
ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮೇ ತಿಂಗಳಿಂದ ಎಐ ಆಧಾರಿತ 'ನಿರಂತರ' ಮುಖ ಚಹರೆ ಹಾಜರಾತಿ ಜಾರಿ
ಏಪ್ರಿಲ್ ಅಂತ್ಯದೊಳಗೆ ಅಪ್ಲಿಕೇಷನ್ ಸಿದ್ಧಪಡಿಸಿ, 2026-27ನೇ ಶೈಕ್ಷಣಿಕ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ. ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ದಾಖಲು ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಬರಲಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ʼನಿರಂತರʼ ಎಂಬ ಮುಖ ಚಹರೆ ಗುರುತಿಸುವ ಮೊಬೈಲ್ ಅಪ್ಲಿಕೇಷನ್ ಜಾರಿಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯ ಬಜೆಟ್‌ನಲ್ಲಿನ ಘೋಷಣೆಯಂತೆ ಈ ತಾಂತ್ರಿಕ ವ್ಯವಸ್ಥೆಯನ್ನು ಜಾರಿಗೊಳಿಸಲು 2.16 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಏಪ್ರಿಲ್-2026ರ ಒಳಗೆ ಅಭಿವೃದ್ಧಿಪಡಿಸಿ, ಯಾವುದೇ ವಿಳಂಬವಿಲ್ಲದೇ ಮೇ-2026 ರಿಂದ ಎಲ್ಲಾ ಶಾಲೆಗಳಲ್ಲಿ ಅಳವಡಿಸುವಂತೆ ತಿಳಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ. ಅಧಿಸೂಚನೆ ಹೊರಡಿಸಿದ್ದು,"ನಿರಂತರ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ‘ಇ-ಆಡಳಿತ ಕೇಂದ್ರ’ (CeG) ಮೂಲಕ ಅಭಿವೃದ್ಧಿಪಡಿಸಲಾಗುವುದು. ಬಿಡುಗಡೆಯಾಗಿರುವ 2.16 ಕೋಟಿ ರೂ. ಮೊತ್ತದಲ್ಲಿ 3 ತಿಂಗಳ ಅಭಿವೃದ್ಧಿ ಹಂತ ಮತ್ತು 12 ತಿಂಗಳ ನಿರ್ವಹಣಾ ವೆಚ್ಚವೂ ಸೇರಿದೆ" ಎಂದು ಹೇಳಿದ್ದಾರೆ.
ಪ್ರಮುಖ ಷರತ್ತುಗಳೇನು ?
ಸರ್ಕಾರವು ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಏಪ್ರಿಲ್ ಅಂತ್ಯದೊಳಗೆ ಅಪ್ಲಿಕೇಷನ್ ಸಿದ್ಧಪಡಿಸಿ, 2026-27ನೇ ಶೈಕ್ಷಣಿಕ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಜಾರಿಗೆ ತರಬೇಕು. ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಯನ್ನು ಈಗಿರುವ SATS (Student Achievement Tracking System) ತಂತ್ರಾಂಶದೊಂದಿಗೆ ಕಡ್ಡಾಯವಾಗಿ ಜೋಡಿಸಬೇಕು. ಶಾಲಾ ಕೊಠಡಿಗಳಲ್ಲಿ ಬೆಳಕು ಕಡಿಮೆ ಇದ್ದರೂ ಸಹ ನಿಖರವಾಗಿ ಹಾಜರಾತಿ ದಾಖಲಿಸುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಹಾಗೂ ಯೋಜನೆಯ ಪ್ರಗತಿಯನ್ನು ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಮಾಡಬೇಕು ಮತ್ತು ವೆಚ್ಚದ ವಿವರಗಳನ್ನು ‘ಅವಲೋಕನ’ ಸಾಫ್ಟ್‌ವೇರ್‌ನಲ್ಲಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಅನುದಾನ ಬಳಕೆ ಪ್ರಕಟ ಕಡ್ಡಾಯ
ʼನಿರಂತರʼ ಕಾರ್ಯಕ್ರಮಕ್ಕೆ ಬಿಡುಗಡೆಗೊಳಿಸಿರುವ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು, ಇತರ ಯಾವುದೇ ಉದ್ದೇಶಕ್ಕೆ ಬಳಸತಕ್ಕದ್ದಲ್ಲ. ಅನುದಾನ ಬಿಡುಗಡೆ ಸಂಬಂಧ ಶಿಕ್ಷಣ ಆಯುಕ್ತಾಲಯದ ಹಂತದಲ್ಲಿ ಹೊರಡಿಸಿರುವ ಆದೇಶದ ಪ್ರತಿಯನ್ನು ಇಲಾಖಾ ಮುಖ್ಯಸ್ಥರುಗಳು ತಮ್ಮ ಇಲಾಖಾ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಷರತ್ತುಗಳಿಗುಣವಾಗಿ ಇಲಾಖಾ ಮುಖ್ಯಸ್ಥರು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಆದೇಶಿಸಿದ್ದಾರೆ.
ಈ ಡಿಜಿಟಲ್ ಕ್ರಾಂತಿಯಿಂದಾಗಿ ಶಾಲೆಗಳಲ್ಲಿ ಹಾಜರಾತಿ ಪಾರದರ್ಶಕವಾಗಲಿದ್ದು, ನಕಲಿ ಹಾಜರಾತಿ ತಡೆಗೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

