
School Admission| ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯವಲ್ಲ: 2.3 ಲಕ್ಷ ಮಕ್ಕಳ ಪೋಷಕರಿಗೆ ರಿಲೀಫ್!
1ನೇ ತರಗತಿಗೆ ದಾಖಲಾಗಲು ಮಗುವಿಗೆ ಜೂನ್ 1ರ ಅನ್ವಯ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ವಿರೋಧದ ಬಳಿಕ ಅದನ್ನು ಸಡಿಲಿಕೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯದ ಶೈಕ್ಷಣಿಕ ವಲಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪೋಷಕರನ್ನು ಕಾಡುತ್ತಿದ್ದ 'ವಯೋಮಿತಿ' ಆತಂಕಕ್ಕೆ ಈಗ ತೆರೆ ಬಿದ್ದಿದೆ.
2.3 ಲಕ್ಷಕ್ಕೂ ಹೆಚ್ಚು ಮಕ್ಕಳು ಜೂನ್ 1ಕ್ಕೆ ಕೇವಲ ಕೆಲವು ದಿನಗಳ ಅಥವಾ ಗರಿಷ್ಠ 90 ದಿನಗಳ (3 ತಿಂಗಳು) ಅಂತರದಲ್ಲಿ 6 ವರ್ಷ ಪೂರೈಸಲು ವಿಫಲರಾಗಿದ್ದು, ಒಂದು ವೇಳೆ ವಯೋಮಿತಿ ಆತಂಕ ಮುಂದುವರಿದಿದ್ದರೆ, ಕೇವಲ ವಯಸ್ಸಿನ ಕಾರಣಕ್ಕೆ ಅಷ್ಟೂ ಮಕ್ಕಳು ಯುಕೆಜಿಯಲ್ಲೆ ಮುಂದುವರಿಯಬೇಕಾಗಿತ್ತು.
ಸದ್ಯಕ್ಕೆ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದ್ದು, ಪೋಷಕರ ಆತಂಕ ದೂರ ಮಾಡಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಗುರುವಾರ ಮಹತ್ವದ ಘೋಷಣೆ ಮಾಡಿದ್ದು, ಒಂದನೇ ತರಗತಿಗೆ ಸೇರುವ ಮಕ್ಕಳ ವಯೋಮಿತಿಯಲ್ಲಿ 60 ದಿನಗಳ (ಎರಡು ತಿಂಗಳು) ವಿನಾಯಿತಿ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದಾಗಿ ಸಾವಿರಾರು ಮಕ್ಕಳು ಒಂದು ವರ್ಷ ಶೈಕ್ಷಣಿಕವಾಗಿ ನಷ್ಟ ಅನುಭವಿಸುವುದು ತಪ್ಪಿದಂತಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮತ್ತು ಶಿಕ್ಷಣ ಹಕ್ಕಿನ ಅನ್ವಯ, ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಜೂನ್ 1ರ ಅನ್ವಯ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಈ ನಿಯಮವು ವೈಜ್ಞಾನಿಕವಾಗಿ ಸರಿಯಾಗಿದ್ದರೂ, ಪ್ರಾಯೋಗಿಕವಾಗಿ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕೇವಲ ಒಂದು ವಾರ ಅಥವಾ ಒಂದು ತಿಂಗಳಿನಿಂದ 6 ವರ್ಷ ಪೂರೈಸದ ಮಕ್ಕಳು ಮತ್ತೆ ಎಲ್.ಕೆ.ಜಿ ಅಥವಾ ಯು.ಕೆ.ಜಿ ತರಗತಿಯಲ್ಲೇ ಮುಂದುವರಿಯಬೇಕಾದ ಅನಿವಾರ್ಯತೆ ಇತ್ತು. ಇದು ಮಕ್ಕಳ ಶೈಕ್ಷಣಿಕ ವರ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಪೋಷಕರ ಸತತ ಮನವಿ ಮತ್ತು ಮಕ್ಕಳ ಹಿತದೃಷ್ಟಿಯಿಂದ ಇದೀಗ ವಯೋಮಿತಿಯಲ್ಲಿ ಸಡಿಲಿಕೆ ತರಲು ಸರ್ಕಾರ ತೀರ್ಮಾನಿಸಿದೆ.
ವಯೋಮಿತಿ ಲೆಕ್ಕಾಚಾರ
ಈಗ ಒಂದನೇ ತರಗತಿಗೆ ಸೇರಲು 6 ವರ್ಷ ತುಂಬಲು ಗರಿಷ್ಠ 60 ದಿನಗಳ ಬಾಕಿ ಇರುವ ಮಕ್ಕಳು ಕೂಡ ದಾಖಲಾತಿ ಪಡೆಯಬಹುದು. 5 ವರ್ಷ 10 ತಿಂಗಳು ತುಂಬಿದ ಮಕ್ಕಳು ಕೂಡ ಈಗ ಅಧಿಕೃತವಾಗಿ ಒಂದನೇ ತರಗತಿಗೆ ಸೇರಲು ಅರ್ಹರಾಗಿದ್ದಾರೆ. ಈ ವಿನಾಯಿತಿಯನ್ನು ಜಾರಿಗೆ ತರಲು ಶಾಲಾ ಶಿಕ್ಷಣ ಇಲಾಖೆಯ 'ಸ್ಯಾಟ್ಸ್' ತಂತ್ರಾಂಶದಲ್ಲಿ ತಕ್ಷಣದ ಬದಲಾವಣೆಗಳನ್ನು ಮಾಡಲಾಗುವುದು ಎಂದು ಸಚಿವ ಮಧುಬಂಗಾರಪ್ಪ ಭರವಸೆ ನೀಡಿದ್ದಾರೆ.
ಎಲ್‌ಕೆಜಿ, ಯುಕೆಜಿ ದಾಖಲಾತಿ ಸಮಸ್ಯೆಗೂ ಪರಿಹಾರ
ಕೇವಲ ಒಂದನೇ ತರಗತಿಯಷ್ಟೇ ಅಲ್ಲದೆ, ಪ್ರಿ-ಪ್ರೈಮರಿ (ಎಲ್‌ಕೆಜಿ, ಯುಕೆಜಿ) ಹಂತದಲ್ಲಿಯೂ ಇದೇ ರೀತಿಯ ವಯೋಮಿತಿ ಸಮಸ್ಯೆ ಇತ್ತು. ಕೆಲವು ಶಾಲೆಗಳಲ್ಲಿ ದಾಖಲಾತಿ ಮಾಡುವಾಗ ಸಾಫ್ಟ್‌ವೇರ್ ಮಕ್ಕಳಿಗೆ ವಯಸ್ಸಾಗಿಲ್ಲ ಎಂದು ತೋರಿಸುತ್ತಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಸಚಿವರು, ಪೂರ್ವ ಪ್ರಾಥಮಿಕ ಹಂತದ ದಾಖಲಾತಿ ಪ್ರಕ್ರಿಯೆಯಲ್ಲೂ ಅಗತ್ಯ ಬದಲಾವಣೆಗಳನ್ನು ತಂದು, ಮಕ್ಕಳ ದಾಖಲಾತಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಏನದು ಗೊಂದಲ?
ಕೇವಲ ಒಂದು ವಾರ, ತಿಂಗಳ ಅಂತರದಲ್ಲಿ ಮಗುವಿಗೆ 6 ವರ್ಷ ತುಂಬಿಲ್ಲ ಎನ್ನುವ ಕಾರಣಕ್ಕೆ ಮತ್ತೊಂದು ವರ್ಷ ಹಳೆಯ ತರಗತಿಯಲ್ಲೇ ಕೂರಿಸಬೇಕಾ? – ಇದು ಪ್ರಸ್ತುತ ರಾಜ್ಯದ ಲಕ್ಷಾಂತರ ಪೋಷಕರನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಶಿಕ್ಷಣ ಹಕ್ಕು ಕಾಯ್ದೆಯ (RTE) ಅನ್ವಯ, ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಗುವಿನ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಈ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ಈ ಮೊದಲು ಇದ್ದ '5 ವರ್ಷ 5 ತಿಂಗಳ' ನಿಯಮಕ್ಕೆ ಒಗ್ಗಿಕೊಂಡಿದ್ದ ಪೋಷಕರಿಗೆ ಈ ಬದಲಾವಣೆ ಗೊಂದಲ ಉಂಟುಮಾಡಿತ್ತು.
ಕಳೆದ ಶೈಕ್ಷಣಿಕ ವರ್ಷದಲ್ಲಿ (2025-26) ಪೋಷಕರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರು. ಅಂದು ಎಚ್ಚೆತ್ತ ಸರ್ಕಾರ, ಮಾನವೀಯ ನೆಲೆಯಲ್ಲಿ 5 ವರ್ಷ 10 ತಿಂಗಳು ತುಂಬಿದ ಮಕ್ಕಳಿಗೆ (2 ತಿಂಗಳ ವಿನಾಯಿತಿ) ಒಂದು ಬಾರಿ ಮಾತ್ರ ಅನ್ವಯವಾಗುವಂತೆ ದಾಖಲಾತಿಗೆ ಅವಕಾಶ ನೀಡಿತ್ತು. ಇದರಿಂದ ಸಾವಿರಾರು ಮಕ್ಕಳ ಶೈಕ್ಷಣಿಕ ವರ್ಷ ಉಳಿದಿತ್ತು. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ 'ಒಂದನೇ ತರಗತಿ ದಾಖಲಾತಿ ವಯೋಮಿತಿ' ಎಂಬುದು ಕೇವಲ ನಿಯಮವಾಗಿ ಉಳಿಯದೆ, ಪೋಷಕರು ಮತ್ತು ಮಕ್ಕಳ ಪಾಲಿಗೆ ದೊಡ್ಡ ಆತಂಕವಾಗಿ ಪರಿಣಮಿಸಿತ್ತು.
2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಸಮಸ್ಯೆ ಮತ್ತೆ ಉಲ್ಬಣಿಸಿತ್ತು. ಅಂಕಿ-ಅಂಶಗಳ ಪ್ರಕಾರ, ರಾಜ್ಯಾದ್ಯಂತ ಸುಮಾರು 2.3 ಲಕ್ಷಕ್ಕೂ ಹೆಚ್ಚು ಮಕ್ಕಳು ಜೂನ್ 1ಕ್ಕೆ ಕೇವಲ ಕೆಲವು ದಿನಗಳ ಅಥವಾ ಗರಿಷ್ಠ 90 ದಿನಗಳ (3 ತಿಂಗಳು) ಅಂತರದಲ್ಲಿ 6 ವರ್ಷ ಪೂರೈಸಲು ವಿಫಲರಾಗಿದ್ದರು. ಈ ಮಕ್ಕಳು ಈಗಾಗಲೇ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ್ದರೂ, ಹೊಸ ನಿಯಮ ಪಾಲನೆಯಾದರೆ ಕೇವಲ ವಯಸ್ಸಿನ ಕಾರಣಕ್ಕೆ ಮತ್ತೆ ಯುಕೆಜಿಯಲ್ಲೆ ಮುಂದುವರಿಯಬೇಕಾಗುತ್ತದೆ.
ಪೋಷಕರ ಸತತ ಮನವಿಗೆ ಸ್ಪಂದಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. "ಕಳೆದ ವರ್ಷದಂತೆಯೇ ಈ ವರ್ಷವೂ ಮಕ್ಕಳಿಗೆ ವಿನಾಯಿತಿ ನೀಡುವ ಕುರಿತು ಮರುಪರಿಶೀಲನೆ ನಡೆಸಬೇಕು. ಕನಿಷ್ಠ 90 ದಿನಗಳ (3 ತಿಂಗಳು) ಸಡಿಲಿಕೆ ನೀಡಿದರೆ ಲಕ್ಷಾಂತರ ಮಕ್ಕಳಿಗೆ ಒಂದನೇ ತರಗತಿಗೆ ಹೋಗಲು ದಾರಿಯಾಗುತ್ತದೆ. ಇಲ್ಲವಾದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಸಾಧ್ಯತೆಯಿದೆ" ಎಂದು ಆಯೋಗ ಎಚ್ಚರಿಸಿತ್ತು.
ಕೊನೆಗೂ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದ್ದು, ಒಂದು ವರ್ಷದ ಮಟ್ಟಿಗೆ ಗೊಂದಲ ನಿವಾರಣೆಯಾದಂತಾಗಿದೆ! ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಶಾಸಕ ಅರವಿಂದ್ ಬೆಲ್ಲದ್ ಅವರು, ಇದು ಕೇವಲ ಒಂದು ವರ್ಷದ ಆದೇಶವಾಗದೆ, ಶಾಶ್ವತವಾಗಿ ಕಾನೂನಿನಲ್ಲಿ ಬದಲಾವಣೆಯಾಗಬೇಕು. ಇದರಿಂದ ಪ್ರತಿ ವರ್ಷ ಪೋಷಕರು ಸರ್ಕಾರದ ಬಾಗಿಲು ಬಡಿಯುವುದು ತಪ್ಪುತ್ತದೆ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಸಚಿವರು, ರಾಜ್ಯ ಶಿಕ್ಷಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಇದನ್ನು ಕಡ್ಡಾಯ ಕಾನೂನು ಮಾಡಲಾಗುವುದು ಎಂದು ಭರವಸೆ ನೀಡಿದರು.

