
5ನೇ ತಲೆಮಾರಿಗೆ ಸೀಮಿತವಾಗಬೇಡಿ, 6ನೇ ತಲೆಮಾರಿನತ್ತ ನೋಡಿ : ರಾಜನಾಥ್ ಸಿಂಗ್
ಡಿಆರ್‌ಡಿಒ ಅಂಗಸಂಸ್ಥೆಯಾದ ಜಿಟಿಆರ್‌ಇಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇಶೀಯ ಟರ್ಬೈನ್ ಎಂಜಿನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ಕುರಿತು ಮಾಹಿತಿ ಪಡೆದುಕೊಂಡರು.
ಬೆಂಗಳೂರಿನಲ್ಲಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಂಗಸಂಸ್ಥೆಯಾದ ಗ್ಯಾಸ್ ಟರ್ಬೈನ್ ಸಂಶೋಧನಾ ಸಂಸ್ಥೆಗೆ (ಜಿಟಿಆರ್‌ಇ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇಶೀಯ ಮಿಲಿಟರಿ ಅನಿಲ ಟರ್ಬೈನ್ ಎಂಜಿನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಯೋಜನೆಗಳ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಂಡರು. ವಿಶೇಷವಾಗಿ, ದೇಶದ ಮಹತ್ವಾಕಾಂಕ್ಷೆಯ 'ಕಾವೇರಿ ಎಂಜಿನ್' ನ ಸಂಪೂರ್ಣ 'ಆಫ್ಟರ್ ಬರ್ನರ್' ಎಂಜಿನ್ ಪರೀಕ್ಷೆಯನ್ನು ಖುದ್ದಾಗಿ ವೀಕ್ಷಿಸಿದರು. ರಕ್ಷಣಾ ಪಡೆಗಳಿಗೆ ಒದಗಿಸಲಾದ ಬೆಂಬಲ, ಶೈಕ್ಷಣಿಕ ಸಂಸ್ಥೆಗಳೊಂದಿಗಿನ ಸಂವಹನ ಮತ್ತು ಖಾಸಗಿ ಕೈಗಾರಿಕೆಗಳ ಸಹಭಾಗಿತ್ವದ ಬಗ್ಗೆ ವಿಜ್ಞಾನಿಗಳು ಸಚಿವರಿಗೆ ಮಾಹಿತಿ ನೀಡಿದರು.
ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಸಚಿವ ರಾಜನಾಥ್ ಸಿಂಗ್, ಸ್ವಾವಲಂಬನೆಯ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಟಿಆರ್‌ಇ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಡಿಆರ್‌ಡಿಒ ಭಾರತದ ಕಾರ್ಯತಂತ್ರದ ಸಾಮರ್ಥ್ಯದ ಭದ್ರಬುನಾದಿಯಾಗಿದೆ. ದೇಶದಲ್ಲಿ ಏರೋ ಎಂಜಿನ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭಾರತವು ಇನ್ನು ಮುಂದೆ ಕೇವಲ 5ನೇ ತಲೆಮಾರಿನ ತಂತ್ರಜ್ಞಾನಕ್ಕೆ ಸೀಮಿತವಾಗದೆ, 6ನೇ ತಲೆಮಾರಿನ ಸುಧಾರಿತ ಏರೋ ಎಂಜಿನ್‌ಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಕರೆ ನೀಡಿದ್ದಾರೆ.
ಏರೋ ಎಂಜಿನ್‌ಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವಾಗ, ರಾಷ್ಟ್ರವ್ಯಾಪಿ ಸದೃಢವಾದ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಯ ಎಂಜಿನ್‌ಗಳ ಮೇಲೆ ಗಮನಹರಿಸಲಾಗುತ್ತಿದೆ. ಅತ್ಯಾಧುನಿಕ ಮಧ್ಯಮ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ವಿನ್ಯಾಸ ಮತ್ತು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದ್ದೇವೆ. ಏರೋ ಎಂಜಿನ್‌ಗಳ ಕ್ಷೇತ್ರದಲ್ಲಿ ಪರಿಣತಿಯನ್ನು ಸಾಧಿಸಲು ಹಿಂದೆ ಹಲವು ಪ್ರಯತ್ನಗಳನ್ನು ಮಾಡಿದ್ದೇವೆ. ಈಗ ಆ ಪ್ರಯತ್ನಗಳನ್ನು ಪೂರ್ಣಗೊಳಿಸುವ ಸಮಯ ಬಂದಿದೆ. 6ನೇ ತಲೆಮಾರಿನ, ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಶೋಧನೆಯು ಹೆಚ್ಚು ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆ ಯಂತ್ರ ಕಲಿಕೆ ಮತ್ತು ಹೊಸ ಸಾಮಗ್ರಿಗಳ ಬಳಕೆ ಹೆಚ್ಚುತ್ತಿದೆ ಎಂದು ಹೇಳಿದರು.
ವಾಯು ಎಂಜಿನ್ ಅಭಿವೃದ್ಧಿಯನ್ನು ಉಷ್ಣಬಲ ವಿಜ್ಞಾನ, ಮೆಟೀರಿಯಲ್ ಸೈನ್ಸ್, ಫ್ಲೂಯಿಡ್ ಮ್ಯಾಕ್ಯಾನಿಕ್ಸ್ ಮತ್ತು ಮುಂದುವರಿದ ಯಾಂತ್ರಿಕ ಎಂಜಿನಿಯರಿಂಗ್ ಅನ್ನು ಸಂಯೋಜಿಸುವ ಅತ್ಯಂತ ಸಂಕೀರ್ಣ ಪ್ರಯತ್ನವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಮುಂದಿನ ಪೀಳಿಗೆಯ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು 25-30 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ದೇಶದ ಕಾರ್ಯತಂತ್ರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಲಮಿತಿಗಳನ್ನು ನಿಗದಿಗೊಳಿಸಬೇಕು. ಈಗಾಗಲೇ 20 ವರ್ಷಗಳು ಕಳೆದಿವೆ ಮತ್ತು ನಮಗೆ ಈಗ ಕೇವಲ 5-7 ವರ್ಷಗಳು ಮಾತ್ರ ಉಳಿದಿವೆ ಎಂಬುದಾಗಿ ಭಾವಿಸಬೇಕು. ಏರೋ ಎಂಜಿನ್ ಅಭಿವೃದ್ಧಿಗಾಗಿ ಇಂಗ್ಲೆಂಡ್ ಜೊತೆಗಿನ ಜಂಟಿ ಅಧ್ಯಯನ ಮತ್ತು 'ರಾಷ್ಟ್ರೀಯ ಏರೋ ಎಂಜಿನ್ ಮಿಷನ್' ಅಡಿಯಲ್ಲಿ ಫ್ರಾನ್ಸ್‌ನೊಂದಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಅವರೊಂದಿಗಿನ ಸಹಯೋಗವು ನಮಗೆ ಹೊಸ ತಂತ್ರಜ್ಞಾನ ಕಲಿಯಲು ಮತ್ತು ಸವಾಲುಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣಾ ಪಡೆಗಳು ರಕ್ಷಣಾ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಆತ್ಮನಿರ್ಭರತೆಯನ್ನು ಪ್ರದರ್ಶಿಸಿದವು. ಸಂವಹನ ವ್ಯವಸ್ಥೆಗಳಾಗಲಿ, ಕಣ್ಗಾವಲು ಉಪಕರಣಗಳಾಗಲಿ ಅಥವಾ ದಾಳಿ ಆಯುಧಗಳಾಗಲಿ, ಎಲ್ಲವೂ ಸ್ಥಳೀಯವಾಗಿದ್ದವು. ಇದು ನಮ್ಮ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಿತು ಮತ್ತು ನಾಗರಿಕರಲ್ಲಿ ಹೆಮ್ಮೆ ಮೂಡಿಸಿತು. ವಿಕಸನಗೊಳ್ಳುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ವಿಧಾನಗಳ ಮೇಲೆ ಹೆಚ್ಚು ಗಮನಹರಿಸುವುದು ಮತ್ತು ನಮ್ಮ ಪಡೆಗಳಿಗೆ ವಿಶ್ವ ದರ್ಜೆಯ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದರು.
ಜಿಟಿಆರ್‌ಇ ಅಭಿವೃದ್ಧಿಪಡಿಸುತ್ತಿರುವ ಹೆಚ್ಚಿನ ತಾಪಮಾನದ ಸಂಯೋಜನೆಗಳು ಕೇವಲ ರಕ್ಷಣಾ ಕ್ಷೇತ್ರಕ್ಕಲ್ಲದೆ, ಭವಿಷ್ಯದಲ್ಲಿ ನಾಗರಿಕ ವಿಮಾನಯಾನ, ವಿದ್ಯುತ್ ಉತ್ಪಾದನೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೂ ಪ್ರಯೋಜನಕಾರಿಯಾಗಲಿವೆ. ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವೈಮಾನಿಕ ಮಾರುಕಟ್ಟೆಯಾಗಿದ್ದು, ಇಲ್ಲಿನ ತಾಂತ್ರಿಕ ಪ್ರಗತಿ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು 18 ವರ್ಷಗಳ ನಂತರ ಪೂರ್ಣಗೊಂಡಿರುವುದು ಭಾರತದ ಬೆಳೆಯುತ್ತಿರುವ ಆರ್ಥಿಕ ಶಕ್ತಿಯ ಗುರುತಾಗಿದೆ. ಇತ್ತೀಚೆಗೆ ಗ್ರೀಸ್ ರಕ್ಷಣಾ ಸಚಿವರು ಭಾರತವನ್ನು ಕೇವಲ ಉದಯೋನ್ಮುಖ ಶಕ್ತಿಯಾಗಿ ಅಲ್ಲ, ಬದಲಾಗಿ 'ಸೂಪರ್ ಪವರ್' ಆಗಿ ನೋಡುತ್ತಿದ್ದಾರೆ.
ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಆರ್ ಮತ್ತು ಡಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ ಕಾಮತ್ ಮತ್ತು ಜಿಟಿಆರ್‌ಇಯ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

