
ರೈಲು ಆಧಾರಿತ ಲಾಂಚರ್‌ನಿಂದ ಅಗ್ನಿ ಪ್ರೈಮ್ ಕ್ಷಿಪಣಿ ಉಡಾವಣೆ ಯಶಸ್ವಿ; ಏನಿದು ಭಾರತದ ಹೊಸ ಮೈಲುಗಲ್ಲು
ಈ ಯಶಸ್ವಿ ಪರೀಕ್ಷೆಯೊಂದಿಗೆ, ರೈಲು-ಆಧಾರಿತ ಕ್ಷಿಪಣಿ ಉಡಾವಣಾ ತಂತ್ರಜ್ಞಾನ ಹೊಂದಿರುವ ಅಮೆರಿಕ, ರಷ್ಯಾ ಮತ್ತು ಚೀನಾದಂತಹ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.
ಭಾರತವು ತನ್ನ ರಕ್ಷಣಾ ಸಾಮರ್ಥ್ಯದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಗುರುವಾರ (ಸೆಪ್ಟೆಂಬರ್ 25) ದೇಶದಾದ್ಯಂತ ಯಾವುದೇ ಸ್ಥಳದಿಂದ ಕ್ಷಿಪಣಿ ಉಡಾವಣೆ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ, ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಜಂಟಿಯಾಗಿ ಒಡಿಶಾದ ಬಾಲಸೋರ್‌ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ನಡೆಸಿದವು.
ಈ ಪರೀಕ್ಷೆಯು ಭಾರತದ ರಕ್ಷಣಾ ತಂತ್ರಗಾರಿಕೆಯಲ್ಲಿ ಒಂದು ದೊಡ್ಡ ಸುಧಾರಣೆಯಾಗಿದೆ. ಸಾಮಾನ್ಯ ರೈಲ್ವೆ ಜಾಲವನ್ನು ಬಳಸಿಕೊಂಡು ಕ್ಷಿಪಣಿಯನ್ನು ದೇಶದ ಯಾವುದೇ ಮೂಲೆಗೆ ತ್ವರಿತವಾಗಿ ಸಾಗಿಸಬಹುದು. ರಸ್ತೆ ಮೂಲಕ ಸಾಗಿಸುವುದಕ್ಕಿಂತ ರೈಲಿನ ಮೂಲಕ ಕ್ಷಿಪಣಿಯನ್ನು ವೇಗವಾಗಿ ಮತ್ತು ಸುಲಭವಾಗಿ ಸಾಗಿಸಲು ಸಾಧ್ಯವಾಗುವುದರಿಂದ ದೇಶದ ಗಡಿ ಭಾಗಗಳಿಗೆ ಕ್ಷಿಪಣಿಯನ್ನು ಶೀಘ್ರವಾಗಿ ತಲುಪಿಸಲು ಇದು ಸಹಾಯಕವಾಗಿದೆ. ಸಾಮಾನ್ಯ ರೈಲು ಬೋಗಿಗಳಂತೆ ಕಾಣುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಲಾಂಚರ್‌ಗಳಿಂದ ಕ್ಷಿಪಣಿಯನ್ನು ಉಡಾಯಿಸುವುದರಿಂದ, ಶತ್ರುಗಳ ಕಣ್ಗಾವಲು ವ್ಯವಸ್ಥೆಗಳಿಗೆ ಇದನ್ನು ಪತ್ತೆಹಚ್ಚುವುದು ಅತ್ಯಂತ ಕಷ್ಟಕರ. ಇದು ಹಠಾತ್ ದಾಳಿ ನಡೆಸುವ ಸಾಮರ್ಥ್ಯ ವೃದ್ಧಿಸಲಿದೆ. .
ಕೆಲವೇ ನಿಮಿಷಗಳಲ್ಲಿ ಉಡಾವಣೆ
ಈ ವ್ಯವಸ್ಥೆಯಿಂದಾಗಿ, ಯಾವುದೇ ಸ್ಥಳದಿಂದ ಕೆಲವೇ ನಿಮಿಷಗಳಲ್ಲಿ ಕ್ಷಿಪಣಿಯನ್ನು ಉಡಾವಣೆಗೆ ಸಿದ್ಧಪಡಿಸಬಹುದು. ಇದು ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ಸೇನೆಗೆ ಸಹಕಾರ ಕೊಡುತ್ತದೆ. ಒಂದು ವೇಳೆ ಶತ್ರು ದೇಶವು ಮೊದಲು ಪರಮಾಣು ದಾಳಿ ನಡೆಸಿದರೂ, ಭಾರತದ ರಹಸ್ಯ ಸ್ಥಳಗಳಲ್ಲಿರುವ ರೈಲು-ಆಧಾರಿತ ಕ್ಷಿಪಣಿಗಳನ್ನು ಬಳಸಿ ಪ್ರತಿದಾಳಿ ನಡೆಸುವ ಸುರಕ್ಷಿತ ಸಾಮರ್ಥ್ಯ ಭಾರತಕ್ಕೆ ದೊರಕಿದೆ. ಈ ಯಶಸ್ವಿ ಪರೀಕ್ಷೆಯೊಂದಿಗೆ, ರೈಲು-ಆಧಾರಿತ ಕ್ಷಿಪಣಿ ಉಡಾವಣಾ ತಂತ್ರಜ್ಞಾನ ಹೊಂದಿರುವ ಅಮೆರಿಕ, ರಷ್ಯಾ ಮತ್ತು ಚೀನಾದಂತಹ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.
ಮಿಡ್ರೇಂಜ್ ಕ್ಷಿಪಣಿ
ಅಗ್ನಿ-ಪ್ರೈಮ್, ಅಗ್ನಿ ಸರಣಿಯ ಹೊಸ ತಲೆಮಾರಿನ, ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು 1,000 ದಿಂದ 2,000 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ನಿಖರವಾಗಿ ತಲುಪಬಲ್ಲದು. ಕ್ಷಿಪಣಿಯನ್ನು ಡಬ್ಬಿಯಲ್ಲಿ ಸಂಗ್ರಹಿಸಿ, ಅದರಿಂದಲೇ ಉಡಾಯಿಸಬಹುದಾದ ವ್ಯವಸ್ಥೆ (Canisterised System) ಇದಾಗಿದೆ. ಇದು ಕ್ಷಿಪಣಿಯ ಬಾಳಿಕೆ ಮತ್ತು ಕಾರ್ಯಾಚರಣೆಯ ವೇಗ ಹೆಚ್ಚಿಸುತ್ತದೆ. ಎರಡು-ಹಂತದ, ಘನ-ಇಂಧನ ಚಾಲಿತ ಈ ಕ್ಷಿಪಣಿಯು, ಅತ್ಯಾಧುನಿಕ ಮಾರ್ಗದರ್ಶನ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಹೊಂದಿರುವುದರಿಂದ ಗುರಿಯನ್ನು ಹೆಚ್ಚು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಭಾರತದ ಪರಮಾಣು ನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದೆ.
ಈ ಹಿಂದೆ ರಸ್ತೆ-ಆಧಾರಿತ ಮೊಬೈಲ್ ಲಾಂಚರ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿಯ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅದನ್ನು ಈಗಾಗಲೇ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಹೊಸ ರೈಲು-ಆಧಾರಿತ ಪರೀಕ್ಷೆಯು ಭಾರತದ ರಕ್ಷಣಾ ಸನ್ನದ್ಧತೆಗೆ ಹೊಸ ಆಯಾಮವನ್ನು ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಐತಿಹಾಸಿಕ ಸಾಧನೆಗಾಗಿ DRDO, SFC ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ. ಈ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಅಗ್ನಿ ಸರಣಿಯ ಇತರ ಕ್ಷಿಪಣಿಗಳಿಗೂ ಅಳವಡಿಸುವ ಸಾಧ್ಯತೆ ಇದೆ.