಬೇಕು, ರಾಜ್ಯದಲ್ಲಿ ಒಟ್ಟಾರೆ ಶಾಂತಿ ಮರುಸ್ಥಾಪನೆಯಾಗುವಂತೆ ಮಾಡಬೇಕು ಎಂಬಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಕದನ ವಿರಾಮದಲ್ಲಿ ಒಳಗೊಂಡಿರುವ ಗುಂಪು ಕೇಂದ್ರದ ಜೊತೆ ಕಳೆದ ತಿಂಗಳು ಮಾತುಕತೆ ನಡೆಸಿತ್ತು.

ಸದ್ಯ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಈ ಗುಂಪಿನ ಮೇಲೆ ಅತಿಯಾದ ಒತ್ತಡ ಹೇರಿರುವುದು ಶಾಂತಿ ಪ್ರಕ್ರಿಯೆಯಲ್ಲಿ ಸಮಗ್ರ ಪ್ರಾತಿನಿಧ್ಯವನ್ನು ಬಯಸುತ್ತಿರುವ ಇತರ ಹಕ್ಕುದಾರರಿಗೆ ಕಿರಿಕಿರಿಯುಂಟುಮಾಡಿದೆ ಎಂದು ಮೂಲಗಳು ತಿಳಿಸುತ್ತವೆ.

ಚುರಾಚಂದಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಒಂದು ದಾಳಿಯಲ್ಲಿ, ಪ್ರಸ್ತಾಪಿತ ಕದನ ವಿರಾಮ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಶಸ್ತ್ರ ಗುಂಪಿನ ಉಪ-ಮುಖ್ಯಸ್ಥ ತಮ್ಮ ಇಬ್ಬರು ಅಂಗರಕ್ಷಕರೊಂದಿಗೆ ಹತರಾಗಿದ್ದರು. ಇದು ಹೊಸದಾಗಿ ಹುಟ್ಟಿಕೊಂಡಿರುವ ಯುಕೆಎನ್ಎ ಸಂಘಟನೆಯ ಕೈವಾಡ ಎಂದು ಮೂಲಗಳು ಅನುಮಾನ ವ್ಯಕ್ತಪಡಿಸಿವೆ.

ಯುಕೆಎನ್ಎ ತನ್ನ ಪ್ರದೇಶ ಪ್ರಾಬಲ್ಯವನ್ನು ಸಾಧಿಸಲು ಹಳೆಯ ಗುಂಪುಗಳ ಜೊತೆಗೆ ಕಲಹದ ಮಾರ್ಗ ಹಿಡಿದಿದೆ. ಇದರಿಂದಾಗಿ ಸಹೋದರ ಹತ್ಯೆಯ ಅಪಾಯವನ್ನು ಹೆಚ್ಚಿಸಿದೆ.

ಪೂರ್ವಗ್ರಹಪೀಡಿತ ನಿಲುವು: ಆರ್.ಎಸ್.ಎಸ್. ಹೇಳಿಕೇಳಿ ಕ್ರಿಶ್ಚಿಯನ್ ವಿರೋಧಿ ಧೋರಣೆಯನ್ನು ಹೊಂದಿರುವುದರಿಂದ ಈ ಹಂತದಲ್ಲಿ ಅದು ಬಿಕ್ಕಟ್ಟಿನಲ್ಲಿ ಶಾಮೀಲಾಗುತ್ತಿರುವುದು ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಬಹುದು ಎಂದು ಸ್ಥಳೀಯ ವೀಕ್ಷಕರು ವಿಶ್ಲೇಷಿಸುತ್ತಾರೆ.

ಮಣಿಪುರ ಸಂಘರ್ಷದ ವಿಷಯವನ್ನು ಮುಂದಿಟ್ಟುಕೊಂಡು ಆರ್.ಎಸ್.ಎಸ್.ನ ಪ್ರಚಾರಕ ಜಗದಾಂಬಾ ಮಲ್ ಅವರು ಬರೆದ ಕೃತಿಯ ಹೆಸರು; ಮಣಿಪುರ್ ಇನ್ ಫ್ಲೇಮ್ಸ್: ಕಾನ್ಸಿಪಿರಸಿ ಆಫ್ ಕ್ರಾಸ್ (Manipur in Flames: Conspiracy of The Cross). ಈ ಹೆಸರೇ ಎಲ್ಲವನ್ನೂ ವಿವರಿಸುತ್ತದೆ. ಗುಡ್ಡಗಾಡು ಆಡಳಿತದ ಪ್ರತ್ಯೇಕತೆ ಮತ್ತು ಕುಕಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಚರ್ಚ್ ನ ಪಿತೂರಿಯು ‘ಮೈತೈ ಹಿಂದೂಗಳು ಮತ್ತು ಭಾರತದೊಂದಿಗೆ ಬಿರುಕು ಮೂಡಿಸುವ ಉದ್ದೇಶ ಹೊಂದಿದೆ” ಎಂದು ಅವರು ವಾದಿಸುತ್ತಾರೆ.

ಜಗದಂಬಾ ಮಲ್ ಅವರು ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂನ ಬುಡಕಟ್ಟು ಜನಾಂಗಗಳ ಜೊತೆ ವ್ಯಾಪಕವಾಗಿ ಕೆಲಸಮಾಡಿದ್ದಾರೆ.

“ಹೀಗೆ ಪೂರ್ವಗ್ರಹಪೀಡಿತರಾದವರು ಹೇಗೆ ಶಾಂತಿ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸಲು ಸಾಧ್ಯ? ಆರ್.ಎಸ್.ಎಸ್.ನ ಒಳಗೊಳ್ಳುವಿಕೆಯೇ ಸಮಾಜದಲ್ಲಿ ಇನ್ನಷ್ಟು ಬಿರುಕುಗಳನ್ನು ಸೃಷ್ಟಿಸುತ್ತದೆ ಮತ್ತು ಕೋಮು ವಿಭಜನೆಗೆ ಕಾರಣವಾಗುತ್ತದೆ” ಎಂದು ಕಸರ್ ವಾದಿಸುತ್ತಾರೆ.

ಇನ್ನಷ್ಟು ಕಗ್ಗಂಟಾದೀತು

ಮಣಿಪುರದಲ್ಲಿ ಹುಟ್ಟಿಕೊಂಡಿರುವ ಸಂಘರ್ಷ ಆರ್.ಎಸ್.ಎಸ್.-ಬಿಜೆಪಿಯ ಸೃಷ್ಟಿ ಎಂದು ಹೇಳುವ ಅವರು, ಸರ್ಕಾರ ಸಂಘ ಪರಿವಾರದ ಸ್ವಯಂಸೇವಕರಿಗೆ ಹೊರಗುತ್ತಿಗೆ ಕೊಡುವುದಕ್ಕಿಂತ ತಾನೇ ಇದನ್ನು ಪರಿಹರಿಸಲು ಪ್ರಯತ್ನಿಸುವುದು ಉತ್ತಮ. ಇಲ್ಲದೇ ಹೋದರೆ ಆರ್.ಎಸ್.ಎಸ್. ಬಿಕ್ಕಟ್ಟನ್ನು ಇನ್ನಷ್ಟು ಕಗ್ಗಂಟಾಗಿ ಮಾಡುವುದು ನಿಶ್ಚಿತ ಎಂದು ಆತಂಕದಿಂದ ನುಡಿಯುತ್ತಾರೆ.

ಶಾಂತಿ ಮಾತುಕತೆಯಲ್ಲಿ ಆರ್.ಎಸ್.ಎಸ್. ತೊಡಗಿಕೊಳ್ಳುವುದನ್ನು ಮಣಿಪುರ ಬಿಜೆಪಿ ವಕ್ತಾರ ಮೈಕೆಲ್ ಲ್ಯಾಂಜಾಥಾಂಗ್ ಹಾವೊಕಿಪ್ ಅವರೇನೂ ವಿರೋಧಿಸುವುದಿಲ್ಲ. ಆದರೆ ಈ ಕ್ರಮದಿಂದ ಯಶಸ್ಸು ದಕ್ಕುತ್ತದೆ ಎಂಬ ಬಗ್ಗೆ ಅವರಿಗೂ ಅನುಮಾನವಿದೆ.

“ಅದು ಆರ್.ಎಸ್.ಎಸ್. ಅಥವಾ ಡೊನಾಲ್ಡ್ ಟ್ರಂಪ್ ಆಗಿರಲಿ, ಎರಡೂ ಕಡೆಯವರು ಹಿಂಸೆಯ ನಿರರ್ಥಕತೆಯನ್ನು ಅರ್ಥಮಾಡಿಕೊಳ್ಳುವ ವರೆಗೆ ಶಾಂತಿ ಮಾತುಕತೆ ಎನ್ನುವುದು ಸುಲಭದ ಬಾಬತ್ತಲ್ಲ” ಎಂದು ಅವರು ಪ್ರತಿಪಾದಿಸುತ್ತಾರೆ.

Read More
Next Story