Delhi AI Summit|ಸ್ವಯಂ ಆವಿಷ್ಕಾರ ಎನ್ನುತ್ತಾ ಚೀನಾದ ರೋಬೋಟ್‌ ನಾಯಿ ಪ್ರದರ್ಶನ! ವಿವಿಗೆ ಗೇಟ್‌ಪಾಸ್‌
x
ಚೀನಾ ನಿರ್ಮಿತ ರೊಬೊಟಿಕ್ ನಾಯಿ

Delhi AI Summit|ಸ್ವಯಂ ಆವಿಷ್ಕಾರ ಎನ್ನುತ್ತಾ ಚೀನಾದ ರೋಬೋಟ್‌ ನಾಯಿ ಪ್ರದರ್ಶನ! ವಿವಿಗೆ ಗೇಟ್‌ಪಾಸ್‌

ದೆಹಲಿ AI ಸಮ್ಮಿಟ್‌ನಲ್ಲಿ ಚೀನಾದ ರೊಬೊಟಿಕ್ ನಾಯಿಯನ್ನು ತಮ್ಮದೇ ಆವಿಷ್ಕಾರ ಎಂದು ಸುಳ್ಳು ಹೇಳಿ ಪ್ರದರ್ಶಿಸಿದ ಗಲ್ಗೋಟಿಯಾಸ್ ವಿವಿಗೆ ಮಳಿಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ.


'ಆತ್ಮನಿರ್ಭರ ಭಾರತ'ದ ಸಂಕಲ್ಪದೊಂದಿಗೆ ದೆಹಲಿಯಲ್ಲಿ ನಡೆಯುತ್ತಿರುವ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಭಾರಿ ಮುಖಭಂಗವಾಗಿದೆ. ಚೀನಾ ನಿರ್ಮಿತ ರೊಬೊಟಿಕ್ ನಾಯಿಯನ್ನು ತಮ್ಮದೇ ಸಂಶೋಧನೆ ಎಂದು ಸುಳ್ಳು ಹೇಳಿ ಪ್ರದರ್ಶಿಸಿದ ಆರೋಪದ ಮೇಲೆ, ವಿಶ್ವವಿದ್ಯಾಲಯಕ್ಕೆ ಎಕ್ಸ್‌ಪೋ ವೇದಿಕೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಾದದ ಅಸಲಿಯತ್ತು ಏನು?

ಗ್ರೇಟರ್ ನೋಯ್ಡಾ ಮೂಲದ ಈ ಶಿಕ್ಷಣ ಸಂಸ್ಥೆಯು ಶೃಂಗಸಭೆಯಲ್ಲಿ ಚೀನಾದ 'ಯೂನಿಟ್ರೀ' ಕಂಪನಿಯ ರೊಬೊಟಿಕ್ ನಾಯಿಯನ್ನು ಪ್ರದರ್ಶಿಸಿತ್ತು. ಈ ರೋಬೋಟ್ ಭಾರತದಲ್ಲಿ ಆನ್‌ಲೈನ್‌ನಲ್ಲಿ ಸುಮಾರು 2 ರಿಂದ 3 ಲಕ್ಷ ರೂಪಾಯಿಗೆ ಲಭ್ಯವಿದೆ. ಆದರೆ, ವಿಶ್ವವಿದ್ಯಾಲಯದ ಪ್ರತಿನಿಧಿಗಳು ಇದಕ್ಕೆ "ಓರಿಯನ್" ಎಂದು ಹೆಸರಿಟ್ಟು, ಇದು ತಮ್ಮದೇ ವಿಶ್ವವಿದ್ಯಾಲಯದ 'ಸೆಂಟರ್ ಆಫ್ ಎಕ್ಸಲೆನ್ಸ್' ಅಭಿವೃದ್ಧಿಪಡಿಸಿದ ಉತ್ಪನ್ನ ಎಂದು ಜಗತ್ತಿಗೆ ಸುಳ್ಳು ಹೇಳಿದ್ದರು.

ಕ್ಯಾಮೆರಾ ಮುಂದೆ ಸಿಕ್ಕಿಬಿದ್ದ ಸುಳ್ಳು!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಿಶ್ವವಿದ್ಯಾಲಯದ ಪ್ರತಿನಿಧಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಓರಿಯನ್ ರೋಬೋಟ್ ಅನ್ನು ಗಲ್ಗೋಟಿಯಾಸ್ ವಿಶ್ವವಿದ್ಯಾಲಯವೇ ತಯಾರಿಸಿದೆ" ಎಂದು ವಿವರಿಸಿದ್ದರು. ಮತ್ತೊಂದು ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಕೂಡ ಇದೇ ದನಿಯಲ್ಲಿ "ಇದು ನಮ್ಮ ಸಂಶೋಧನೆ" ಎಂದು ಹೇಳಿಕೊಂಡಿದ್ದರು. ಆದರೆ, ತಜ್ಞರು ಇದು ಚೀನಾದ ಆಮದು ಮಾಡಿಕೊಂಡ ರೋಬೋಟ್ ಎಂದು ಗುರುತಿಸಿ ಸಾಕ್ಷ್ಯ ಸಮೇತ ಬಯಲಿಗೆಳೆದಿದ್ದರು.

ಉಲ್ಟಾ ಹೊಡೆದ ವಿಶ್ವವಿದ್ಯಾನಿಲಯ

ವಿವಾದ ತಾರಕಕ್ಕೇರುತ್ತಿದ್ದಂತೆ ಎಕ್ಸ್ (X) ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯ, "ನಾವು ಇದನ್ನು ನಿರ್ಮಿಸಿದ್ದೇವೆ ಎಂದು ಎಲ್ಲೂ ಹೇಳಿಕೊಂಡಿಲ್ಲ, ಇದು ಕೇವಲ ಕಲಿಕೆಯ ಸಾಧನ" ಎಂದು ಉಲ್ಟಾ ಹೊಡೆಯಿತು. ಆದರೆ, ಎಕ್ಸ್‌ನ 'Community Note' ವೈಶಿಷ್ಟ್ಯವು ವಿಶ್ವವಿದ್ಯಾಲಯದ ಸುಳ್ಳನ್ನು ಹಿಡಿದುಹಾಕಿತು. "ವಿಶ್ವವಿದ್ಯಾಲಯದ ಪ್ರತಿನಿಧಿಗಳು ಕ್ಯಾಮೆರಾ ಮುಂದೆಯೇ ಇದು ನಮ್ಮ ಸಂಶೋಧನೆ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ, ಹೀಗಾಗಿ ವಿವಿಯ ಸ್ಪಷ್ಟನೆ ದಾರಿ ತಪ್ಪಿಸುವಂತಿದೆ" ಎಂದು ಕಮ್ಯುನಿಟಿ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರೊಫೆಸರ್ ನೀಡಿದ ವಿಚಿತ್ರ ಸಮರ್ಥನೆ

ಮೊದಲು "ಇದು ನಮ್ಮದೇ ಆವಿಷ್ಕಾರ" ಎಂದು ಹೇಳಿದ್ದ ಕಮ್ಯುನಿಕೇಶನ್ ಪ್ರೊಫೆಸರ್ ನೇಹಾ ಅವರು ನಂತರ ಮಾತು ಬದಲಿಸಿ, "ನಾನು ಕಮ್ಯುನಿಕೇಶನ್ ಪ್ರೊಫೆಸರ್, ನನಗೆ ಎಐ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ನಾನು ಹೇಳಿದ್ದನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಅಥವಾ ನಾನು ಸರಿಯಾಗಿ ಹೇಳಿರಲಿಕ್ಕಿಲ್ಲ" ಎಂದು ವಿಚಿತ್ರ ಸಮರ್ಥನೆ ನೀಡಿದ್ದಾರೆ. ಅಲ್ಲದೆ, ಮಳಿಗೆ ತೆರವುಗೊಳಿಸುವ ಆದೇಶದ ಬಗ್ಗೆ ತಮಗೆ ಅಧಿಕೃತ ಮಾಹಿತಿ ಇಲ್ಲ ಎಂದು ವಿಶ್ವವಿದ್ಯಾಲಯದ ಮತ್ತೊಬ್ಬ ಪ್ರೊಫೆಸರ್ ಐಶ್ವರ್ಯ ಶ್ರೀವಾಸ್ತವ ತಿಳಿಸಿದ್ದಾರೆ.

ಸರ್ಕಾರದ ಕಠಿಣ ನಿಲುವು

ದೇಶದ ಆವಿಷ್ಕಾರಗಳನ್ನು ಪ್ರದರ್ಶಿಸುವ ಇಂತಹ ದೊಡ್ಡ ವೇದಿಕೆಯಲ್ಲಿ ವಿದೇಶಿ ತಂತ್ರಜ್ಞಾನವನ್ನು ಸ್ವದೇಶಿ ಎಂದು ಬಿಂಬಿಸುವುದು ಅಕ್ಷಮ್ಯ ಅಪರಾಧ ಎಂದು ಪರಿಗಣಿಸಿರುವ ಸರ್ಕಾರಿ ಮೂಲಗಳು, ಶೃಂಗಸಭೆಯ ಘನತೆ ಕಾಪಾಡಲು ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಮಳಿಗೆಯನ್ನು ಖಾಲಿ ಮಾಡಲು ಸೂಚಿಸಿವೆ.

Read More
Next Story