‘ವೀರ ಚಂದ್ರಹಾಸ’ನಾದ ಶಿವ ರಾಜಕುಮಾರ್, ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ …
x

‘ವೀರ ಚಂದ್ರಹಾಸ’ನಾದ ಶಿವ ರಾಜಕುಮಾರ್, ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ …

ರವಿ ಬಸ್ರೂರ್‌ ಅವರ ʼವೀರ ಚಂದ್ರಹಾಸ’ ಚಿತ್ರದಲ್ಲಿ ‘ವೀರ ಚಂದ್ರಹಾಸ’ ಚಿತ್ರದಲ್ಲಿ 450ಕ್ಕೂ ಹೆಚ್ಚು ನಿಜ ಯಕ್ಷಗಾನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಕ್ಷಗಾನ ಕಲಾವಿದರಾದ ನಾಗಶ್ರೀ ಜಿ.ಎಸ್‍, ಪ್ರಸನ್ನ ಶೆಟ್ಟಿಗಾರ್ ಮಂದರ್ತಿ, ರವೀಂದ್ರ ದೇವಾಡಿಗ, ಶೀತಲ್‍ ಶೆಟ್ಟಿ, ಉದಯ್‍ ಕಡಬಾಳ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಶಿವರಾಜಕುಮಾರ್ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು, ಅನಾರೋಗ್ಯದಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳ 26ಕ್ಕೆ ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಈ ಮಧ್ಯೆ, ಆಪರೇಷನ್‍ಗೂ ಮೊದಲು ಅವರು ಸದ್ದಿಲ್ಲದೆ ಮುಗಿಸಿದ್ದ ಚಿತ್ರವೊಂದರ ಸುದ್ದಿಯೊಂದು ಬಂದಿದೆ. ಅದೇ ‘ವೀರ ಚಂದ್ರಹಾಸ’.

ಕಳೆದ ವರ್ಷ ಬಿಡುಗಡೆಯಾದ ‘ಕಡಲ್‍’ ಚಿತ್ರದ ನಂತರ ಸಂಗೀತ ನಿರ್ದೇಶಕ ರವಿ ಬಸ್ರೂರು ಸದ್ದಿಲ್ಲದೆ ಒಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಬಾರಿ ಅವರು ಪೌರಾಣಿಕ ಯಕ್ಷಗಾನ ಪ್ರಸಂಗವಾದ ‘ವೀರ ಚಂದ್ರಹಾಸ’ನನ್ನು ತೆರೆಗೆ ತರುತ್ತಿದ್ದಾರೆ. ಹಲವು ತಾಸುಗಳ ಈ ಯಕ್ಷಗಾನ ಪ್ರಸಂಗವನ್ನು ಸುಮಾರು ಐದು ತಾಸಿಗೆ ಇಳಿಸಿ ಚಿತ್ರೀಕರಣ ಮುಗಿಸಿದ್ದಾರೆ. ಕೊನೆಗೆ ಸಂಕಲನದ ನಂತರ ಎರಡೂವರೆ ತಾಸುಗಳ ಚಿತ್ರವಾಗಿರಲಿದೆಯಂತೆ. ಈ ಚಿತ್ರದ ಮೂಲಕ ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನವನದ ಸಂಸ್ಕೃತಿ ಮತ್ತು ಪರಂಪರೆಯನ್ನು ದೊಡ್ಡ ಮಟ್ಟಕ್ಕೆ ತಲುಪಿಸಬೇಕೆಂಬ ಆಸೆ ರವಿ ಅವರಿಗಿದೆ. ಈ ಚಿತ್ರದ ಮೋಷನ್‍ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಯಕ್ಷಗಾನದ ಪ್ರಸಂಗವೊಂದನ್ನು ಚಿತ್ರ ಮಾಡುವ ಪ್ರಯೋಗಕ್ಕೆ ಯಾರೂ ಕೈಹಾಕಿರಲಿಲ್ಲ. ಅಂಥದ್ದೊಂದು ಕೆಲಸವನ್ನು ರವಿ ಬಸ್ರೂರು ಮಾಡಿದ್ದಾರೆ. ಕುಂತಲ ಸಾಮ್ರಾಜ್ಯದ ಚಂದ್ರಹಾಸನ ಕಥೆಯನ್ನು ಈ ಚಿತ್ರದ ಮೂಲಕ ಅವರು ಹೇಳುವ ಪ್ರಯತ್ನವನ್ನು ಅವರು ಈ ಚಿತ್ರದ ಮೂಲಕ ಮಾಡುತ್ತಿದ್ದಾರೆ. ಇದು ಅವರ 12 ವರ್ಷಗಳ ಕನಸಂತೆ. ‘ವೀರ ಚಂದ್ರಹಾಸ’ ಒಂದು ಜನಪ್ರಿಯ ಪ್ರಸಂಗವಷ್ಟೇ ಅಲ್ಲ, ಈ ಚಿತ್ರದ ಮೂಲಕ ಒಂದು ಪೌರಾಣಿಕ ಪ್ರಸಂಗವನ್ನು, ಸಾಂಪ್ರದಾಯಿಕ ಕಲೆಯ ಮೂಲಕ ದೃಶ್ಯಮಾಧ್ಯಮಕ್ಕೆ ತರುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರು ಸಿಂಗಾನಲ್ಲೂರು ಸಂಸ್ಥಾನದ ‘ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ’ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜಕುಮಾರ್ ಅವರ ನಿಜವಾದ ಹೆಸರು ಶಿವ ಪುಟ್ಟಸ್ವಾಮಿಯಾಗಿದ್ದು, ಶಿವರಾಜಕುಮಾರ್ ಎಂದೇ ಜನಪ್ರಿಯರಾಗಿದ್ದಾರೆ.


‘ವೀರ ಚಂದ್ರಹಾಸ’ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಪಾತ್ರವೇನು ಎಂಬ ರಹಸ್ಯವನ್ನು ಬಿಟ್ಟುಕೊಡದಿದ್ದರೂ, ಅವರೊಂದು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದಷ್ಟೇ ಹೇಳಲಾಗುತ್ತಿದೆ. ಈ ಪಾತ್ರಕ್ಕೆ ಸಾಕಷ್ಟು ತಯಾರಿಯನ್ನೂ ನಡೆಸಿ ಚಿತ್ರದಲ್ಲಿ ನಟಿಸಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೋಗಳನ್ನು ನೋಡಿ, ಅರ್ಥ ಮಾಡಿಕೊಂಡು, ಯಕ್ಷಗಾನದ ವೇಷ ತೊಟ್ಟು ಅವರು ಚಿತ್ರದಲ್ಲಿ ನಟಿಸಿದ್ದಾರೆ. ಮೇಕಪ್‍ಗೆ ಗಂಟೆಗಟ್ಟಲೆ ವ್ಯಯಿಸಿದ್ದಾರೆ. ಇಷ್ಟು ವರ್ಷಗಳ ಸಿನಿಜರ್ನಿಯಲ್ಲಿ ಅವರು ಯಕ್ಷಗಾನದ ವೇಷ ತೊಡತ್ತಿರುವುದು ಇದೇ ಮೊದಲು. ಇನ್ನು, ಈ ಚಿತ್ರದಲ್ಲಿ ಯಕ್ಷಗಾನ ನೃತ್ಯ ಮಾಡುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರಂತೆ. ಆದರೆ, ಅನಾರೋಗ್ಯದ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ. ಈ ಚಿತ್ರಕ್ಕಾಗಿ ಕೆಲವು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ ಶಿವರಾಜಕುಮಾರ್.

‘ವೀರ ಚಂದ್ರಹಾಸ’ ಚಿತ್ರದಲ್ಲಿ 450ಕ್ಕೂ ಹೆಚ್ಚು ನಿಜ ಯಕ್ಷಗಾನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಈ ಚಿತ್ರವನ್ನು ಓಂಕಾರ್ ಮೂವೀಸ್‍ ಬ್ಯಾನರ್ ಅಡಿ ಎನ್‍.ಎಸ್. ರಾಜಕುಮಾರ್ ನಿರ್ಮಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್-ಪ್ರೊಡಕ್ಷನ್‍ ಕೆಲಸಗಳು ಸಹ ಮುಕ್ತಾಯದ ಹಂತಕ್ಕೆ ಬಂದು ಮುಟ್ಟಿದೆ.

‘ವೀರ ಚಂದ್ರಹಾಸ’ ಚಿತ್ರದಲ್ಲಿ ನಾಗಶ್ರೀ ಜಿ.ಎಸ್‍, ಪ್ರಸನ್ನ ಶೆಟ್ಟಿಗಾರ್ ಮಂದರ್ತಿ, ರವೀಂದ್ರ ದೇವಾಡಿಗ, ಶೀತಲ್‍ ಶೆಟ್ಟಿ, ಉದಯ್‍ ಕಡಬಾಳ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Read More
Next Story