Brutal act in Bengaluru: Retired ISRO officer kills wife; Was depression the reason?
x

ಮೃತ ಸಂಧ್ಯಾ ಶ್ರೀ ಹಾಗೂ ಆರೋಪಿ ನಾಗೇಶ್ವರ್ ರಾವ್

ಬೆಂಗಳೂರಿನಲ್ಲಿ ಘೋರ ಕೃತ್ಯ: ನಿವೃತ್ತ ಇಸ್ರೋ ಅಧಿಕಾರಿಯಿಂದಲೇ ಪತ್ನಿ ಹತ್ಯೆ; ಖಿನ್ನತೆಯೇ ಕಾರಣ?

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹತ್ಯೆಗೆ ಪ್ರಮುಖ ಕಾರಣ ಖಿನ್ನತೆ ಎಂಬುದು ತಿಳಿದುಬಂದಿದ್ದು, ನಾಗೇಶ್ವರ್ ರಾವ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿಸಿದ್ದಾರೆ.


Click the Play button to hear this message in audio format

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಡಿಆರ್​ಡಿಒ) ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಖಿನ್ನತೆಯಿಂದ ಬಳಲುತ್ತಿದ್ದ ಆರೋಪಿ, ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಪೊಲೀಸ್ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.

ಬಂಧಿತ ಆರೋಪಿಯನ್ನು ನಾಗೇಶ್ವರ್ ರಾವ್ (65) ಎಂದು ಗುರುತಿಸಲಾಗಿದೆ. ಇವರು ಬುಧವಾರ ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ತಮ್ಮ ಪತ್ನಿ ಸಂಧ್ಯಾ ಶ್ರೀ ಅವರನ್ನು ಮನೆಯಲ್ಲಿಯೇ ಕೊಲೆ ಮಾಡಿದ್ದಾರೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 'ವರ್ಚುಸೋಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಟವಲ್‌ನಿಂದ ಕತ್ತು ಬಿಗಿದು ಕೊಲೆ

ದಂಪತಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಬುಧವಾರ ಬೆಳಗ್ಗೆ ಪತ್ನಿ ಸಂಧ್ಯಾ ಶ್ರೀ ಅವರ ಕತ್ತಿಗೆ ಟವಲ್ ಬಿಗಿದು ಉಸಿರುಗಟ್ಟಿಸಿ ನಾಗೇಶ್ವರ್ ರಾವ್ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅವಲಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

"ನನ್ನ ನಂತರ ಪತ್ನಿ ಕಷ್ಟಪಡಬಾರದು"

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹತ್ಯೆಗೆ ಪ್ರಮುಖ ಕಾರಣ ಖಿನ್ನತೆ ಎಂಬುದು ತಿಳಿದುಬಂದಿದೆ. ನಾಗೇಶ್ವರ್ ರಾವ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, "ನನ್ನ ಸಾವಿನ ನಂತರ ಪತ್ನಿ ಒಬ್ಬಂಟಿಯಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ, ಅವರಿಗೆ ನಿರ್ವಹಣೆ ಕಷ್ಟವಾಗಬಹುದು" ಎಂಬ ಆತಂಕದಲ್ಲಿ, ಮೊದಲು ಪತ್ನಿಯನ್ನು ಕೊಂದು ನಂತರ ತಾನು ಸಾಯಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಪರ್ಯಾಸವೆಂದರೆ, ಪತ್ನಿಯನ್ನು ಕೊಂದ ಬಳಿಕ ನಾಗೇಶ್ವರ್ ರಾವ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಭಯವಾಗಿದೆ. ಹೀಗಾಗಿ ಅವರು ಪ್ರಾಣ ಕಳೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ತನಿಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಪೊಲೀಸರು ಆರೋಪಿಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಿದ್ದು, ಕುಟುಂಬಸ್ಥರ ಬಳಿಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ಇಂತಹ ಕೃತ್ಯ ಎಸಗಿರುವುದು ಸ್ಥಳೀಯರಲ್ಲಿ ದಿಗ್ಭ್ರಮೆ ಮೂಡಿಸಿದೆ.

Read More
Next Story