Manipur News : ಮಣಿಪುರದಲ್ಲಿ ಮುಸ್ಲಿಂ ಯುವಕನಿಗೆ ಹಂದಿ ಮಾಂಸ ತಿನ್ನಿಸಿದ ಮೈತೇಯಿ ಬಂಡುಕೋರರು
Manipur News : ಅರಂಬೈ ತೆಂಗೋಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಆರೋಪವನ್ನು ನಿರಾಕರಿಸಿದೆ. ಯುವಕ ಮೈತೇಯಿ ಸಮುದಾಯಕ್ಕೆ ಸೇರಿದ ಹುಡುಗಿಗೆ ಕಿರುಕುಳ ನೀಡಿದ್ದಾನೆ. ಕೆಫೆಯಲ್ಲಿ ತನ್ನ ಜತೆ ಕೆಲಸ ಮಾಡುತ್ತಿದ್ದ ಆಕೆಗೆ ಕಿರುಕುಳ ನೀಡಿದ್ದಾನೆ ಎಂದು ಅದು ಸಮಜಾಯಿಷಿ ಕೊಟ್ಟಿದೆ.
ಮೈತೇಯಿ ಸಮುದಾಯಕ್ಕೆ ಸೇರಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದ ಮುಸ್ಲಿಂ ಯುವಕನೊಬ್ಬನಿಗೆ ಮಣಿಪುರದ ಮೈತೇಯಿ ಬಂಡುಕೋರರ ಗುಂಪು ತನ್ನ ಶಿಬಿರಕ್ಕೆ ಕರೆಸಿ ಹಿಂಸೆ ಕೊಟ್ಟು ಹಂದಿ ಮಾಂಸ ತಿನ್ನಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಪಾಂಗಲ್ಸ್ ಎಂದು ಕರೆಯಲ್ಪಡುವ ಮಣಿಪುರಿ ಮುಸ್ಲಿಮರನ್ನು ಪ್ರತಿನಿಧಿಸುವ ನಾಗರಿಕ ಸಮಾಜ ಸಂಘಟನೆಗಳು (ಸಿಎಸ್ಒಗಳು) ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ದುರುದ್ದೇಶಪೂರಿತ ಕೃತ್ಯ ಹಾಗೂ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಪ್ರಯತ್ನ ಎಂದು ಹೇಳಿದೆ.
ಏನಿದು ಘಟನೆ?
ಇಂಫಾಲ್‌ನ ಕೀಶಂಪತ್‌ನ ಕೆಫೆಯೊಂದರಲ್ಲಿ ಬಾಣಸಿಗನಾಗಿರುವ ತಂಪಕ್ಮಯಮ್ ಅಖ್ತರ್ (18) ಹಲ್ಲೆಗೊಳಗಾದ ಯುವಕ. ಅರಂಬೈ ತೆಂಗೋಲ್ ಹೆಂಗಾಂಗ್ ಸಶಸ್ತ್ರ ಪಡೆಯು ಸದಸ್ಯರು ಆತನನ್ನು ತಮ್ಮ ಶಿಬಿರಕ್ಕೆ ಕರೆಸಿ ಚಿತ್ರಹಿಂಸೆ ನೀಡಿದ್ದರು ಮತ್ತು ಹಂದಿಮಾಂಸ ತಿನ್ನುವಂತೆ ಒತ್ತಾಯಿಸಿದ್ದರು ಎಂದು ಹೇಳಲಾಗಿದೆ.
ಅರಂಬೈ ತೆಂಗೋಲ್ ಪಡೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಆರೋಪ ನಿರಾಕರಿಸಿದೆ. ಯುವಕ ಮೈತೇಯಿ ಸಮುದಾಯಕ್ಕೆ ಸೇರಿದ ಹುಡುಗಿಗೆ ಕಿರುಕುಳ ನೀಡಿದ್ದಾನೆ. ಕೆಫೆಯಲ್ಲಿ ತನ್ನ ಜತೆ ಕೆಲಸ ಮಾಡುತ್ತಿದ್ದ ಆಕೆಯನ್ನು ಪ್ರೀತಿಸುವುದಾಗಿ ಹೇಳಿದ್ದಾನೆ ಅದು ಸಮಜಾಯಿಷಿ ಕೊಟ್ಟಿದೆ. ಆದರೆ, ವಿಡಿಯೊ ಪೋಸ್ಟ್‌ನಲ್ಲಿ ಹಲ್ಲೆಗೆ ಒಳಗಾದ ಅಖ್ತರ್, ತನ್ನ ಸಹೋದ್ಯೋಗಿ ಯುವತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ತಮಾಷೆಗಾಗಿ ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ .
ಯುವತಿಯಿಂದಲೇ ದೂರು
ಅಖ್ತರ್ ತನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರಿಂದ ಕೋಪಗೊಂಡ ಯುವತಿ ವಿಷಯವನ್ನು ಅರಂಬೈ ತೆಂಗೋಲ್ ಬಂಡುಕೋರರಿಗೆ ಮುಟ್ಟಿಸಿದ್ದಳು. ಅಲ್ಲದೆ ಕೆಫೆ ಮಾಲೀಕರ ಫೋನ್ ನಂಬರ್ ಕೊಟ್ಟಿದ್ದಳು. ಅಂತೆಯೇ ಅಖ್ತರ್‌ನನ್ನು ಕರೆಸಿಕೊಂಡ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ʼʼಈ ವೇಳೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಒತ್ತಾಯಪೂರ್ವಕ ಹಂದಿಮಾಂಸ ತಿನ್ನುವಂತೆ ಒತ್ತಾಯಿಸಿದ್ದಾರೆ,ʼʼ ಎಂದು ಅಖ್ತರ್ ವೀಡಿಯೊದಲ್ಲಿ ಹೇಳಿದ್ದಾನೆ
ಇಮಾಮ್‌ಗಳ ವಿರುದ್ಧ ಬಲವಂತದ ಹೇಳಿಕೆ
ಇಸ್ಲಾಂ ಧರ್ಮ ಹೆಚ್ಚಿಸುವುದಕ್ಕಾಗಿ ಮೈತೇಯಿ ಹುಡುಗಿಯರನ್ನು ಮದುವೆಯಾಗುವಂತೆ ಇಮಾಮ್‌ಗಳು ಹೇಳುತ್ತಿರುವುದಾಗಿ ತನ್ನಿಂದ ಅಧಿಕಾರಿಗಳು ಬಲವಂತದ ಹೇಳಿಕೆಗಳನ್ನು ಕೂಡ ಪಡೆದಿದ್ದಾರೆ ಎಂದು ಅಖ್ತರ್ ಆರೋಪಿಸಿದ್ದಾನೆ. ʼದ ಫೆಡರಲ್ʼ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಜನವರಿ 4 ರಂದು ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯನ್ನು ಕೋಮು ಸೌಹಾರ್ದತೆ ಮತ್ತು ಮಾನವ ಹಕ್ಕುಗಳ ಮೇಲಿನ ದಾಳಿ ಎಂದು ಇಸ್ಲಾಂ ಸಂಘಟನೆಗಳು ಹೇಳಿವೆ., "ನಾವು ಇತಿಹಾಸವನ್ನುಗಮನಿಸಿದಾಗ ಮೈತೇಯಿ ಮತ್ತು ಪಾಂಗಲ್ ಸಮುದಾಯಗಳು ಸಾಮರಸ್ಯದಿಂದ ಜೀವನ ಮಾಡಿವೆ. ಆದಾಗ್ಯೂ, ಈ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವನ್ನು ಬಿತ್ತಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುಗತ್ತಿವೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಸ್ವೀಕಾರಾರ್ಹವಲ್ಲ: ವಿದ್ಯಾರ್ಥಿ ಸಂಘಟನೆ
ಅರಂಬೈ ತೆಂಗೋಲ್ ಪಡೆಯಕಾನೂನುಬಾಹಿರ ಕ್ರಮವನ್ನು ವಿದ್ಯಾರ್ಥಿ ಸಂಘಟನೆಗಳೂ ಪ್ರಶ್ನಿಸಿವೆ. ಯುವಕ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕಿತ್ತು. ಅರಂಬೈ ತೆಂಗೋಲ್ ಕಾನೂನು ಜಾರಿಯ ಅಧಿಕಾರ ಇಲ್ಲ ಎಂದು ಹೇಳಿದೆ.