
ಎಐ ಆಧಾರರಿತ ಚಿತ್ರ
ಒಂದನೇ ತರಗತಿ ಪ್ರವೇಶಕ್ಕೆ ‘ವಯಸ್ಸಿನ ಬೇಲಿ’: 2.3 ಲಕ್ಷ ಮಕ್ಕಳ ಶೈಕ್ಷಣಿಕ ವರ್ಷ ನಷ್ಟದ ಭೀತಿ
ವಯಸ್ಸಿನ ಅಲ್ಪ ಅಂತರದಿಂದಾಗಿ ಮಕ್ಕಳು ಮತ್ತೆ ಯುಕೆಜಿ ಓದಬೇಕಾದ ಅನಿವಾರ್ಯತೆ ಎದುರಾಗಿದ್ದು, ಪೋಷಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರ್ಕಾರವು ವಿನಾಯಿತಿ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.
ಕೇವಲ ಒಂದು ವಾರ, ತಿಂಗಳ ಅಂತರದಲ್ಲಿ ಮಗುವಿಗೆ 6 ವರ್ಷ ತುಂಬಿಲ್ಲ ಎನ್ನುವ ಕಾರಣಕ್ಕೆ ಮತ್ತೊಂದು ವರ್ಷ ಹಳೆಯ ತರಗತಿಯಲ್ಲೇ ಕೂರಿಸಬೇಕಾ? – ಇದು ಪ್ರಸ್ತುತ ರಾಜ್ಯದ ಲಕ್ಷಾಂತರ ಪೋಷಕರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಶಿಕ್ಷಣ ಹಕ್ಕು ಕಾಯ್ದೆಯ (RTE) ಅನ್ವಯ, ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಗುವಿನ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಈ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ಈ ಮೊದಲು ಇದ್ದ '5 ವರ್ಷ 5 ತಿಂಗಳ' ನಿಯಮಕ್ಕೆ ಒಗ್ಗಿಕೊಂಡಿದ್ದ ಪೋಷಕರಿಗೆ ಈ ಬದಲಾವಣೆ ಇದೀಗ ಆಘಾತ ತಂದೊಡ್ಡಿದೆ.
ಕಳೆದ ವರ್ಷ ಸಿಕ್ಕಿದ್ದ ರಿಲೀಫ್, ಈ ವರ್ಷವೂ ಸಿಗುತ್ತಾ?
ಕಳೆದ ಶೈಕ್ಷಣಿಕ ವರ್ಷದಲ್ಲಿ (2025-26) ಪೋಷಕರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರು. ಅಂದು ಎಚ್ಚೆತ್ತ ಸರ್ಕಾರ, ಮಾನವೀಯ ನೆಲೆಯಲ್ಲಿ 5 ವರ್ಷ 10 ತಿಂಗಳು ತುಂಬಿದ ಮಕ್ಕಳಿಗೆ (2 ತಿಂಗಳ ವಿನಾಯಿತಿ) ಒಂದು ಬಾರಿ ಮಾತ್ರ ಅನ್ವಯವಾಗುವಂತೆ ದಾಖಲಾತಿಗೆ ಅವಕಾಶ ನೀಡಿತ್ತು. ಇದರಿಂದ ಸಾವಿರಾರು ಮಕ್ಕಳ ಶೈಕ್ಷಣಿಕ ವರ್ಷ ಉಳಿದಿತ್ತು. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ 'ಒಂದನೇ ತರಗತಿ ದಾಖಲಾತಿ ವಯೋಮಿತಿ' ಎಂಬುದು ಕೇವಲ ನಿಯಮವಾಗಿ ಉಳಿಯದೆ, ಪೋಷಕರು ಮತ್ತು ಮಕ್ಕಳ ಪಾಲಿಗೆ ದೊಡ್ಡ ಆತಂಕವಾಗಿ ಪರಿಣಮಿಸಿದೆ. ಈ ಶೈಕ್ಷಣಿಕ ವರ್ಷದಲ್ಲೂ ವಯಸ್ಸಿನ ಗೊಂದಲ ಮುಂದುವರಿದಿದ್ದು, ಕಳೆದ ವರ್ಷದ ಮಾದರಿಯಲ್ಲೇ ವಿನಾಯಿತಿ ನೀಡುವಂತೆ ಹೋರಾಟಗಳು ಶುರುವಾಗಿವೆ.
2.3 ಲಕ್ಷ ಮಕ್ಕಳ ಅನಿವಾರ್ಯತೆ: ಯುಕೆಜಿಯೇ ಗತಿಯಾ?
2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಸಮಸ್ಯೆ ಮತ್ತೆ ಉಲ್ಬಣಿಸಿದೆ. ಅಂಕಿ-ಅಂಶಗಳ ಪ್ರಕಾರ, ರಾಜ್ಯಾದ್ಯಂತ ಸುಮಾರು 2.3 ಲಕ್ಷಕ್ಕೂ ಹೆಚ್ಚು ಮಕ್ಕಳು ಜೂನ್ 1ಕ್ಕೆ ಕೇವಲ ಕೆಲವು ದಿನಗಳ ಅಥವಾ ಗರಿಷ್ಠ 90 ದಿನಗಳ (3 ತಿಂಗಳು) ಅಂತರದಲ್ಲಿ 6 ವರ್ಷ ಪೂರೈಸಲು ವಿಫಲರಾಗುತ್ತಿದ್ದಾರೆ.
ಈ ಮಕ್ಕಳು ಈಗಾಗಲೇ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈಗ ಹೊಸ ನಿಯಮ ಪಾಲನೆಗೆ ಹೋದರೆ, ಕೇವಲ ವಯಸ್ಸಿನ ಕಾರಣಕ್ಕೆ ಈ ಮಕ್ಕಳು ಮತ್ತೆ ಯುಕೆಜಿಯನ್ನೇ ಓದಬೇಕಾಗುತ್ತದೆ. ಇದು ಮಕ್ಕಳಲ್ಲಿ ಮಾನಸಿಕ ಒತ್ತಡ ಉಂಟುಮಾಡುವುದಲ್ಲದೆ, ಅವರ ಒಂದು ಅಮೂಲ್ಯ ವರ್ಷ ವ್ಯರ್ಥವಾಗಲು ಕಾರಣವಾಗುತ್ತದೆ ಎಂಬುದು ಪೋಷಕರ ಬಲವಾದ ವಾದ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಂಭೀರ ಹಸ್ತಕ್ಷೇಪ
ಪೋಷಕರ ಸತತ ಮನವಿಗೆ ಸ್ಪಂದಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. "ಕಳೆದ ವರ್ಷದಂತೆಯೇ ಈ ವರ್ಷವೂ ಮಕ್ಕಳಿಗೆ ವಿನಾಯಿತಿ ನೀಡುವ ಕುರಿತು ಮರುಪರಿಶೀಲನೆ ನಡೆಸಬೇಕು. ಕನಿಷ್ಠ 90 ದಿನಗಳ (3 ತಿಂಗಳು) ಸಡಿಲಿಕೆ ನೀಡಿದರೆ ಲಕ್ಷಾಂತರ ಮಕ್ಕಳಿಗೆ ಒಂದನೇ ತರಗತಿಗೆ ಹೋಗಲು ದಾರಿಯಾಗುತ್ತದೆ. ಇಲ್ಲವಾದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಸಾಧ್ಯತೆಯಿದೆ" ಎಂದು ಆಯೋಗ ಎಚ್ಚರಿಸಿದೆ.
ಈ ಬಗ್ಗೆ ಆಯೋಗದ ಅಧ್ಯಕ್ಷ ಶಶಿಧರ್ ಗೋಸಂಬಿ ಅವರು ʼದಿ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಆರು ವರ್ಷ ತುಂಬಿರದ ಹಿನ್ನೆಲೆಯಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಮತ್ತೊಂದು ವರ್ಷ ಹಳೇ ತರಗತಿಯಲ್ಲಿಯೇ ಮುಂದುವರಿಯಬೇಕು ಎಂಬುದು ಮಕ್ಕಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು ಎಂಬ ಆತಂಕ ಪೋಷಕರಲ್ಲಿದೆ. ಹೀಗಾಗಿ ಕನಿಷ್ಠ 90 ದಿನಗಳ ವಿನಾಯಿತಿ ನೀಡುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಈಗಾಗಲೇ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ವಿವರಿಸಿದರು.
ಇಕ್ಕಟ್ಟಿನಲ್ಲಿ ಶಿಕ್ಷಣ ಇಲಾಖೆ: ವಿಶೇಷ ಆದೇಶದ ನಿರೀಕ್ಷೆ
ಸರಕಾರವು ಈಗ ಧರ್ಮಸಂಕಟಕ್ಕೆ ಸಿಲುಕಿದೆ. ಒಂದೆಡೆ ಎನ್‌ಇಪಿ (NEP) ಕಟ್ಟುನಿಟ್ಟಿನ ಜಾರಿ, ಮತ್ತೊಂದೆಡೆ ಲಕ್ಷಾಂತರ ಮಕ್ಕಳ ಭವಿಷ್ಯ. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, 90 ದಿನಗಳ ಸಡಿಲಿಕೆ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಆದರೆ, ಪ್ರತಿ ವರ್ಷ ಹೀಗೆ ವಿನಾಯಿತಿ ನೀಡುತ್ತಾ ಹೋದರೆ ನಿಯಮದ ಮೂಲ ಉದ್ದೇಶವೇ ಹಳ್ಳ ಹಿಡಿಯಬಹುದು ಎಂಬ ಆತಂಕವೂ ಉನ್ನತ ಅಧಿಕಾರಿಗಳಲ್ಲಿದೆ. ಆದರೂ, ಪೋಷಕರ ನಿರಂತರ ಪ್ರತಿಭಟನೆ ಹಾಗೂ ಮಕ್ಕಳ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿಗೂ 90 ದಿನಗಳ ವಿನಾಯಿತಿಯನ್ನು ನೀಡುವ 'ವಿಶೇಷ ಆದೇಶ' ಹೊರಬರುವ ಸಾಧ್ಯತೆ ದಟ್ಟವಾಗಿದೆ.
ಶೀಘ್ರ ನಿರ್ಧಾರ ಕೈಗೊಳ್ಳಲು ಖಾಸಗಿ ಶಾಲೆಗಳ ಆಗ್ರಹ
ಈ ಬಗ್ಗೆ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ʼದಿ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಸರಕಾರ ನೀಡಿರುವ ಸೂಚನೆಯಂತೆ ಸದ್ಯ ದಾಖಲಾತಿ ನಡೆಸಲಾಗುತ್ತಿದೆ. ಕಳೆದ ವರ್ಷ 2 ತಿಂಗಳ ವಿನಾಯಿತಿ ನೀಡಿ 1ನೇ ತರಗತಿಗೆ ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗಷ್ಟೇ ದಾಖಲಾತಿಗಳು ಪ್ರಾರಂಭಗೊಳ್ಳುತ್ತಿವೆ. ಸರ್ಕಾರ ವಯಸ್ಸಿನ ವಿನಾಯಿತಿ ನೀಡುವುದಾದರೆ, ಆದಷ್ಟು ಶೀಘ್ರದಲ್ಲೇ ನೀಡುವುದು ಉತ್ತಮ. ಇದರಿಂದ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರಿಗೂ ಅನುಕೂಲವಾಗಲಿದೆ" ಎಂದರು.
ಸರ್ಕಾರಕ್ಕೆ ಪೋಷಕರ ಅಂತಿಮ ಮೊರೆ
ಶಿಕ್ಷಣ ಎಂಬುದು ಕೇವಲ ಅಂಕಿ-ಅಂಶ ಅಥವಾ ವಯಸ್ಸಿನ ಮಿತಿಯಲ್ಲ, ಅದು ಮಗುವಿನ ಬೆಳವಣಿಗೆಯ ಹಾದಿ. ಲಕ್ಷಾಂತರ ಪೋಷಕರು ಈಗ ಸರ್ಕಾರದ ಕಡೆಗೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಇನ್ನೊಂದು ತಿಂಗಳಿನೊಳಗೆ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ಸಾವಿರಾರು ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಒಂದು ವರ್ಷದ ಶೂನ್ಯ ಸೃಷ್ಟಿಯಾಗುವುದು ಗ್ಯಾರಂಟಿ. ಸುವಾಸಿತ ಮಲ್ಲಿಗೆಯಂತೆ ಅರಳಬೇಕಾದ ಮಕ್ಕಳ ಭವಿಷ್ಯ 'ವಯೋಮಿತಿ'ಯ ಬೇಲಿಯೊಳಗೆ ಬಾಡದಂತೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.

