
The Federal Interview: ಏನೇ ಅನಾರೋಗ್ಯವಿದ್ದರೂ, ಸೆಟ್‍ಗೆ ಬಂದರೆ ನೆನಪಾಗುವುದಿಲ್ಲ: ಶಿವರಾಜಕುಮಾರ್
ಶಿವರಾಜ್‌ಕುಮಾರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ, ಅಭಿಮಾನಿಗಳನ್ನು ದಂಗುಬಡಿಸಿತ್ತು. ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿವಣ್ಣ ಕ್ರಮೇಣ ಚೇತರಿಸಿಕೊಂಡರು.
ಕಳೆದ ವರ್ಷ ಇದೇ ಸಮಯದಲ್ಲಿ ಖ್ಯಾತ ನಟ ಶಿವರಾಜ್‌ಕುಮಾರ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ, ಇಡೀ ಕರ್ನಾಟಕವನ್ನೇ ದಂಗುಬಡಿಸಿತ್ತು. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಎಲ್ಲರೂ ಹಾರೈಸಿದರು. ಅದರಂತೆ ವರ್ಷದ ಕೊನೆಗೆ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿವಣ್ಣ ಕ್ರಮೇಣ ಚೇತರಿಸಿಕೊಂಡು ಭಾರತಕ್ಕೆ ವಾಪಸ್ಸಾದರು.
ಒಂದಿಷ್ಟು ವಿಶ್ರಾಂತಿಯ ಬಳಿಕ ಪುನಃ ಅವರು ಮೊದಲಿನಂತಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ‘ಡ್ಯಾಡ್’ ಮತ್ತು ‘ಬೇಲ್ ಚಿತ್ರಗಳು 15 ದಿನಗಳ ಅಂತರದಲ್ಲಿ ಸೆಟ್ಟೇರಿದ್ದು, ಅವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ, ಬಿಡುವು ಮಾಡಿಕೊಂಢು ‘ದ ಫೆಡರಲ್ ಕರ್ನಾಟಕ’ದ ಜೊತೆಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲಿದ್ದ ಶಿವರಾಜ್‌ಕುಮಾರ್, 2024ರ ಡಿ.18ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ತೆರಳಿದ್ದರು. ಡಿ. 24ರಂದು ಮಿಯಾಮಿಯ ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತ್ತು. 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡು 2025ರ ಜ. 26ರಂದು ಬೆಂಗಳೂರಿಗೆ ಮರಳಿದ್ದರು.
ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿರುವುದು ಕಷ್ಟವಾಗುತ್ತಿಲ್ಲವೇ ಎಂಬ ಕನ್ನಡ ಸಿನಿಮಾ ಪ್ರಿಯರ ಆತಂಕಕ್ಕೂ ಉತ್ತರಿಸಿದ್ದಾರೆ. ಜತೆಗೆ, ತಮ್ಮ ಸೆಟ್ಟೇರುತ್ತಿರುವ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ಸಂಕ್ಷಿಪ್ತ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
‘ವೇದ’ ಚಿತ್ರದ ನಂತರ ಪುನಃ ಇಲ್ಲಿ ‘ಡ್ಯಾಡ್’ ಆಗುತ್ತಿದ್ದೀರಿ?
ಇದು ಒಂದು ದಿನದಲ್ಲಿ ನಡೆಯುವಂತಹ ಕಥೆ. ಇದೊಂದು ಥ್ರಿಲ್ಲರ್ ಚಿತ್ರ. ಸಾಕಷ್ಟು ಎಮೋಷನ್‍ಗಳಿರುವ ಚಿತ್ರ. ಚಿತ್ರದ ಹೆಸರೇ ‘ಡ್ಯಾಡ್’ ಅಂತಿದೆ. ಈ ‘ಡ್ಯಾಡ್’ ಎಂಬ ಪದಕ್ಕೆ ತುಂಬಾ ಅರ್ಥಗಳಿವೆ. ತಂದೆ ಯಾಕೆ ಮುಖ್ಯನಾಗುತ್ತಾನೆ, ಯಾವ ರೀತಿ ಆಗುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ತಂದೆ ಪಾತ್ರ ಅನ್ವಯಿಸುತ್ತದೆ. ಇಲ್ಲಿ ಶಿವರಾಜಕುಮಾರ್ ಮಾತ್ರ ತಂದೆ ಅಲ್ಲ. ಚಿತ್ರಕಥೆ ವೇಗವಾಗಿದೆ.
ʼಡ್ಯಾಡ್ʼ ಸಿನಿಮಾದಲ್ಲಿ ಶಿವಣ್ಣ
ಬಹಳ ದಿನಗಳ ನಂತರ ‘ಡ್ಯಾಡ್’ ಚಿತ್ರದ ಮೂಲಕ ಸಾಫ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ?
ಈ ಕಥೆಯನ್ನು ಮೂರು ವರ್ಷಗಳ ಹಿಂದೆ ಕೇಳಿದೆ. ಕಥೆ ಕೇಳುತ್ತಿದ್ದಂತೆಯೇ ಬಹಳ ಇಷ್ಟವಾಯ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಟೇಕಾಫ್ ಆಗಲಿಲ್ಲ. ಕಥೆ ಸರಿಯಾದ ನಿರ್ಮಾಪಕರನ್ನು ಹುಡುಕುತ್ತಿತ್ತು ಅಂತನಿಸುತ್ತೆ. ಸರಿಯಾದ ನಿರ್ಮಾಪಕರು ಸಿಗುತ್ತಿದ್ದಂತೆಯೇ ಚಿತ್ರ ಶುರುವಾಗಿದೆ. ಮೂರು ವರ್ಷಗಳಾದರೂ ದೃಶ್ಯಗಳೆಲ್ಲಾ ನೆನಪಿದೆ. ಇದೊಂದು ಅದ್ಭುತವಾದ ಕಥೆ. ಚಿತ್ರಕಥೆ ಸಹ ಬಹಳ ಚೆನ್ನಾಗಿದೆ. ಎಲ್ಲಾ ಪಾತ್ರಗಳೂ ಸಹಜವಾಗಿವೆ. ಯಾವ ಪಾತ್ರವೂ ಸಿನಿಮೀಯವಾಗಿಲ್ಲ. ನನ್ನಂತಹ ಡ್ಯಾಡ್ ಕೋಟ್ಯಂತರ ಜನರಿರುತ್ತಾರೆ. ಮಕ್ಕಳಿಗೆ ಯಾವ ರೀತಿ ಪ್ರೀತಿ ತೋರಿಸುತ್ತಾರೆ, ಆ ಪ್ರೀತಿಯ ವ್ಯಾಮೋಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದು ಚಿತ್ರದ ಕಥೆ. ನಾನಿಲ್ಲಿ ಡಾಕ್ಟರ್ ಪಾತ್ರ ಮಾಡುತ್ತಿದ್ದೇನೆ. ಬಹಳ ವರ್ಷಗಳ ನಂತರ ಇಂಥದ್ದೊಂದು ಪಾತ್ರ ಮಾಡುತ್ತಿದ್ದೇನೆ.
ಲಾಂಗ್ ಬಿಟ್ಟು ಸ್ಥೆತಾಸ್ಕೋಪ್ ಹಿಡಿಯುವದಕ್ಕೆ ಹೇಗನಿಸುತ್ತಿದೆ?
ಇತ್ತೀಚೆಗೆ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರಗಳು ಸಿಗುತ್ತಿವೆ. ‘ಭೈರತಿ ರಣಗಲ್’, ‘ಘೋಸ್ಟ್’ ಚಿತ್ರಗಳಲ್ಲಿ ಆ್ಯಕ್ಷನ್ ಹೆಚ್ಚಿತ್ತು. ‘ವೇದ’ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಹೆಚ್ಚಿತ್ತು. ‘ಡ್ಯಾಡ್’ ಚಿತ್ರದಲ್ಲಿ ಸಾಫ್ಟ್ ಮತ್ತು ಎಮೋಷನಲ್ ಆದಂತಹ ಪಾತ್ರ. ‘ಎ ಫಾರ್ ಆನಂದ್’ ಚಿತ್ರದಲ್ಲಿ ಶಿಕ್ಷಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮುಂದಿನ ಚಿತ್ರಗಳಲ್ಲೂ ವಿಭಿನ್ನವಾದ ಪಾತ್ರಗಳು ಸಿಗುತ್ತಿವೆ. ಲಾಂಗ್ ಬಿಟ್ಟು ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ಖುಷಿಯಾಗುತ್ತದೆ.
ʼಡ್ಯಾಡ್ʼ ಸಿನಿಮಾ ಮುಹೂರ್ತದಲ್ಲಿ ಶಿವರಾಜ್‌ಕುಮಾರ್
ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಈ ಪೈಕಿ ಯಾವುದು ಮೊದಲು?
‘ಶಿವಣ್ಣ 131’ ಚಿತ್ರದ ಒಂದು ಹಂತದ ಚಿತ್ರೀಕರಣವಾಗಿದೆ. ಕಾರಣಾಂತರಗಳಿಂದ ಸ್ವಲ್ಪ ಮುಂದಕ್ಕೆ ಹೋಗಿದೆ. ಆ ಗ್ಯಾಪ್‍ನಲ್ಲಿ ‘ಡ್ಯಾಡ್’ ಚಿತ್ರ ಮುಗಿಸುತ್ತೇನೆ. ‘ಡ್ಯಾಡ್’ ಚಿತ್ರವನ್ನು ಇದೇ ವರ್ಷ ಬಿಡುಗಡೆ ಮಾಡಬೇಕು ಎಂಬ ಯೋಚನೆ ಇದೆ. ಇದರ ಚಿತ್ರೀಕರಣ ಮುಗಿದ ಮೇಲೆ, ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಶುರುವಾಗಲಿದೆ. ಡಿಸೆಂಬರ್ ತಿಂಗಳಲ್ಲಿ ‘ಎ ಫಾರ್ ಆನಂದ್’ ಶುರುವಾಗಲಿದೆ. ಇದರ ಮಧ್ಯೆ, ತೆಲುಗಿನ ‘ಪೆದ್ದಿ’ ಚಿತ್ರವಿದೆ. ಒಂದಕ್ಕಿಂತ ಒಂದು ಕಥೆಗಳು ಚೆನ್ನಾಗಿವೆ. ದೇವರು ಶಕ್ತಿ ಕೊಟ್ಟಿದ್ದಾರೆ. ಅವಕಶ ಸಿಕ್ಕಾಗ ಚಿತ್ರಗಳನ್ನು ಮಾಡಬೇಕು.
ಕ್ಯಾನ್ಸರ್‌ಗೆ ಅಮೆರಿಕಾದಲ್ಲಿ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ಗುಣಮುಖರಾದ ಶಿವಣ್ಣ ಪತ್ನಿ ಗೀತಾ ಅವರ ಜತೆ ಈ ರೀತಿ ಕಾಣಿಸಿಕೊಂಡಿದ್ದರು.
ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿರುವುದು ಕಷ್ಟವಾಗುತ್ತಿಲ್ಲವೇ?
ಖಂಡಿತಾ ಇಲ್ಲ. ಆರು ತಿಂಗಳು ಸ್ವಲ್ಪ ಫ್ರೀಯಾಗಿ ಬಿಟ್ಟೆ. ಡಿಸೆಂಬರ್ ತಿಂಗಳಿಂದ ಇಲ್ಲಿಯವರೆಗೂ ಹೆಚ್ಚು ಕೆಲಸ ಮಾಡಲಿಲ್ಲ. ಏನೇ ಅನಾರೋಗ್ಯವಿದ್ದರೂ, ಸೆಟ್‍ಗೆ ಬಂದರೆ ಯಾವುದೂ ನೆನಪಾಗುವುದಿಲ್ಲ. ಮನೆಯಲ್ಲಿ ಕೂತರೆ ಬೇಸರ ಆಗುತ್ತದಷ್ಟೇ. ಕೆಲಸ ಮಾಡುತ್ತಿದ್ದರೆ, ಏನೂ ಅನಿಸುವುದಿಲ್ಲ. ಸತತವಾಗಿ ಚಿತ್ರಗಳಿವೆ, ಕೆಲಸಗಳಿವೆ. ಅದರಲ್ಲಿ ಎಲ್ಲವೂ ಮರೆತು ಹೋಗುತ್ತದೆ.
ಬೇಲ್ ಸಿನಿಮಾಗೆ ಮುಹೂರ್ತ
‘45’ ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತಲ್ಲಾ?
‘45’ ಚಿತ್ರದ ಗ್ರಾಫಿಕ್ಸ್ ಕೆಲಸಗಳು ಬಾಕಿ ಇವೆ. ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ನಮ್ಮ ಕೈಗೆ ಕ್ಲೈಮ್ಯಾಕ್ಸ್ ದೃಶ್ಯಗಳೇ ಸಿಕ್ಕಿಲ್ಲ. ಚಿತ್ರದ ಹೈಲೈಟ್ ಎಂದರೆ ಅದು ಕ್ಲೈಮ್ಯಾಕ್ಸ್. ಅದು ಚೆನ್ನಾಗಿ ಬರುವವರೆಗೂ ಅರ್ಜುನ್ ಜನ್ಯ ಬಿಡುವುದಿಲ್ಲ. ಅದು ಅವರ ಮೊದಲ ಚಿತ್ರ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಇಷ್ಟು ದಿನಗಳೇ ಕಾದಿದ್ದಿದೆ. ಡಿಸೆಂಬರ್ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಕ್ಯಾನ್ಸರ್ ಗೆದ್ದ ಬಳಿಕ ಡಾ. ಶಿವರಾಜ್‌ಕುಮಾರ್ ಅವರು ಅಮೆರಿಕದ ಮಿಯಾಮಿ ಕನ್ನಡ ಸಂಘದ ಕಾರ್ಯಕ್ರಮದಲ್ಲಿ "ಆಕಾಶವೇ.. ಬೀಳಲಿ ಮೇಲೆ.. ನಾನೆಂದೂ ನಿನ್ನವನು..." ಹಾಡಿ ರಂಜಿಸಿದ್ದರು.
ಮಿಯಾಮಿಯಲ್ಲಿ ಹ್ಯಾಟ್ರಿಕ್ ಹೀರೋ ಹಾಡು- ಹರಟೆ; ನೋವಿನ ಕ್ಷಣ ನೆನೆದು ಭಾವುಕರಾದ ಶಿವಣ್ಣ... ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ...