
ಸಾಂದರ್ಭಿಕ ಚಿತ್ರ
ಜೋಡಿ ಕೊಲೆಗೆ ಕಾರಣವಾಯ್ತೇ ಬ್ಲಿಂಕಿಟ್? ಆನ್ಲೈನ್ ಮೂಲಕ ಚಾಕು ಖರೀದಿ!
ಶಸ್ತ್ರಾಸ್ತ್ರ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ನಿಗದಿತ ಅಳತೆಗಿಂತ ದೊಡ್ಡದಾದ ಹಾಗೂ ಮಾರಕ ಚಾಕುಗಳನ್ನು ಮಾರಾಟ ಮಾಡಿದ ಆರೋಪದಡಿ ದೆಹಲಿ ಪೊಲೀಸರು ಬ್ಲಿಂಕಿಟ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಗ್ರಾಹಕರಿಗೆ ತ್ವರಿತವಾಗಿ ವಸ್ತುಗಳನ್ನು ತಲುಪಿಸುವ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ 'ಬ್ಲಿಂಕಿಟ್' ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ದೆಹಲಿಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಬಳಸಲಾದ ಚಾಕುಗಳನ್ನು ಈ ಆ್ಯಪ್ ಮೂಲಕವೇ ಖರೀದಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಶಸ್ತ್ರಾಸ್ತ್ರ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ನಿಗದಿತ ಅಳತೆಗಿಂತ ದೊಡ್ಡದಾದ ಹಾಗೂ ಮಾರಕ ಚಾಕುಗಳನ್ನು ಮಾರಾಟ ಮಾಡಿದ ಆರೋಪದಡಿ ದೆಹಲಿ ಪೊಲೀಸರು ಬ್ಲಿಂಕಿಟ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪಶ್ಚಿಮ ದೆಹಲಿಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳ ತನಿಖೆ ನಡೆಸುವಾಗ ಪೊಲೀಸರಿಗೆ ಈ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಕೊಲೆ ಆರೋಪಿಗಳು ವಿಚಾರಣೆ ವೇಳೆ ತಾವು ಕೃತ್ಯಕ್ಕೆ ಬಳಸಿದ 'ಬಟನ್ ಚಾಕು'ಗಳನ್ನು ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡಿದ್ದಾಗಿ ಬಾಯಿಬಿಟ್ಟಿದ್ದಾರೆ. ಕೇವಲ 699 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಈ ಚಾಕುಗಳನ್ನು ಬ್ಲಿಂಕಿಟ್ ತನ್ನ ಡಾರ್ಕ್ ಸ್ಟೋರ್‌ಗಳ ಮೂಲಕ ರಾಜಧಾನಿಯಾದ್ಯಂತ ಪೂರೈಸುತ್ತಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಗ್ರಾಹಕರ ಸೋಗಿನಲ್ಲಿ ಪೊಲೀಸರ ಕಾರ್ಯಾಚರಣೆ
ಆರೋಪಿಗಳ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರೇ ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಲಿಂಕಿಟ್ ಆಪ್ ಮೂಲಕ ಅದೇ ಮಾದರಿಯ ಚಾಕುವನ್ನು ಆರ್ಡರ್ ಮಾಡಿದ್ದಾರೆ. ಡೆಲಿವರಿ ಬಾಯ್ ಮೂಲಕ ಮನೆಗೆ ಬಂದ ಚಾಕುವನ್ನು ಅಳತೆ ಮಾಡಿದಾಗ, ಅದರ ಬ್ಲೇಡ್ 8 ಸೆಂ.ಮೀ ಉದ್ದ ಮತ್ತು 2.5 ಸೆಂ.ಮೀ ಅಗಲವಿರುವುದು ಕಂಡುಬಂದಿದೆ. ಸರ್ಕಾರದ ನಿಯಮಗಳ ಪ್ರಕಾರ, ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವ ಚಾಕುಗಳ ಬ್ಲೇಡ್ ಉದ್ದ 7.62 ಸೆಂ.ಮೀ ಮತ್ತು ಅಗಲ 1.72 ಸೆಂ.ಮೀ ಮೀರಬಾರದು. ಇದಕ್ಕಿಂತ ದೊಡ್ಡದಾದ ಚಾಕುಗಳನ್ನು 'ಮಾರಕಾಸ್ತ್ರ' ಎಂದು ಪರಿಗಣಿಸಲಾಗುತ್ತದೆ ಮತ್ತು ಪರವಾನಗಿ ಇಲ್ಲದೆ ಇದರ ಮಾರಾಟವು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧವಾಗುತ್ತದೆ.
ನಿಯಮ ಉಲ್ಲಂಘನೆ ದೃಢಪಡುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ದೆಹಲಿಯ ವಿವಿಧೆಡೆ ಇರುವ ಬ್ಲಿಂಕಿಟ್‌ನ ಡಾರ್ಕ್ ಸ್ಟೋರ್‌ಗಳ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 55ಕ್ಕೂ ಹೆಚ್ಚು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿವಾದಗಳ ಸುಳಿಯಲ್ಲಿ ಬ್ಲಿಂಕಿಟ್
ಬ್ಲಿಂಕಿಟ್ ಸೇರಿದಂತೆ ಕ್ವಿಕ್-ಕಾಮರ್ಸ್ ಸಂಸ್ಥೆಗಳು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ 10 ನಿಮಿಷದ ಡೆಲಿವರಿ ಸೇವೆಯ ಬಗ್ಗೆಯೂ ತೀವ್ರ ಟೀಕೆ ವ್ಯಕ್ತವಾಗಿತ್ತು. ಅತಿ ವೇಗದ ಡೆಲಿವರಿ ಭರವಸೆಯು ಸಿಬ್ಬಂದಿಯ ಪ್ರಾಣಕ್ಕೆ ಕುತ್ತು ತರುತ್ತಿದೆ ಮತ್ತು ಅವರನ್ನು ಅಪಾಯಕಾರಿ ಸ್ಥಿತಿಗೆ ದೂಡುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿದ್ದವು. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಜೊಮ್ಯಾಟೊ, ಸ್ವಿಗ್ಗಿ, ಬ್ಲಿಂಕಿಟ್ ಮತ್ತು ಜೆಪ್ಟೋ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಮಾರ್ಕೆಟಿಂಗ್‌ಗಿಂತ ನೌಕರರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು.
ಈ ಹಿಂದೆ ಬೆಂಗಳೂರಿನಲ್ಲಿಯೂ ತಂಬಾಕು ನಿಯಂತ್ರಣ ಕಾಯ್ದೆ ನಿಯಮಗಳನ್ನು ಪಾಲಿಸದೆ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪ ಈ ಸಂಸ್ಥೆಗಳ ಮೇಲಿತ್ತು. ಇದೀಗ ಕೊಲೆ ಪ್ರಕರಣದಲ್ಲಿ ಬಳಸಲಾದ ಚಾಕುಗಳ ಮಾರಾಟದ ಜಾಲ ಬ್ಲಿಂಕಿಟ್ ಕಡೆಗೆ ಬೊಟ್ಟು ಮಾಡಿರುವುದು ಸಂಸ್ಥೆಗೆ ದೊಡ್ಡ ಪೆಟ್ಟು ನೀಡಿದೆ.

